
ಗದಗ: ಸರ್ಕಾರಿ ಕೆಲಸ ದೇವರ ಕೆಲಸ ಎಂಬ ಸಾಲು ಬರೀ ಫಲಕಕ್ಕೆ ಸೀಮಿತವಾಗಬಾರದು. ಸಾರ್ವಜನಿಕರಿಗೆ ಸೇವೆ ಸಲ್ಲಿಸುವುದು ಮತ್ತು ಅವರ ಸಮಸ್ಯೆಗಳಿಗೆ ಕಾನೂನಾತ್ಮಕವಾಗಿ ಸ್ಪಂದಿಸುವುದು ಪ್ರತಿಯೊಬ್ಬ ನೌಕರನ ಆದ್ಯ ಕರ್ತವ್ಯವಾಗಿದೆ ಎಂದು ಉಪಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ ಅವರು ಅಧಿಕಾರಿಗಳಿಗೆ ನೀತಿಪಾಠ ಹೇಳಿದರು.
ಸಾರ್ವಜನಿಕರ ಅರ್ಜಿಗಳನ್ನು ಕಾಲಮಿತಿಯೊಳಗೆ ಶೀಘ್ರವಾಗಿ ವಿಲೇವಾರಿ ಮಾಡಬೇಕು. ಒಂದು ವೇಳೆ ಈ ಪ್ರಕ್ರಿಯೆಯಲ್ಲಿ ತೊಡಕಿದ್ದರೆ ಸಾರ್ವಜನಿಕರಿಗೆ ಸೂಕ್ತ ಉತ್ತರ ನೀಡಿ, ಅವರು ಎಲ್ಲಿ ಮೇಲ್ಮನವಿ ಸಲ್ಲಿಸಬೇಕೆಂದು ಸರಿಯಾಗಿ ಮಾರ್ಗದರ್ಶನ ಮಾಡಬೇಕು. ಪಾರದರ್ಶಕ ಆಡಳಿತಕ್ಕೆ ಪ್ರಥಮಾದ್ಯತೆ ನೀಡಬೇಕು. ಬಾತೃತ್ವ ಭಾವನೆ ಅಳವಡಿಸಿಕೊಂಡು ಜೀವನ ನಿರ್ವಹಣೆ ಮಾಡಬೇಕು ಎಂದರು.
ಪ್ರಾಮಾಣಿಕ ಅಧಿಕಾರಿಗಳ ವಿರುದ್ಧ ಸುಳ್ಳು ದೂರು ದಾಖಲಿಸಬಾರದು. ಇದರಿಂದ ಅವರ ಮನಸ್ಸಿಗೆ ತೀವ್ರ ನೋವಾಗಿ, ಒಳ್ಳೆಯ ಕೆಲಸಗಾರರು ಸಹ ನಿರಾಶೆಗೊಳ್ಳುವ ಸನ್ನಿವೇಶ ಸೃಷ್ಟಿಯಾಗುತ್ತದೆ. ಸಾರ್ವಜನಿಕರು ಲೋಕಾಯುಕ್ತದ ಕಚೇರಿಗೆ ಸಲ್ಲಿಸುವ ದೂರು ಅರ್ಜಿಗಳ ವ್ಯಾಪ್ತಿಯನ್ನು ತಿಳಿದುಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಹಿರಿಯ ನ್ಯಾಯಾಧೀಶರು ಹಾಗೂ ಆಪ್ತ ಕಾರ್ಯದರ್ಶಿ ಕಿರಣ್ ಪಿ.ಎಂ. ಪಾಟೀಲ್, ಸುನೀಲಕುಮಾರ್ ಆರ್., ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಎಸ್ಪಿ ರೋಹನ ಜಗದೀಶ್, ಡಿಸಿಎಫ್ ಸಂತೋಷ್ ಕೆ., ಡಿವೈಎಸ್ಪಿ ಮಹಾಂತೇಶ ಸಜ್ಜನ, ಲೋಕಾಯುಕ್ತ ಪೊಲೀಸ್ ಅಧಿಕ್ಷಕ ಎಸ್.ಟಿ. ಸಿದ್ದಲಿಂಗಪ್ಪ, ಉಪಾಧಿಕ್ಷಕ ಲೋಕೇಶ್ ಉಪಸ್ಥಿತರಿದ್ದರು. ನಂತರ ಸಾರ್ವಜನಿಕರಿಂದ ಲೋಕಾಯುಕ್ತರ ಕಚೇರಿಯಲ್ಲಿ ದಾಖಲಾದ ದೂರು ಅರ್ಜಿಗಳ ವಿಲೇವಾರಿ ಕುರಿತು ವಿಚಾರಣೆ ನಡೆಸಲಾಯಿತು.