ಬುದ್ಧಿವಂತರ ಜಿಲ್ಲೆ ಅಭಿವೃದ್ಧಿ ಕಡೆ ಹೆಜ್ಜೆ ಹಾಕಲಿ: ಪದ್ಮರಾಜ್‌

KannadaprabhaNewsNetwork | Published : Apr 12, 2024 1:05 AM

ಸಾರಾಂಶ

ನಾವೆಲ್ಲರೂ ಮೌನವಾದರೆ ಜಿಲ್ಲೆಯು ಅಭಿವೃದ್ಧಿಯಲ್ಲಿ ಇದೇ ರೀತಿ ಹಿಂದೆ ಬೀಳಲಿದೆ. ಹಾಗಾಗಿ ಪ್ರಚೋದನೆಯ ಮಾತುಗಳಿಗೆ ಒಳಗಾಗದೆ, ಜಾಗೃತರಾಗಿ ಮತ ಚಲಾಯಿಸಬೇಕು. ದಕ್ಷಿಣ ಕನ್ನಡ ಜಿಲ್ಲೆ ಅಭಿವೃದ್ಧಿ ಪಥದತ್ತ ಸಾಗಬೇಕಿದೆ ಎಂದು ಪದ್ಮರಾಜ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಸ್ವಾತಂತ್ರ್ಯಾನಂತರ 40 ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಕಾಂಗ್ರೆಸ್ ಸಂಸದರು ನೀಡಿರುವ ಕೊಡುಗೆ‌ ಹಾಗೂ ನಂತರದ 33 ವರ್ಷ ಬಿಜೆಪಿ ಸಂಸದರು ನೀಡಿರುವ ಕೊಡುಗೆಗಳನ್ನು ತುಲನೆ ಮಾಡಿದರೆ ಜಿಲ್ಲೆಯ ಅಭಿವೃದ್ಧಿ ವಿಚಾರ ಅರ್ಥವಾಗುತ್ತದೆ. ಬುದ್ಧಿವಂತರ ಜಿಲ್ಲೆ ಅಭಿವೃದ್ಧಿ ಕಡೆ ಹೆಜ್ಜೆ ಹಾಕಬೇಕಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಹೇಳಿದ್ದಾರೆ.

ಆಲಂಕಾರು ಕಾಂಗ್ರೆಸ್ ಬಹಿರಂಗ ಚುನಾವಣಾ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆ ಪ್ರಾರಂಭವಾದಾಗಿನಿಂದ ಬಿಜೆಪಿ ಸಂಸದರ ಸಾಧನೆ ಬಗ್ಗೆ ಕೇಳುತ್ತಿದ್ದೇವೆ. ಆದರೆ ಇದುವರೆಗೆ ಯಾರೂ ಇದಕ್ಕೆ ಉತ್ತರಿಸಿಲ್ಲ ಎಂದು ಹೇಳಿದರು.

ನಾವೆಲ್ಲರೂ ಮೌನವಾದರೆ ಜಿಲ್ಲೆಯು ಅಭಿವೃದ್ಧಿಯಲ್ಲಿ ಇದೇ ರೀತಿ ಹಿಂದೆ ಬೀಳಲಿದೆ. ಹಾಗಾಗಿ ಪ್ರಚೋದನೆಯ ಮಾತುಗಳಿಗೆ ಒಳಗಾಗದೆ, ಜಾಗೃತರಾಗಿ ಮತ ಚಲಾಯಿಸಬೇಕು. ದಕ್ಷಿಣ ಕನ್ನಡ ಜಿಲ್ಲೆ ಅಭಿವೃದ್ಧಿ ಪಥದತ್ತ ಸಾಗಬೇಕಿದೆ ಎಂದು ಪದ್ಮರಾಜ್‌ ಹೇಳಿದರು.

ಜಿಲ್ಲೆಯಲ್ಲಿ ಬಿಜೆಪಿ ಸೋಲುತ್ತದೆ ಎನ್ನುವುದು ಬಿಜೆಪಿಗರಿಗೆ ಸ್ಪಷ್ಟವಾಗಿ ಅರಿವಾಗಿದೆ. ಅದಕ್ಕಾಗಿ ಅಪಪ್ರಚಾರದ ಮಾರ್ಗ ಹಿಡಿದಿದ್ದಾರೆ. ಮುಂದಿನ ದಿನ ಅಪಪ್ರಚಾರ ಇನ್ನೂ ಹೆಚ್ಚಾಗಬಹುದು. ಆದರೆ ಕಾರ್ಯಕರ್ತರು ಎದೆಗುಂದದೆ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳಿ ಎಂದು ಕರೆ ನೀಡಿದರು.

ಜಿಲ್ಲೆಗೆ ನ್ಯಾಯ ಒದಗಿಸಿಲ್ಲ:

ಹೆದ್ದಾರಿ ಅಭಿವೃದ್ಧಿ ಮಾಡುವಾಗ ಸರ್ವಿಸ್ ರಸ್ತೆಯನ್ನು ಸರಿಪಡಿಸಿಕೊಡಬೇಕು ಎಂಬ ನಿಯಮವಿದೆ. ಆದರೆ ನಮ್ಮ ಜಿಲ್ಲೆಯಲ್ಲಿ ಮಾತ್ರ ಇದು ಅನುಷ್ಠಾನ ಆಗುತ್ತಿಲ್ಲ. ಜಿಲ್ಲೆಯ ಹೆದ್ದಾರಿಗಳಲ್ಲಿ ವಾಹನದಲ್ಲಿ ಸಂಚರಿಸುವುದೆಂದರೆ ಬಹು ತ್ರಾಸದಾಯಕವಾಗಿದೆ. ಹೀಗಿದ್ದರೂ ಬಿಜೆಪಿ ಸಂಸದರು ಮೌನವಾಗಿದ್ದಾರೆ. ಎಂಡೋಸಲ್ಫಾನ್‌ ಸಂತ್ರಸ್ತರಿಗೆ ನ್ಯಾಯ ಕೊಡಿಸಲು ಆಗಿಲ್ಲ ಎಂದರು.

ಇದೇ ಸಂದರ್ಭ ಕೇಶವ ದೇವಾಡಿಗ, ರಮೇಶ್, ಜಗದೀಶ್ ಅವರನ್ನು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಳಿಸಲಾಯಿತು. ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾ ಉಸ್ತುವಾರಿ ಬಿ.ರಮಾನಾಥ ರೈ, ಸುಳ್ಯ ಉಸ್ತುವಾರಿ ಮಮತಾ ಗಟ್ಟಿ, ಸಂಯೋಜಕರಾದ ಶಕುಂತಳಾ ಶೆಟ್ಟಿ, ಜಿ. ಕೃಷ್ಣಪ್ಪ, ಡಾ. ರಘು, ಚುನಾವಣಾ ವೀಕ್ಷಕ ಜಯಪ್ರಕಾಶ್ ರೈ, ಕಡಬ ಬ್ಲಾಕ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಪ್ರಚಾರ ಸಮಿತಿಯ ಪಿ.ಪಿ. ವರ್ಗೀಸ್, ವೆಂಕಪ್ಪ ಗೌಡ, ಗೋಪಾಲಕೃಷ್ಣ ಪಡ್ಡಿಲ್ಲಾಯ, ಪ್ರವೀಣ್ ಕೆಡೆಂಜಿ, ಕಡಬ ಉಸ್ತುವಾರಿ ಪಿ.ಪಿ. ವರ್ಗೀಸ್, ಕಡಬ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾರದಾ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಯತೀಸ್ ಕುಮಾರ್ ಬಾನಡ್ಕ, ತಾಪಂ ಮಾಜಿ ಸದಸ್ಯ ಫಝಲ್ ಮತ್ತಿತರರಿದ್ದರು.

Share this article