ಎಸ್‌ಐಆರ್‌ ರದ್ದು ಪಡಿಸಲು ಆಗ್ರಹಿಸಿ ಹೋರಾಟಗಳು ರೂಪಗೊಳ್ಳಲಿ: ಡಾ. ಕೆ. ಪ್ರಕಾಶ

KannadaprabhaNewsNetwork |  
Published : May 16, 2026, 01:15 AM IST
ಎಚ್‌15.5-ಡಿಎನ್‌ಡಿ1: ಎಸ್.ಐ.ಆರ್ ರದ್ದು ಪಡಿಸಲು ಆಗ್ರಹಿಸುವ ಹೋರಾಟಗಳು ರೂಪಗೊಳ್ಳಬೇಕಿದೆ : ಡಾ.ಕೆ.ಪ್ರಕಾಶ | Kannada Prabha

ಸಾರಾಂಶ

. ಜನತೆಯ ಹಕ್ಕು ರಕ್ಷಿಸುವ ದೃಷ್ಟಿಯಿಂದ ಎಸ್.ಐ.ಆರ್. ರದ್ದು ಪಡಿಸಲು ಆಗ್ರಹಿಸುವ ಹೋರಾಟಗಳು ರೂಪಗೊಳ್ಳಬೇಕಿದೆ ಎಂದು ಹೋರಾಟಗಾರ, ರಾಜಕೀಯ ಚಿಂತಕ ಡಾ. ಕೆ. ಪ್ರಕಾಶ ಕರೆ ನೀಡಿದರು.

ದಾಂಡೇಲಿ: ಜನಸಾಮಾನ್ಯರು ನಿರಂತರವಾಗಿ ಬಳಸುತ್ತಿರುವ ಆಧಾರ್, ರೇಷನ್ ಹಾಗೂ ಮತದಾರರ ಕಾರ್ಡ್‌ಗಳನ್ನು ಮತದಾರರ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (ಎಸ್.ಐ.ಆರ್) ದಾಖಲೆಯಾಗಿ ಪರಿಗಣಿಸಿಲ್ಲ. ಆದ್ದರಿಂದ ಸಂಕಷ್ಟಗಳು ಆರಂಭವಾಗಿವೆ ಎಂದು ಹೋರಾಟಗಾರ, ರಾಜಕೀಯ ಚಿಂತಕ ಡಾ. ಕೆ. ಪ್ರಕಾಶ ಕರೆ ನೀಡಿದರು.

ಮತದಾರರ ತೀವ್ರ ಪರಿಷ್ಕರಣೆ (ಎಸ್.ಐ.ಆರ್)ಯಿಂದ ಜನರ ಮೇಲಿನ ಪರಿಣಾಮ ಕುರಿತು ಸಮಾನ ಮನಸ್ಸಿನ ಪ್ರಗತಿಪರ ಸಂಘಟನೆಗಳು ದಾಂಡೇಲಿಯಲ್ಲಿ ಸಂಘಟಿಸಿದ ಸಂವಾದ ಸಭೆಯಲ್ಲಿ ಮಾತನಾಡಿದರು.

ಕೋಟ್ಯಂತರ ಜನರು ತಮ್ಮ ಮತ ಚಲಾಯಿಸಲಾಗದೇ ಸಂವಿಧಾನಿಕ ಹಕ್ಕಿನಿಂದ ವಂಚಿತರಾಗಿದ್ದಾರೆ. ಜನತೆಯ ಹಕ್ಕು ರಕ್ಷಿಸುವ ದೃಷ್ಟಿಯಿಂದ ಎಸ್.ಐ.ಆರ್. ರದ್ದು ಪಡಿಸಲು ಆಗ್ರಹಿಸುವ ಹೋರಾಟಗಳು ರೂಪಗೊಳ್ಳಬೇಕಿದೆ. ಐದು ವರ್ಷಗಳ ಹಿಂದೆ ಕೇಂದ್ರ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಸಿಎಎ ಮತ್ತು ಎನ್.ಆರ್.ಸಿ. ಮೂಲಕ ಹೇರಲು ಹೊರಟಿದ್ದ ಕಾಯ್ದೆಯನ್ನು ಈಗ ಭಯದ ವಾತಾವರಣ ಸೃಷ್ಟಿಸುವ ಮೂಲಕ ಚುನಾವಣಾ ಆಯೋಗದ ಮೂಲಕ ಜಾರಿ ಮಾಡಲಾಗುತ್ತಿದೆ. ಈ ತೀವ್ರ ಪರಿಷ್ಕರಣೆ ಅದೇ ರೂಪದ್ದೇ ಆಗಿದೆ. ಹಾಗಾಗಿ ಇದು ರಾಜಕೀಯ ಪಕ್ಷಗಳ ವಿಷಯವಲ್ಲ. ದೇಶಪ್ರೇಮವೆಂದರೆ ಜನರ ಹಿತ ಕಾಪಾಡುವುದೇ ವಿನಃ ಕಷ್ಟಕೊಡುವುದಲ್ಲ. ಅನಕ್ಷರಸ್ಥರು, ದೇವದಾಸಿ ಮಕ್ಕಳು, ಭೂ ರಹಿತರು, ಕೃಷಿಕೂಲಿಕಾರರು, ಅರಣ್ಯ ಒತ್ತುವರಿದಾರರು, ಮಹಿಳೆಯರು, ಆದಿವಾಸಿಗಳು, ದಲಿತರು ಮತ್ತು ಅಲ್ಪಸಂಖ್ಯಾತರು, ಸರ್ಕಾರಿ ನೌಕರರಲ್ಲದವರು ಎಸ್.ಐ.ಆರ್. ಗೆ ದಾಖಲೆ ಹೊಂದಿಸಿಕೊಡಲಾಗದೇ ತಮ್ಮ ಪ್ರಜಾಪ್ರಭುತ್ವ ಹಕ್ಕುಗಳಿಂದ ವಂಚಿತರಾಗುತ್ತಾರೆ.

ಭಾರತದ ಪೌರತ್ವಕ್ಕೆ ಧರ್ಮದ ಲೇಪ ಹಾಕಿದ ನಂತರವಂತೂ ಕೆಲವರನ್ನು ಗುರಿಯಾಗಿಸಿ ಹಿಂಸಿಸಲಾಗುತ್ತಿದೆ. ಮುಖ್ಯ ಚುನಾವಣಾ ಆಯೋಗದ ಆಯುಕ್ತರನ್ನು ನೇಮಿಸಲು ಇರುವ ಈ ವರೆಗಿನ ನಿಯಮಾವಳಿಗಳನನ್ನು ತಿದ್ದುಪಡಿ ಮಾಡಿ ಸ್ವಾಯತ್ತ ಸ್ವರೂಪವನ್ನು ಕಸಿದುಕೊಂಡು ಕೈಗೊಂಬೆಯ ಹಂತಕ್ಕೆ ಇಳಿಸಲಾಗಿದೆ. ನ್ಯಾಯಾಂಗದಲ್ಲೇ ಅನ್ಯಾಯವಾದರೆ ಯಾರಿಗೆ ದೂರು ಕೊಡುವುದು ಎಸ್.ಐ.ಆರ್. ಪರಿಣಾಮಗಳಿಂದ ಜನತೆಯ ಹಕ್ಕು ರಕ್ಷಿಸಲು ಎಸ್.ಐ.ಆರ್. ರದ್ದುಪಡಿಸಲು ಆಗ್ರಹಿಸುವ ಹೋರಾಟಗಳನ್ನು ಸಂಘಟಿಸಬೇಕು ಮತ್ತು ಮತದಾರರ ಪಟ್ಟಿಯಿಂದ ತಪ್ಪಿಹೋಗದಂತೆ ಪ್ರಾಯೋಗಿಕ ಆಯಾಮವನ್ನು ತಿಳಿಸುವ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ದಾಂಡೇಲಿಯ ರಾಜಕೀಯ ಮುಖಂಡ ಮೋಹನ ಹಲವಾಯಿ, ನ್ಯಾಯವಾದಿ ಎಸ್.ಎನ್. ದಬ್ಗಾರ, ಆಫ್ರೀನ್‌ ಕಿತ್ತೂರ, ರತ್ನದೀಪಾ ಎನ್.ಎಂ., ಪ್ರಮುಖರಾದ ಸತೀಶ ನಾಯ್ಕ, ರಾಜೇಸಾಬ ಕೇಸನೂರ, ಡಿ. ಸ್ಯಾಮಸನ್, ರಾಮಲಿಂಗ್ ಜಾಧವ್, ಎಸ್.ವಿ. ಸಾವಂತ, ಸಲೀಂ ಸಯ್ಯದ್, ಪದ್ಮಾ ಕಾಳೆ ಮುಂತಾದವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೋರಾಟಗಾರ್ತಿ ಯಮುನಾ ಗಾಂವಕರ ಎಸ್‌ಐ.ಆರ್. ನಿಂದ ಜನಸಾಮಾನ್ಯರಿಗೆ ಆಗುತ್ತಿರುವ ಸಮಸ್ಯೆಗಳು ಹಾಗೂ ಹಕ್ಕು ವಂಚನೆಯ ಬಗ್ಗೆ ಮಾತನಾಡಿ, ಎಸ್.ಐ.ಆರ್. ನಿಂದ ಆಗುತ್ತಿರುವ ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನ ಸಂಘಟಿಸುವ ಕೆಲಸಗಳಾಗಬೇಕು. ಇನ್ಮುಂದೆ ಜಿಲ್ಲಾದ್ಯಂತ ಈ ಜಾಗೃತಿ ಕಾರ್ಯಕ್ರಮ‌ ನಡೆಯಲಿದೆ ಎಂದರು.

ಸಾಹಿತಿಗಳಾದ‌ ಮುರ್ತುಜಾ ಹುಸೇನ ಆನೆಹೊಸೂರ, ಭೀಮಾಶಂಕರ ಅಜನಾಳ, ಶ್ರೀಮಂತ‌ ಮದರಿ, ಪ್ರಮುಖರಾದ ಯಾಸ್ಮೀನ್ ಕಿತ್ತೂರ, ಅಷ್ಪಾಕ್ ಶೇಖ್‌, ಸರಸ್ವತಿ ರಜಪೂತ, ಮೌಲಾಲಿ ಮುಲ್ಲಾ, ದಿವಾಕರ ನಾಯ್ಕ, ರವಿ ಚೌಹಾಣ, ನೀಲಾ ಮಾದರ, ಇಮ್ರಾನ್ ಖಾನ್ ಮುಂತಾದವರಿದ್ದರು‌.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆರ್ಥಿಕ ಸ್ವಾವಲಂಬನೆಗಾಗಿ ದುಡಿಮೆ ಅನಿವಾರ್ಯ
ಕನಕಗಿರಿ ಉತ್ಸವ ಮುಂದೂಡಿಕೆ, ಜನರಿಗೆ ನಿರಾಸೆ