ಕನ್ನಡಪ್ರಭ ವಾರ್ತೆ ಉಡುಪಿ
ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗರ್‌ವಾಲ್, ದ.ಕ. ಜಿಲ್ಲೆಯಲ್ಲಿ ಪ್ರತಿಭಟನೆ, ಧರಣಿಗಳಿಗೆ ಅನುಮತಿ ನಿರಾಕರಣೆ ಮಾಡುತ್ತಿದ್ದು, ಸಿಪಿಐಎಂನ 16 ಜನ ಮುಖಂಡರ ಹಾಗೂ ಜನಪರ ಸಂಘಟನೆಯ ಮುಖಂಡರ ಮೇಲೆ ಮೊಕದ್ದಮೆ ಹೂಡಿದ್ದಾರೆ. ಸಂವಿಧಾನದ ಹಕ್ಕುಗಳನ್ನು ದಮನಿಸುತ್ತಿದ್ದಾರೆ. ಬಿಜೆಪಿ, ಸಂಘಪರಿವಾರದ ಬೆಂಗಾವಲಾಗಿ ನಿಂತಿದ್ದಾರೆ. ಆದ್ದರಿಂದ ಅವರನ್ನು ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿ ವಿವಿಧ ಸಂಘಟನೆಗಳು ಇಲ್ಲಿನ ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಒತ್ತಾಯಿಸಲಾಯಿತು.ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಕೂಡಲೇ ಸಿಪಿಐಎಂ ಮುಖಂಡರ ಮೇಲೆ ಹಾಕಿರುವ ಕೇಸನ್ನು ವಾಪಸ್ ಪಡೆಯಬೇಕು, ಅಕ್ರಮ ಮರಳುಗಾರಿಕೆ, ಬೆಟ್ಟಿಂಗ್, ಮಸಾಜ್ ಪಾರ್ಲರ್ ದಂಧೆಕೋರರನ್ನು ಬಂಧುಗಳಂತೆ ನೋಡುವ ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗರವಾಲ್ ಕೂಡಲೇ ತನಿಖೆಗೆ ಒಳಪಡಿಸಬೇಕು, ಇಲ್ಲವಾದರೆ ಮುಂದಿನ ದಿನಗಳಲ್ಲಿ ತೀವ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಲಾಯಿತು.ಪ್ರತಿಭಟನೆಯಲ್ಲಿ ಸಿಪಿಐಎಂ ಉಡುಪಿ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಉಡುಪಿ ವಲಯ ಕಾರ್ಯದರ್ಶಿ ಶಶಿಧರ ಗೊಲ್ಲ, ಜಿಲ್ಲಾ ಸಮಿತಿ ಸದಸ್ಯರಾದ ಕವಿರಾಜ್ ಎಸ್. ಕಾಂಚನ್, ವೆಂಕಟೇಶ್ ಕೋಣಿ, ದಲಿತ ಹಕ್ಕುಗಳ ಸಮಿತಿ ಉಡುಪಿ ಜಿಲ್ಲಾ ಸಂಚಾಲಕ ಸಂಜೀವ ಬಳ್ಕೂರ್, ದಸಂಸ ರಾಜ್ಯ ಸಂಚಾಲಕ ಸುಂದರ್ ಮಾಸ್ತರ್, ಜಿಲ್ಲಾ ಮುಸ್ಲಿಂ ಒಕ್ಕೂಟದ ಮುಖಂಡ ಇದ್ರೀಸ್ ಹೂಡೆ, ಅಜೀಜ್ ಉದ್ಯಾವರ, ನಾಸೀರ್ ಕಾಪು, ಸಮಾನ ಮನಸ್ಕ ಸಂಘಟನೆ ಮುಖಂಡರಾದ ಕೃಷ್ಣ, ಸಂವರ್ಥ ಸಾಹಿಲ್, ದಯಾನಂದ ಕೋಟ್ಯಾನ್, ಸಿಪಿಐಎಂ ಮುಖಂಡರಾದ ನಳಿನಿ ಎಸ್., ಸೈಯ್ಯದ್ ಅಲಿ, ರಮೇಶ್ ಉಡುಪಿ, ಮೋಹನ್, ಸದಾಶಿವ ಪೂಜಾರಿ, ಮುರಳಿ, ರಮೇಶ್ ಶೇರಿಗಾರ ಮತ್ತಿತರರು ಉಪಸ್ಥಿತರಿದ್ದರು.