ಕೊಡುಗೆ ಬಗ್ಗೆ ಎಸ್ಸೆಸ್ಸೆಂ ಶ್ವೇತಪತ್ರ ಹೊರಡಿಸಲಿ: ಯಶವಂತರಾವ್ ಜಾಧವ್

KannadaprabhaNewsNetwork |  
Published : Sep 09, 2025, 01:00 AM IST
8ಕೆಡಿವಿಜಿ3-ದಾವಣಗೆರೆಯಲ್ಲಿ ಸೋಮವಾರ ಬಿಜೆಪಿ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಶಾಸಕರು, ಸಚಿವರು, ಸಂಸದರು ಹೀಗೆ ಮೂರೂ ಅಧಿಕಾರವನ್ನು ಹೊಂದಿರುವ ಶಾಮನೂರು ಕುಟುಂಬ ಕಳೆದ ಎರಡೂವರೆ ವರ್ಷದಲ್ಲಿ ದಾವಣಗೆರೆ ನಗರ, ಜಿಲ್ಲೆಯ ಅಭಿವೃದ್ಧಿಗೆ ನೀಡಿದ ಕೊಡುಗೆ ಏನೆಂಬ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಬಿಜೆಪಿ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಶಾಸಕರು, ಸಚಿವರು, ಸಂಸದರು ಹೀಗೆ ಮೂರೂ ಅಧಿಕಾರವನ್ನು ಹೊಂದಿರುವ ಶಾಮನೂರು ಕುಟುಂಬ ಕಳೆದ ಎರಡೂವರೆ ವರ್ಷದಲ್ಲಿ ದಾವಣಗೆರೆ ನಗರ, ಜಿಲ್ಲೆಯ ಅಭಿವೃದ್ಧಿಗೆ ನೀಡಿದ ಕೊಡುಗೆ ಏನೆಂಬ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಬಿಜೆಪಿ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಒತ್ತಾಯಿಸಿದರು.

ನಗರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಅಭಿವೃದ್ಧಿಗೆ ಬಿಜೆಪಿ ಅಡ್ಡಗಾಲಾಗಿದೆಯೆಂದು ಕಾಂಗ್ರೆಸ್ಸಿಗರು ಆರೋಪಿಸುತ್ತಿದ್ದು, ಶಾಮನೂರು ಶಿವಶಂಕರಪ್ಪ, ಎಸ್.ಎಸ್.ಮಲ್ಲಿಕಾರ್ಜುನ್‌ ಶಾಸಕರಾಗಿ ಎರಡೂವರೆ ವರ್ಷ ಡಾ.ಪ್ರಭಾ ಮಲ್ಲಿಕಾರ್ಜುನ ಸಂಸದರಾಗಿ ಒಂದೂವರೆ ವರ್ಷವಾಗಿದೆ. ಈ ಅವದಿಯಲ್ಲಿ ಕೊಡುಗೆ ಏನು ಎಂದು ಪ್ರಶ್ನಿಸಿದರು.

ದಾವಣಗೆರೆ ಜನತೆ ಒಂದೇ ಮನೆಗೆ ಮೂರೂ ಅಧಿಕಾರ ನೀಡಿದ್ದಾರೆ. ಜನರ ತೀರ್ಮಾನವನ್ನು ನಾವು ಪ್ರಶ್ನಿಸುವುದಿಲ್ಲ. ಆದರೆ, ಜನರು ಹೀಗೆ ಅಧಿಕಾರ ಕೊಟ್ಟರೂ ಜಿಲ್ಲೆಯ ಅಭಿವೃದ್ಧಿಗೆ ಅನುದಾನ ತರಲು ಸಚಿವರು, ಸಂಸದರು, ಶಾಸರಿಗೆ ಯಾರು ಅಡ್ಡಿಯಾಗಿದ್ದಾರೆ? ಬಿಜೆಪಿ ಅಡ್ಡಿಪಡಿಸಿದ, ವಿರೋಧಿಸಿದ ಯಾವುದಾದರೂ ದಾಖಲೆ ಇದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.

ಆಜಾದ್ ನಗರ ಠಾಣೆ ಇನ್ಸಪೆಕ್ಟರ್ ಇಮ್ರಾನ್ ಬೇಗ್‌ರನ್ನು 10 ತಿಂಗಳ ಹಿಂದೆ ಕಾಂಗ್ರೆಸ್ಸಿನ ಮುಖಂಡ ಅಯೂಬ್‌ ಪೈಲ್ವಾನ್ ಸಂಗಡಿಗರು ಸಾರ್ವಜನಿಕವಾಗಿ ಅವಾಚ್ಯವಾಗಿ ನಿಂದಿಸಿ ಅಪಮಾನಿಸಿದ್ದರು. ಹೀಗೆ ಪೊಲೀಸ್ ಅಧಿಕಾರಿಗಳ ಮೇಲೆ ದೌರ್ಜನ್ಯ ನಡೆಸಿದವರಿಗೆ ಶಿಕ್ಷಿಸುವುದನ್ನು ಬಿಟ್ಟು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ ಅಂತಹ ಅಧಿಕಾರಿಯನ್ನೇ ವರ್ಗಾವಣೆ ಮಾಡಿಸಿದರು. ಸಚಿವ ಮಲ್ಲಿಕಾರ್ಜುನ್‌, ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್‌ ಯಾರ ಪರ ಕೆಲಸ ಮಾಡುತ್ತಿದ್ದಾರೆಂಬುದನ್ನು ಸಾರ್ವಜನಿಕವಾಗಿ ತಿಳಿಸಲಿ ಎಂದು ಒತ್ತಾಯಿಸಿದರು.

ರಾಷ್ಟ್ರಪತಿಯಾಗಿ ಡಾ.ಅಬ್ದುಲ್ ಕಲಾಂರನ್ನು ಮಾಡಿದ್ದು, ಕೇಂದ್ರ ಸಚಿವರಾಗಿ ಶಹನವಾಜ್ ಹುಸೇನ್‌, ಅಲ್ಪಸಂಖ್ಯಾತರ ಅಭಿವೃದ್ಧಿ ಸಚಿವನಾಗಿ, ರಾಜ್ಯಸಭೆ ಉಪ ನಾಯಕರಾಗಿ ಮುಖ್ತಾರ್ ಅಬ್ಬಾಸ್ ನಖ್ವಿಯವರನ್ನು ಆಯ್ಕೆ ಮಾಡಿದ್ದು ಬಿಜೆಪಿ. ರಾಜ್ಯದಲ್ಲಿ ಮೊದಲ ಸಲ ಬಿಜೆಪಿ ಅಧಿಕಾರಕ್ಕೆ ಬಂದಾಗ ಮುಸ್ಲಿಂ ಶಾಸಕರಿಲ್ಲದಿದ್ದರೂ ಮುಮ್ತಾಜ್ ಅಲಿಖಾನ್‌ರನ್ನು ವಿಪ ಸದಸ್ಯರಾಗಿ ಮಾಡಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ಸಚಿವರಾಗಿ ಮಾಡಿತ್ತು ಎಂದು ಹೇಳಿದರು.

ನನ್ನ ಮಗ ಪ್ರತಿನಿಧಿಸಿದ್ದ ವಾರ್ಡ್‌ನ ಎಲ್ಲ 10 ಬೂತ್‌ಗಳಲ್ಲೂ ಬಿಜೆಪಿಗೆ ಮುನ್ನಡೆ ಸಿಕ್ಕಿದೆ. ನನಗೆ ಟಿಕೆಟ್ ಸಿಕ್ಕಿಲ್ಲವೆಂದು ಯಾರ ಬೆನ್ನಿಗೂ ಚೂರಿ ಹಾಕುವ ಕೆಲ ಮಾಡಿಲ್ಲ ಎಂದು ದಿನೇಶ ಶೆಟ್ಟಿ ಆರೋಪಕ್ಕೆ ತಿರುಗೇಟು ನೀಡಿದರು.

ಪಕ್ಷದ ಮುಖಂಡರಾದ ಬಿ.ರಮೇಶ ನಾಯ್ಕ, ಶಂಕರಗೌಡ ಬಿರಾದಾರ, ರಾಜು ನೀಲಗುಂದ, ಬಾಲಚಂದ್ರ ಶ್ರೇಷ್ಠಿ, ಟಿಂಕರ್ ಮಂಜಣ್ಣ, ಕಿಶೋರಕುಮಾರ ಇತರರು ಇದ್ದರು.

ದಾವಣಗೆರೆ ದಕ್ಷಿಣದಲ್ಲಿ ಅಜಯಕುಮಾರಗೆ ಸೋಲಿಸಿದ್ದೇ ಜಾಧವ್ ಎಂದು ದಿನೇಶ ಶೆಟ್ಟಿ ಹೇಳಿದ್ದು, ವಿಧಾನಸಭೆ-ಲೋಕಸಭಾ ಚುನಾವಣೆಗಳಲ್ಲಿ ದಕ್ಷಿಣ ಭಾಗದ ಅಲ್ಪಸಂಖ್ಯಾತರ 70 ಬೂತ್‌ಗಳಲ್ಲಿ ಬಿಜೆಪಿಗೆ ಕಡಿಮೆ ಮತ ಬಂದಿವೆ. ಆದರೆ, ಹಿಂದೂಗಳು ಇರುವಲ್ಲಿ ಬಿಜೆಪಿಗೆ ಲೀಡ್ ಬಂದಿವೆ. ಈ ಬಗ್ಗೆ ಅಜಯಕುಮಾರಗೂ ತಿಳಿದಿದ್ದು, ನಮ್ಮದೇ ಪಕ್ಷದ ಅಭ್ಯರ್ಥಿಯ ಬೆನ್ನಿಗೆ ಚೂರಿ ಹಾಕುವ ಕೆಲಸ ನಾವು ಮಾಡುವವರಲ್ಲ.

ಯಶವಂತರಾವ್ ಜಾಧವ್ ಬಿಜೆಪಿ ನಿಕಟ ಪೂರ್ವ ಜಿಲ್ಲಾಧ್ಯಕ್ಷ

PREV

Recommended Stories

ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ಮತ್ತೆರಡು ತಲೆಬುರುಡೆ ಪತ್ತೆ
ದಸರಾ : ಬೆಂಗಳೂರು ನಗರದಿಂದ ವಿವಿಧೆಡೆ ವಿಶೇಷ ರೈಲು