ಜಿ.ಸೋಮಶೇಖರ
ಕೊಟ್ಟೂರು ಪಟ್ಟಣ, ತಾಲೂಕಿನ ಗ್ರಾಮಗಳ ಜನತೆ ಹಲವು ಕಾರಣಗಳಿಗಾಗಿ ಸಮುದಾಯ ಆರೋಗ್ಯ ಕೇಂದ್ರವನ್ನೇ ನೆಚ್ಚಿಕೊಳ್ಳುವಂತಾಗಿದೆ. ದಿನಕ್ಕೆ 200ರಿಂದ 300 ಜನ ಆರೋಗ್ಯ ತಪಾಸಣೆಗೆ ಇಲ್ಲಿನ ಸಮುದಾಯ ಕೇಂದ್ರಕ್ಕೆ ಬರುತ್ತಾರೆ. ಜ್ವರ, ನೆಗಡಿ, ಕೆಮ್ಮಿನಂತಹ ಕಾಯಿಲೆಗಳಿಗೆ ಮಾತ್ರ ಇಲ್ಲಿ ಔಷಧೋಪಚಾರ ಸಿಗುತ್ತದೆ. ಗಂಭೀರ ಕಾಯಲೆ ಇರುವವರು ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರ ಪತ್ರ ಪಡೆದು ಇತರ ನಗರಗಳ ಆಸ್ಪತ್ರೆಗಳಿಗೆ ಹೋಗುವುದು ನಿರಂತರ ಸಾಗಿದೆ.
ಸಮುದಾಯ ಆರೋಗ್ಯ ಕೇಂದ್ರಗಳಿಗೆ ಇರಬಹುದಾದ ಯಾವುದೇ ಹೆಚ್ಚುವರಿ ಹಾಸಿಗೆಗಳು ಇಲ್ಲ. ಪ್ರಯೋಗಾಲಯ, ಕ್ಷ-ಕಿರಣ, ಇತರ ಕೆಲ ಸೀಮಿತ ಸೌಲಭ್ಯ ಮಾತ್ರ ಇವೆ. ಈ ಬಗ್ಗೆ ಸರ್ಕಾರದ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಸದ್ಯ ಒಬ್ಬ ವೈದ್ಯಾಧಿಕಾರಿ, ಗುತ್ತಿಗೆ ಆಧಾರಿತ ವೈದ್ಯರು ಮಾತ್ರ ಸೇವೆ ಸಲ್ಲಿಸುತ್ತಿದ್ದಾರೆ.ಅನುದಾನ ವಾಪಸ್:
ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಂಜೂರಾದ ಅರವಳಿಕೆ, ಮಕ್ಕಳ ಸ್ತ್ರೀರೋಗ ತಜ್ಞರ ಹುದ್ದೆಗಳು ಖಾಲಿ ಇವೆ. ದಂತ ವೈದ್ಯರ ಹುದ್ದೆಗೆ ಮಾತ್ರ ತಜ್ಞರು ಇದ್ದಾರೆ. ಆರು ಶುಶ್ರೂಷಕರ ಪೈಕಿ ಒಬ್ಬರು, ಎರಡು ಕಿರಿಯ ಫಾರ್ಮಸಿಸ್ಟ್ ಹುದ್ದೆಗಳ ಪೈಕಿ ಒಬ್ಬರು, ಇಬ್ಬರು ವಾಹನ ಚಾಲಕರ ಪೈಕಿ ಒಂದು ಹುದ್ದೆಗೆ ಚಾಲಕ ನೇಮಕವಾಗಿದೆ. ಕೇಂದ್ರಕ್ಕೆ 12 ಗ್ರೂಪ್ ಬಿ ನೌಕರರ ಅವಶ್ಯವಿದ್ದರೂ ಕೇವಲ ಮೂವರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕೊಟ್ಟೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಜ್ಞ ವೈದ್ಯರ ಹುದ್ದೆಗಳು ಖಾಲಿ ಇವೆ. ಜಿಲ್ಲಾ ಆರೋಗ್ಯ ಕೇಂದ್ರದಿಂದ ಸರಬರಾಜು ಮಾಡುವ ಮಾತ್ರೆಗಳಿವೆ. ಇಲ್ಲಿ ಸಿಗದ ಮಾತ್ರೆಗಳನ್ನು ಆಸ್ಪತ್ರೆ ನಿಧಿಯಿಂದ ಖರೀದಿಸಿ ರೋಗಿಗಳಿಗೆ ನೀಡುತ್ತಿದ್ದೇವೆ ಎನ್ನುತ್ತಾರೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪಿ.ಬದ್ಯಾನಾಯ್ಕ.