ಕನ್ನಡಪ್ರಭ ವಾರ್ತೆ ಬೀದರ್
ನಗರದಲ್ಲಿ ವಚನ ಸೌಹಾರ್ದ ಸಹಕಾರ ಸಂಘದ ಕಾರ್ಯಚಟುವಟಿಕೆ ಹಾಗೂ ಷೇರು ಪ್ರಮಾಣ ಪತ್ರ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಹುಟ್ಟಿನಿಂದ ಸಾಯುವವರೆಗೆ ಸಹಕಾರ ಅನಿವಾರ್ಯ. ನೂರಾರು ಜನರು ಒಗ್ಗಟ್ಟಿನಿಂದಾಗಿ ಹತ್ತಾರು ಜನರಿಗೆ ಸಂಧಿಗ್ಧತೆಯ ಕಾಲದಲ್ಲಿ ಸಹಕರಿಸುವುದೇ ಸೌಹಾರ್ದತೆಯ ಸಹಕಾರ ಎಂದು ನುಡಿದರು.
ಸಹಕಾರದ ಮೂಲ ಆಶಯ ಸಹಕಾರಿಗಳ ಅಭಿವೃದ್ಧಿಯ ಜೊತೆಗೆ ಸಮಾಜ ಪರಿವರ್ತನೆಗೊಳಿಸುವಿಕೆ. ಶೋಷಣೆ ಮುಕ್ತ ಸಮಾಜ ನಿರ್ಮಾಣಗೊಂಡಾಗ ಬಸವಣ್ಣನವರ ಆಶಯ ಪೂರೈಸಿದಂತಾಗುತ್ತದೆ. ಶೇರುದಾರರು ಸಾಲಕ್ಕೆ ಸೀಮಿತಗೊಳ್ಳದೆ ಠೇವಣಿದಾರರಾಗಿ ಸಾಮಾಜಿಕ ಭದ್ರತೆ ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು.ಜಿಲ್ಲೆಯಲ್ಲಿ 160 ಸಂಘಗಳು ನೋಂದಣಿಯಾದರೂ 10 ಸಂಘಗಳು ಮಾತ್ರ ಕೆಲಸ ನಿರ್ವಹಿಸುತ್ತಿವೆ. ವಚನ ಸೌಹಾರ್ದ ಹೆಸರಿಗೆ ತಕ್ಕಂತೆ ನಿರ್ದೇಶಕರು, ಕಾವಲುಗಾರರಾಗಿ ಶೇರುದಾರರಿಗೆ ಸಹಕರಿಸಬೇಕು. ಶೇರುದಾರರು ನಿಗದಿತ ಅವಧಿಯೊಳಗೆ ಬದ್ಧತೆಯಿಂದ ಪಡೆದ ಹಣ ಹಿಂತಿರುಗಿಸಿ ತಮ್ಮ ಕರ್ತವ್ಯ ನಿಭಾಯಿಸಬೇಕೆಂದು ಸಲಹೆ ನೀಡಿದರು.
ಸಂಘದ ಉಪಾಧ್ಯಕ್ಷರಾದ ಪ್ರಕಾಶ ಗಂದಿಗುಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಹಣಕಾಸು ನಿರ್ವಹಣೆ ಹಾಗೂ ವಚನಗಳಿಗೆ ಸಾಮಿಪ್ಯವಿದೆ. ಜಗತ್ತಿನ ಏಳ್ಗೆ ಹಣಕಾಸು ನಿರ್ವಹಣೆಯ ಮೇಲೆ ಅವಲಂಭಿಸಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಷ್ಟದ ಬದುಕಿಗೆ ಸ್ಪಂದಿಸಬೇಕೆಂಬ ಉದ್ದೇಶ ನಮ್ಮದಾಗಿದೆ ಎಂದು ನುಡಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ರಾಜೇಂದ್ರಕುಮಾರ ಗಂದಗೆ ಮಾತನಾಡಿ, ವಚನ ಸೌಹಾರ್ದ ಸಹಕಾರ ಸಂಘದಲ್ಲಿ ಎಲ್ಲರೂ ವಚನ ಬದ್ಧತೆ ಉಳ್ಳವರಾಗಿದ್ದಾರೆ. ಅನೇಕ ಹಿರಿಯರು ಅಪ್ಪಟ ಬಸವ ಪರಂಪರೆ ವೈಚಾರಿಕತೆ ನೆಲೆಗಟ್ಟಿನ ಹಿರಿಯರು ಒಂದೆಡೆಯಾದರೆ ಯುವಕರ ಸಮೂಹ ಮತ್ತೊಂದೆಡೆಯಾಗಿದೆ. ಹೀಗಾಗಿ ಸಮನ್ವಯತೆಯಿಂದ ಅನೇಕ ಉದ್ಯೋಗ ಹಾಗೂ ಸ್ವಾವಲಂಬಿ ಜೀವನ ನಡೆಸಲು ಚಿಕ್ಕ-ಚಿಕ್ಕ ಬೀದಿ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ ಎಂದು ತಮ್ಮ ಅನುಭವ ಹಂಚಿಕೊಂಡರು.ಶಿವಕುಮಾರ ಸಾಲಿ ಅಧ್ಯಕ್ಷತೆ ವಹಿಸಿದರೆ ಬಸವಕಲ್ಯಾಣ ಬಸವಧರ್ಮ ಪೀಠದ ಜಗದ್ಗುರು ಸಿದ್ಧರಾಮೇಶ್ವರ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಡಾ. ಸುರೇಶ ಪಾಟೀಲ್ ಸ್ವಾಗತಿಸಿದರೆ, ಪ್ರಕಾಶ ಮಠಪತಿ ವಂದಿಸಿದರೆ, ಶಿವಶಂಕರ ಟೋಕರೆ ನಿರೂಪಿಸಿದರು. ಸಮಾರಂಭದಲ್ಲಿ ನ್ಯಾಯವಾದಿಗಳಾದ ಜಗನ್ನಾಥ ಸೋರಳ್ಳಿ, ಸಂಜೀವಕುಮಾರ ಪಾಟೀಲ್, ವೀರಶೆಟ್ಟಿ ಕಾಮಣ್ಣ, ಅಮೃತ ಹೊಸಮನಿ ಅವರಿಗೆ ಗೌರವಿಸಲಾಯಿತು.
ಸಂಘದ ನಿರ್ದೇಶಕರಾಗಿ ಆಯ್ಕೆಯಾದ ಅಲ್ಲಮಪ್ರಭು ನಾವದಗೇರೆ, ಶಿವಶಂಕರ ಟೋಕರೆ, ಮಲ್ಲಿಕಾರ್ಜುನ ಸ್ವಾಮಿ, ಸಂಜೀವಕುಮಾರ ಬಿರಾದಾರ, ಪ್ರದೀಪ ವಿಸಾಜಿ, ಸುನೀಲಕುಮಾರ ಭಂಡೆ, ಸದಾನಂದ ಹಂಗರಗಿಕರ, ಶರಣಬಸಪ್ಪ ಟೊಳ್ಳೆ, ಶ್ವೇತಾ ಸಂಗಾರೆಡ್ಡಿ, ಪ್ರತಿಭಾ ವೀರಪ್ಪ ಜೀರ್ಗೆ, ಮಹಾದೇವಿ ಗುರುಶಾಂತಪ್ಪ ನಿಗದಳ್ಳಿ ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆನಂದಕುಮಾರ ಬೆಡಸೂರೆ ಅವರಿಗೆ ಸನ್ಮಾನಿಸಲಾಯಿತು. ಕೊನೆಯಲ್ಲಿ ಸಾಂಕೇತಿಕವಾಗಿ 20 ಜನರಿಗೆ ಶೇರು ಪ್ರಮಾಣ ಪತ್ರ ವಿತರಿಸಲಾಯಿತು.