ವಿದ್ಯಾರ್ಥಿಗಳು ಸಂಸ್ಕಾರವಂತರಾಗಲಿ: ಬಿ.ಎಸ್. ಅರಳಿ

KannadaprabhaNewsNetwork |  
Published : Aug 21, 2025, 02:00 AM IST
ರಾಣಿಬೆನ್ನೂರು ತಾಲೂಕಿನ ಹಲಗೇರಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸ್ನೇಹ ಸಮ್ಮಿಲನದಲ್ಲಿ ಹಳೇ ವಿದ್ಯಾರ್ಥಿಗಳು ಶಿಕ್ಷಕರಿಗೆ ಗುರುವಂದನೆ ಸಲ್ಲಿಸಿದರು. | Kannada Prabha

ಸಾರಾಂಶ

ಮಕ್ಕಳು ವಿದ್ಯಾವಂತರಾಗಿ, ಪ್ರತಿಭಾವಂತರಾಗಿ ಸತ್ಪ್ರಜೆಗಳಾಗಿ ಬೆಳೆಯಬೇಕು. ಕ್ರೀಡೆ, ಚಿತ್ರಕಲೆ, ಸಾಹಿತ್ಯ ಸೇರಿದಂತೆ ವಿವಿಧ ಕಲೆಗಳನ್ನು ತೊಡಗುವ ಮೂಲಕ ಉತ್ತಮ ಸಂಸ್ಕಾರವಂತರಾಗಬೇಕು.

ರಾಣಿಬೆನ್ನೂರು: ಒಳ್ಳೆಯ ವಿದ್ಯಾರ್ಥಿಗಳಿಂದ ಉತ್ತಮ ಶಿಕ್ಷಕರು ಆಗಲು ಸಾಧ್ಯ ಎಂದು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಬಿ.ಎಸ್. ಅರಳಿ ತಿಳಿಸಿದರು.ತಾಲೂಕಿನ ಹಲಗೇರಿ ಗ್ರಾಮದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸರ್ಕಾರಿ ಮಾದರಿ ಕೇಂದ್ರ ಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳ ಶಾಲೆ ಮತ್ತು ಹಾಲಸಿದ್ದೇಶ್ವರ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಂದ ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಕ್ಷಣ, ಜ್ಞಾನ ಪಸರಿಸುವಲ್ಲಿ ಗುರು- ಶಿಷ್ಯರಿಬ್ಬರ ಜೀವನ ಸಾರ್ಥಕತೆ ಇದೆ ಎಂದರು.

ಮಕ್ಕಳು ವಿದ್ಯಾವಂತರಾಗಿ, ಪ್ರತಿಭಾವಂತರಾಗಿ ಸತ್ಪ್ರಜೆಗಳಾಗಿ ಬೆಳೆಯಬೇಕು. ಕ್ರೀಡೆ, ಚಿತ್ರಕಲೆ, ಸಾಹಿತ್ಯ ಸೇರಿದಂತೆ ವಿವಿಧ ಕಲೆಗಳನ್ನು ತೊಡಗುವ ಮೂಲಕ ಉತ್ತಮ ಸಂಸ್ಕಾರವಂತರಾಗಬೇಕು. ವಿದ್ಯಾರ್ಥಿ ಜೀವನವೇ ಪ್ರತಿಯೊಬ್ಬ ವ್ಯಕ್ತಿಯ ಬದುಕನ್ನು ಭದ್ರಗೊಳಿಸುತ್ತದೆ ಎಂದರು. ನಿವೃತ್ತ ಶಿಕ್ಷಕ ಎಂ.ಸಿ. ಮಠದ ಮಾತನಾಡಿ, ಗುರು- ಶಿಷ್ಯರ ಸಂಬಂಧವು ಶಿಕ್ಷಕ ಮತ್ತು ವಿದ್ಯಾರ್ಥಿಯ ನಡುವಿನ ಪವಿತ್ರ ಬಂಧವಾಗಿದೆ. ಇದು ಜ್ಞಾನ, ಮಾರ್ಗದರ್ಶನ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಪೂರಕ. ಗುರುವು ಶಿಷ್ಯನಿಗೆ ಜ್ಞಾನ ನೀಡುವುದಲ್ಲದೆ, ಜೀವನದ ಮೌಲ್ಯ, ನೀತಿ ಕಲಿಸುತ್ತಾರೆ. ಶಿಷ್ಯನು ಗುರುವಿಗೆ ಗೌರವ, ಭಕ್ತಿ ಮತ್ತು ವಿಧೇಯತೆ ತೋರಿಸುತ್ತಾರೆ ಎಂದರು.ಪ್ರಾಥಮ ಶಾಲೆಯ ಮುಖ್ಯ ಶಿಕ್ಷಕ ಪ್ರಕಾಶ ಹೊಸಳ್ಳಿ ಮಾತನಾಡಿ, ಪಾಲಕರು ತಮ್ಮ ಮಕ್ಕಳಿಗಾಗಿ ಆಸ್ತಿ, ಬಂಗಾರ ಮಾಡಬೇಡಿ. ಇದರಿಂದ ಅವರು ಚಟಗಳಿಗೆ ದಾಸರಾಗುತ್ತಿದ್ದಾರೆ. ಉತ್ತಮ ಶಿಕ್ಷಣ ಕೊಡಿಸಿ, ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಹಾಯ ಮಾಡುವ ಮೂಲಕ ಅವರನ್ನೇ ದೇಶದ ಆಸ್ತಿಯಾಗಿ ಪರಿವರ್ತನೆ ಮಾಡಿ ಎಂದರು.ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಬಿ.ಎಸ್. ಅರಳಿ, ಎಚ್.ಪಿ. ಬಗಾಡೆ, ಹೆಣ್ಣುಮಕ್ಕಳ ಶಾಲೆಯ ಎಂ.ಎಸ್. ಅಂಗಡಿ, ಎಸ್.ವಿ. ಬ್ಯಾಳಿ, ಸಿ.ಆರ್. ಮುದ್ದಪ್ಪಳವರ, ಆರ್.ಎಚ್. ಐರಣಿ, ಎಫ್.ಕೆ. ಬಿಸಲಹಳ್ಳಿ, ಎಂ.ಸಿ. ಮಠದ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಪ್ರಕಾಶ್ ಹೊಸಳ್ಳಿ, ಶಾಲೆಯ ನಿವೃತ್ತ ಸಿಬ್ಬಂದಿಗಳಾದ ಬಿ.ವೈ. ಘೋಡಕೆ, ಉಮೇಶ್ ಕಂಬಾಳಿಮಠ ಅವರಿಗೆ ಗುರುವಂದನೆ ಅರ್ಪಿಸಲಾಯಿತು.ಬರೋಬ್ಬರಿ ಮೂರು ದಶಕದ ಬಳಿಕ ವಿದ್ಯಾರ್ಥಿಗಳ ಸಮಾಗಮ, ಹಳೇ ದಿನಗಳ ಮೆಲುಕು, ಶಾಲಾ ಕ್ಷಣಗಳ ಸ್ಮರಣೆಯಂತಹ ಭಾವಸ್ಪರ್ಶಿ ಕ್ಷಣಗಳಿಗೆ ಸಮಾರಂಭ ಸಾಕ್ಷಿಯಾಯಿತು.

PREV

Recommended Stories

ಯಾವಾಗ ಬೇಕಿದ್ದರೂ ಸಂಪುಟ ಪುನರ್‌ ರಚನೆ : ಗುಂಡೂರಾವ್‌
9 ತಿಂಗಳಲ್ಲಿ 158 ಕಾರ್ಖಾನೆಗಳ ಮುಚ್ಚಲು ಮಂಡಳಿಯ ನೋಟಿಸ್‌