ಸಿಎಂ ಸಿದ್ದರಾಮಯ್ಯಗೆ ನಾಲಾಯಕ್ ಎಂದಿದ್ದಕ್ಕೆ ಆಕ್ರೋಶ । ಜನಾರ್ದನರೆಡ್ಡಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಕೊಪ್ಪಳಗಂಗಾವತಿ ಶಾಸಕ ಗಾಲಿ ಜನಾರ್ದನರೆಡ್ಡಿ ಸಿಎಂ ಸಿದ್ದರಾಮಯ್ಯ ಅವರಿಗೆ ನಾಲಾಯಕ್ ಸಿಎಂ ಎಂದಿರುವುದರಿಂದ ಕಾಂಗ್ರೆಸ್ ನಾಯಕರು ಆಕ್ರೋಶಗೊಂಡು ಗುರುವಾರ ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಜನಾರ್ಜನ ರೆಡ್ಡಿ ಫೋಟೋ ಪ್ರತಿಗಳಿಗೆ ಚಪ್ಪಲಿಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದರು.ರೆಡ್ಡಿ ಪ್ರತಿಕೃತಿಗೆ ಬೆಂಕಿ ಹಚ್ಚಿ, ಭಸ್ಮ ಮಾಡಿ, ಕಿಡಿಕಾರಿದರು. ಕಾಂಗ್ರೆಸ್ ಪಕ್ಷದ ಮುಖಂಡರು ಜನಾರ್ದನರೆಡ್ಡಿ ಪೋಟೋಗಳಿಗೆ ಉಗುಳಿದರು.
ಮಣ್ಣಿನ ಕಳ್ಳ ರೆಡ್ಡಿ:ಪ್ರತಿಭಟನಾಕಾರರನ್ನು ಉದ್ಧೇಶಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಶಾಸಕ ಜನಾರ್ದನ್ ರೆಡ್ಡಿ ಓರ್ವ ಮಣ್ಣಿನ ಕಳ್ಳ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಹತ್ತು ವರ್ಷದಲ್ಲಿ ತೈಲ ಬೆಲೆಯನ್ನು ನೂರು ರೂ. ದಾಟಿಸಿದರು. ಜನಾರ್ದನ್ ರೆಡ್ಡಿ ಬಿಜೆಪಿ ಸೇರಿದ ಹಿನ್ನೆಲೆ ಆ ಪಕ್ಷದ ನಾಯಕರ ಓಲೈಕೆಗೆ ಅಬ್ಬರಿಸುತ್ತಿದ್ದಾರೆ. ಜನಾರ್ದನ್ ರೆಡ್ಡಿ ನಮ್ಮ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲಿನ ಉಗುರಿನಲ್ಲಿನ ಧೂಳಿಗೂ ಸಮ ಇಲ್ಲ. ರೆಡ್ಡಿ ಅವರೇ ಇದು ಬಳ್ಳಾರಿಯಲ್ಲ, ಕೊಪ್ಪಳ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸುಳ್ಳು ಆಶ್ವಾಸನೆ ಕೊಟ್ಟು ನೀವು ಶಾಸಕರಾಗಿ ಆಯ್ಕೆಯಾಗಿರುವ ಬಗ್ಗೆ ಜನತೆಗೆ ಗೊತ್ತಾಗಿದೆ. ಪರಿಣಾಮ ಗಂಗಾವತಿಯಲ್ಲಿ ಜನ ಲೋಕಸಭಾ ಚುನಾವಣೆಯಲ್ಲಿ 16,000 ಮತಗಳ ಮುನ್ನಡೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಜನ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಛೇಡಿಸಿದರು.ಜನಾರ್ದನ್ ರೆಡ್ಡಿ ಅವರು ನಮ್ಮ ಬಳಿ ಅನುದಾನಕ್ಕಾಗಿ ಅಲೆದಾಡಿದರು. ಅನುಕೂಲ ಪಡೆದು ನಮ್ಮ ನಾಯಕರ ವಿರುದ್ಧವೇ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಈ ಕೂಡಲೇ ರೆಡ್ಡಿ ಅವರು ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ರೆಡ್ಡಿ ವಿರುದ್ಧ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಲೋಕಸಭಾ ಚುನಾವಣೆಯಲ್ಲಿ ಕೊಪ್ಪಳ ಜನ ಕಾಂಗ್ರೆಸ್ ಪರ ತೀರ್ಪು ನೀಡುವ ಮೂಲಕ ಜನಾರ್ದನ್ ರೆಡ್ಡಿ ಅವರಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಸಿದ್ದರಾಮಯ್ಯ ದೇಶ ಮೆಚ್ಚಿದ ನಾಯಕ. ಗ್ಯಾರಂಟಿ ಯೋಜನೆಗಳ ಮೂಲಕ ಬಡವರ ಬದುಕಿಗೆ ಆಸರೆಯಾಗಿದ್ದಾರೆ. ಇಂತಹ ನಾಯಕನ ಬಗ್ಗೆ ಮಾತನಾಡಲು ಇವರಿಗೆ ಯಾವುದೇ ನೈತಿಕತೆ ಇಲ್ಲ ಎಂದರು.ಸಂಸದ ರಾಜಶೇಖರ್ ಹಿಟ್ನಾಳ್ ಮಾತನಾಡಿ, ರೆಡ್ಡಿ ಜೈಲಿನಲ್ಲಿ ಇರಲು ಲಾಯಕ್. ಅವರು ಜನರ ಸೇವೆ ಮಾಡಲು ಯೋಗ್ಯರಲ್ಲ. ಬಾಯಿಗೆ ಬಂದಂತೆ ಮಾತನಾಡುವುದನ್ನು ಬಿಡಬೇಕು ಮತ್ತು ಅದರಲ್ಲೂ ಸಿಎಂ ಸಿದ್ದರಾಮಯ್ಯ ಅವರ ಕುರಿತು ಮಾತನಾಡುವಾಗ ಎಚ್ಚರದಿಂದ ಇರಬೇಕು ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ ಮಾತನಾಡಿ, ರೆಡ್ಡಿಯನ್ನು ಇಲ್ಲಿಂದ ತೊಲಗಿಸುವವರೆಗೂ ನಾವು ಹೋರಾಟ ಮಾಡುತ್ತೇವೆ. ಸಿಎಂ ಸಿದ್ದರಾಮಯ್ಯ ಅವರ ಕುರಿತು ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ಅದು ಬಿಟ್ಟು ಈ ರೀತಿಯಲ್ಲ ನಾಲಾಯಕ್ ಎಂದರೇ ನಾವು ಸಹಿಸಿಕೊಳ್ಳುವುದಿಲ್ಲ. ಗಂಗಾವತಿ ಕ್ಷೇತ್ರದಿಂದ ಹೋಗುವವರೆಗೂ ಹೋರಾಟ ಮಾಡುತ್ತೇವೆ. ಗಂಗಾವತಿಯಲ್ಲಿ ಜೂ. 20ರಂದು ಪ್ರತಿಭಟನೆ ಮಾಡುವುದಾಗಿ ಹೇಳಿದರು.ಮಾಜಿ ಸಂಸದ ಕರಡಿ ಸಂಗಣ್ಣ, ಶಾಸಕ ರಾಘವೇಂದ್ರ ಹಿಟ್ನಾಳ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣರಡ್ಡಿ ಗಲಬಿ, ನಗರ ಬ್ಲಾಕ್ ಅಧ್ಯಕ್ಷ ಕಾಟನ್ ಪಾಶಾ, ಮುಖಂಡರಾದ ಭರಮಪ್ಪ ಹಟ್ಟಿ, ರವಿ ಕುರಗೋಡ, ಜ್ಯೋತಿ ಗೊಂಡಬಾಳ, ಎಸ್.ಬಿ. ನಾಗರಳ್ಳಿ, ಕೃಷ್ಣ ಇಟ್ಟಂಗಿ, ಮಾಲತಿ ನಾಯಕ್, ಗೂಳಪ್ಪ ಹಲಿಗೇರಿ, ಅಕ್ಬರ್ ಪಲ್ಟಾನ್ ಮೊದಲಾದವರು ಇದ್ದರು.