ಹಳಿಯಾಳ: ರಾಜ್ಯದಲ್ಲಿ ಗೋಮಾತೆಯನ್ನು ಬರ್ಬರವಾಗಿ ಹತ್ಯೆಗೈದ ಕುಕೃತ್ಯಗಳು ಮುಂದುವರೆದಿದ್ದು, ಅಯ್ಯಪ್ಪ ಮಾಲಾಧಾರಿಗಳ ಮೇಲೆ ಹಲ್ಲೆ ನಡೆಸಿ ಧಾರ್ಮಿಕ ಆಚರಣೆಗಳ ಧಕ್ಕೆ ತಂದರೂ ಕಾಂಗ್ರೆಸ್ ಸರ್ಕಾರದ ಮುಂದೆ ಈ ಗಂಭೀರ ವಿಷಯಗಳು ನಗಣ್ಯವಾಗಿವೆ ಎಂದು ಹಳಿಯಾಳ ಬಿಜೆಪಿ ಘಟಕ ಆಕ್ರೋಶ ವ್ಯಕ್ತಪಡಿಸಿದೆ.
ಸೋಮವಾರ ಪಟ್ಟಣದ ಗಣೇಶ ಕಲ್ಯಾಣ ಮಂಟಪದಲ್ಲಿ ಆಯೋಜಸಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕ ಸುನೀಲ ಹೆಗಡೆ ಹಾಗೂ ಮಾಜಿ ವಿ.ಪ ಸದಸ್ಯ ಎಸ್.ಎಲ್. ಘೋಟ್ನೇಕರ ಅವರು ರಾಜ್ಯ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದರು.ರಾಜ್ಯದಲ್ಲಿನ ಕಾಂಗ್ರೆಸ್ ಹಿಂದೂ ಧರ್ಮೀಯರ ಭಾವನೆಗಳಿಗೆ, ಸನಾತನ ಧರ್ಮಕ್ಕೆ ಆಗುತ್ತಿರುವ ಅಪಮಾನ, ಧಕ್ಕೆ ತಡೆಯಬೇಕು ಎಂದು ಆಗ್ರಹಿಸಿದರು.
ದಿವಾಳಿ ಹೊಡೆದ ಸರ್ಕಾರ:ವಿಪ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ ಮಾತನಾಡಿ, ರಾಜ್ಯದಲ್ಲಿ ಸರ್ಕಾರ ದಿವಾಳಿಯಾಗಿದ್ದು, ಗ್ಯಾರಂಟಿ ಹೆಸರಿನಲ್ಲಿ ಈ ಸರ್ಕಾರ ಅಭಿವೃದ್ಧಿಯನ್ನೇ ಮರೆತಿರುವಂತಿದೆ ಎಂದು ಕಿಡಿಕಾರಿದರು.ಬಹುಮತದಿಂದ ಅಧಿಕಾರಕ್ಕೆ ಬಂದಿರುವುದರಿಂದ ಕಾಂಗ್ರೆಸ್ ಸರ್ಕಾರಕ್ಕೆ ಗರ್ವ ಹೆಚ್ಚಾಗಿದೆ, ಜನಪರ ಅಭಿವೃದ್ಧಿ ಮರೆತಿರುವ ಕಾಂಗ್ರೆಸ್ ಸರ್ಕಾರ ನಿತ್ಯವೂ ಮುಖ್ಯಮಂತ್ರಿ ಖುರ್ಚಿ ಬದಲಾವಣೆ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ ಪತ್ರಿಕಾ ಹೇಳಿಕೆಗಳನ್ನೇ ನೀಡುವುದರಲ್ಲಿ ಕಾಲ ಕಳೆಯುತ್ತಿದೆ. ಅಭಿವೃದ್ಧಿ ಕಾಮಗಾರಿಯ ಬಿಲ್‌ಗಳನ್ನು ಮಾಡಲು ಈ ಸರ್ಕಾರದ ಬಳಿ ಹಣವೇ ಇಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ ಕಾಮಗಾರಿಯ ಗುತ್ತಿಗೆಯನ್ನು ಪಡೆಯಲು ಎಲ್ಲರೂ ಹಿಂದೇಟು ಹಾಕುತ್ತಿದ್ದು, ಸಾವಿರಾರೂ ಕೋಟಿ ಬಾಕಿಯನ್ನು ಗುತ್ತಿಗೆದಾರರಿಗೆ ಈ ಸರ್ಕಾರ ನೀಡಬೇಕಾಗಿದೆ ಎಂದು ಆರೋಪಿಸಿದರು.
ಬೆಳಗಾವಿಯಲ್ಲಿ ಬಾಪೂಜಿ ಅಭಿಯಾನ ಯಾತಕ್ಕಾಗಿ?ಮಾಜಿ ಶಾಸಕ ಸುನೀಲ ಹೆಗಡೆ ಮಾತನಾಡಿ, ಜಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲುನ್ನು ಕತ್ತರಿಸಿದ ಆಘಾತಕಾರಿ ಘಟನೆ ಮರೆಮಾಚುವ ಮುನ್ನವೇ ಜಿಲ್ಲೆಯಲ್ಲಿ ಗರ್ಭ ಧರಸಿದ್ದ ಹಸುವನ್ನೇ ಕೊಂದು ಪೈಶಾಚಿಕ ಕುಕೃತ್ಯ ನಡೆದಿದೆ. ರಾಜ್ಯ ಸರ್ಕಾರ ಈ ಪ್ರಕರಣದಲ್ಲಿ ಭಾಗಿಯಾದವರ ಮೇಲೆ ಗೋ ಹತ್ಯೆ ನಿಷೇಧ ಕಾಯಿದೆಯಡಿ ಕಾನೂನು ಕ್ರಮ ಕೈಗೊಳ್ಳಬೇಕು. ಬಾಪೂಜಿಯವರ ತತ್ವದಂತೆ ಎಂದೂ ಆಡಳಿತ ನಡೆಸದ, ಅವರ ತತ್ವಗಳನ್ನು ಅನುಸರಿಸದ ಕಾಂಗ್ರೆಸ್ ಬೆಳಗಾವಿಯಲ್ಲಿ ಮಂಗಳವಾರ ಗಾಂಧೀಜಿಯವರ ಹೆಸರಿನಲ್ಲಿ ಅಭಿಯಾನ ನಡೆಸಲು ಮುಂದಾಗಿದ್ದು ಯಾತಕ್ಕಾಗಿ ಎಂದು ಪ್ರಶ್ನಿಸಿದರು.
ಮಾಲಾಧಾರಿಗಳ ಮೇಲೆ ಹಲ್ಲೆ:ಹಿಂದೂ ಧರ್ಮೀಯರ ಪವಿತ್ರ ಆಚರಣೆಯಾದ ಅಯ್ಯಪ್ಪಸ್ವಾಮಿ ಮಾಲಾಧಾರಣೆ ಮಾಡಿದ ಭಕ್ತಾಧಿಗಳ ಮೇಲೆ ಸೀಬರ್ಡ್ ರಕ್ಷಣಾ ಇಲಾಖೆಯ ಸಿಬ್ಬಂದಿ ನಡೆಸಿದ ಹಲ್ಲೆಯನ್ನು ನಾವು ಖಂಡಿಸುತ್ತೇವೆ. ದೇಶ ಸಂರಕ್ಷಣೆ, ಜನರ ರಕ್ಷಣೆ ಮಾಡಬೇಕಾದವರೇ ಹಲ್ಲೆ ಮಾಡುವ ಮೂಲಕ ರಕ್ಷಣಾ ಇಲಾಖೆಗೆ ಅವಮಾನ ಮಾಡಿದ್ದಾರೆ. ನಮಗೆ ಭಾರತೀಯ ಸೇನೆಯ ಬಗ್ಗೆ ಅಪಾರ ಗೌರವವಿದೆ, ಹೆಮ್ಮೆಯಿದೆ. ಇಂತಹ ಕೆಲವೇ ಕೆಲವರು ನಡೆಸುವ ಕುಕೃತ್ಯದ ಪರಿಣಾಮ ಇಡೀ ಸೇನೆಯ ಹೆಸರಿಗೆ ಧಕ್ಕೆಯಾಗುತ್ತಿದೆ. ಅದಕ್ಕಾಗಿ ಸರ್ಕಾರ ಈ ಕುಕೃತ್ಯದಲ್ಲಿ ಭಾಗಿಯಾದವರ ಮೇಲೆ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮುಡಾ ಹಗರಣದಲ್ಲಿ ನಡೆದ ಅವ್ಯವಹಾರಗಳು, ವ್ಯಾಪಕ ಭ್ರಷ್ಟಾಚಾರದ ಪ್ರಕರಣಗಳು ಬಟಾಬಯಲಾಗಿದ್ದು, ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ನ್ಯಾಯಬದ್ಧವಾದ ತನಿಖೆಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಘಟಕ ಅಧ್ಯಕ್ಷ ವಿಠ್ಠಲ ಸಿದ್ದಣ್ಣವರ, ಮುಖಂಡರಾದ ಸಂತೋಷ ಘಟಕಾಂಬ್ಳೆ, ಸೋನಪ್ಪ ಸುಣಕಾರ, ಉದಯ ಹೂಲಿ, ಶಂಕರ ಗಳಗಿ, ಆಕಾಶ ಉಪ್ಪಿಣ, ಯಲ್ಲಪ್ಪ ಹೊನ್ನೋಜಿ, ಹನುಮಂತ, ಜಯಲಕ್ಷ್ಮೀ ಚವ್ಹಾನ, ವಾಮನ ಮಿರಾಶಿ, ಸೋಮೇಶ ಹುಂಡೇಕರ ಇದ್ದರು,