ಕೆಜಿಎಫ್: ಅಗ್ನಿವೀರ್ ಯೋಜನೆಯಲ್ಲಿ ವಿಫುಲ ಅವಕಾಶಗಳಿವೆ, ದೇಶ ಸೇವೆಗೆ ಯುವಕರು ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಲಿ ಎಂದು ರೋಟರಿ ಸಂಸ್ಥೆ ಅಧ್ಯಕ್ಷ ಎಲ್. ನರಸಿಂಹಮೂರ್ತಿ ಹೇಳಿದರು.
ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅಗ್ನಿವೀರ್‌ಗೆ ಆಯ್ಕೆಯಾದ ೧೨ ಮಂದಿ ಯುವಕರನ್ನು ರೋಟರಿ ಸಂಸ್ಥೆಯಿಂದ ಆತ್ಮೀಯವಾಗಿ ಸನ್ಮಾನಿಸಿ ಮಾತನಾಡಿದರು.ದೇಶ ಸೇವೆಗೆ ಹೊರಡುತ್ತಿರುವ ಅಗ್ನಿವೀರರಿಗೆ ಗೌರವ ಸೂಚಿಸುವ ಸಲುವಾಗಿ ರೋಟರಿ ಸಂಸ್ಥೆಯಿಂದ ಕಿರುಕಾಣಿಕೆ ಮತ್ತು ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಬಾಲಕರ ಕಾಲೇಜಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿರುವುದರ ಮುಖ್ಯ ಉದ್ದೇಶ ಇಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೂ ದೇಶ ಸೇವೆಗೆ ಸೇರಲು ಪ್ರೇರಣೆಯಾಗಲಿ ಎನ್ನುವುದಾಗಿದೆ ಎಂದರು.
ರೋಟರಿ ಜಿಲ್ಲಾ ಕಲ್ಪವೃಕ್ಷ ಚೇರ್‌ಮೆನ್ ಅ.ಮು.ಲಕ್ಷ್ಮೀನಾರಾಯಣ ಮಾತನಾಡಿ, ಅಗ್ನಿಪಥ್ ಯೋಜನೆಗೆ ೧೭ ವರ್ಷಗಳಿಂದ ೨೧ ವರ್ಷಗಳ ನಡುವೆ ಇರುವ ಯುವಕರನ್ನು ಆಯ್ಕೆ ಮಾಡಲಾಗುತ್ತದೆ. ಈ ನೇಮಕಾತಿಯಲ್ಲಿ ಸೇನೆಯ ಪ್ರಕ್ರಿಯೆಯಂತೆಯೇ ಆಯ್ಕೆ ಮಾಡಲಾಗುತ್ತದೆ. ಸೇನೆ ನಿಗದಿಪಡಿಸಿದ ನಿಯಮಗಳ ಪ್ರಕಾರವೇ ನೇಮಕಾತಿ ನಡೆಯಲಿದ್ದು, ನಂತರ ತರಬೇತಿ ಅವಧಿ ಸೇರಿ ಒಟ್ಟು ೪ ವರ್ಷಗಳ ಕಾಲ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಗುತ್ತದೆ ಎಂದರು.ಮಾಜಿ ಸೈನಿಕ ಹಾಗೂ ಬೆಸ್ಕಾಂ ನೌಕರ ಪ್ರಕಾಶ್ ಅವರು ತಾವು ಸೈನ್ಯದಲ್ಲಿ ಸೇವೆ ಸಲ್ಲಿಸಿದಂತೆ ತಾಲೂಕಿನ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರಿ ಸೇವೆ ಸಲ್ಲಿಸಬೇಕೆಂಬ ಮಹದಾಸೆಯಿಂದ ಯುವಕರಿಗೆ ಉಚಿತವಾಗಿ ಅಗ್ನಿವೀರ್ ತರಬೇತಿ ನೀಡುತ್ತಿದ್ದು, ಕಳೆದೆರಡು ವರ್ಷಗಳಿಂದ ಸುಮಾರು ೨೫ಕ್ಕೂ ಹೆಚ್ಚು ಯುವಕರನ್ನು ಅಗ್ನಿವೀರ್‌ಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ರೋಟರಿ ಕ್ಲಬ್ ಕಾರ್ಯದರ್ಶಿ ಡಾ.ಬಾಬು, ಖಜಾಂಚಿ ಮಂಜುನಾಥಪ್ಪ, ಉಮೇಶ್, ಅಭಿಲಾಷ್ ಕಾರ್ತಿಕ್, ಶೂಟಿಂಗ್ ಟ್ರೈನರ್ ಮಂಜುನಾಥ್, ಬಾಲಕರ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ನಂದಿನಿ, ಉಪ ಪ್ರಾಂಶುಪಾಲೆ ಗಾಯತ್ರಿ, ಶಿಕ್ಷಕಿ ವಾಣಿ.ಕೆ ಇದ್ದರು.