ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲಿ

KannadaprabhaNewsNetwork | Published : Dec 28, 2023 1:47 AM

ಸಾರಾಂಶ

ತಾಲೂಕಿನ ವಿದ್ಯಾರ್ಥಿಗಳೂ ಸಹ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಉನ್ನತ ಹುದ್ದೆ ಗಿಟ್ಟಿಸಿಕೊಳ್ಳಬೇಕು ಎನ್ನುವ ಮಹೋನ್ನತ ಉದ್ದೇಶದ ಸಾಕಾರಕ್ಕೆ ಪರಿವರ್ತನ ಕಲಿಕಾ ಕೇಂದ್ರ ಆರಂಭಿಸಿ, ಜಾಗತಿಕ ಸ್ಪರ್ಧೆಗೆ ಸನ್ನದ್ಧಗೊಳಿಸುವ ಕೆಲಸ ಮಾಡಲಾಗುತ್ತಿದೆ

ಕನ್ನಡಪ್ರಭ ವಾರ್ತೆ ಹಾನಗಲ್ಲ

ತಾಲೂಕಿನ ವಿದ್ಯಾರ್ಥಿಗಳೂ ಸಹ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಉನ್ನತ ಹುದ್ದೆ ಗಿಟ್ಟಿಸಿಕೊಳ್ಳಬೇಕು ಎನ್ನುವ ಮಹೋನ್ನತ ಉದ್ದೇಶದ ಸಾಕಾರಕ್ಕೆ ಪರಿವರ್ತನ ಕಲಿಕಾ ಕೇಂದ್ರ ಆರಂಭಿಸಿ, ಜಾಗತಿಕ ಸ್ಪರ್ಧೆಗೆ ಸನ್ನದ್ಧಗೊಳಿಸುವ ಕೆಲಸ ಮಾಡಲಾಗುತ್ತಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಇಲ್ಲಿನ ಗುರುಭವನದಲ್ಲಿನ ಪರಿವರ್ತನ ಕಲಿಕಾ ಕೇಂದ್ರಕ್ಕೆ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಬಳಿಕ ಮಾತನಾಡಿದ ಅವರು, ಪ್ರತಿಭೆ ಇದ್ದರೆ ಖಂಡಿತವಾಗಿಯೂ ಅವಕಾಶಗಳು ಹುಡುಕಿಕೊಂಡು ಬರಲಿವೆ. ಈ ಹಿನ್ನೆಲೆಯಲ್ಲಿ ನಮ್ಮ ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸಿ, ವೇದಿಕೆಗಳನ್ನು ಕಲ್ಪಿಸುವ ಅಗತ್ಯವಿದೆ. ಅವರೊಳಗಿನ ಕೀಳರಿಮೆ ಹೋಗಲಾಡಿಸಿ, ಆತ್ಮಸ್ಥೈರ್ಯ ಮೂಡಿಸಿ ಜಾಗತಿಕ ಸ್ಪರ್ಧೆಗೆ ಸಿದ್ಧಗೊಳಿಸಿದರೆ ಖಂಡಿತವಾಗಿಯೂ ಒಳ್ಳೆ ಒಳ್ಳೆಯ ಹುದ್ದೆಗಳನ್ನು ಗಿಟ್ಟಿಸಲಿದ್ದಾರೆ ಎಂದರು.

ತಾಲೂಕಿನ 75 ವಿದ್ಯಾರ್ಥಿಗಳನ್ನು ಕಳೆದ ವರ್ಷ ಧಾರವಾಡಕ್ಕೆ ಕಳುಹಿಸಿ, ಊಟ, ವಸತಿ ವ್ಯವಸ್ಥೆ ಕಲ್ಪಿಸಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸೂಕ್ತ ತರಬೇತಿ ದೊರಕಿಸಲಾಗಿತ್ತು. ಕಳೆದ ಚುನಾವಣೆಯ ಸಂದರ್ಭದಲ್ಲಿ ಹಾನಗಲ್‌ನಲ್ಲಿಯೇ ಕಲಿಕಾ ಕೇಂದ್ರ ಆರಂಭಿಸುವ ಭರವಸೆ ನೀಡಲಾಗಿತ್ತು. ಅದರಂತೆ ಕಲಿಕಾ ಕೇಂದ್ರ ಆರಂಭಿಸಿ 250 ವಿದ್ಯಾರ್ಥಿಗಳಿಗೆ ಪರಿಣಿತರಿಂದ ತರಬೇತಿ ಕೊಡಿಸಲಾಗುತ್ತಿದೆ. ಕಲಿಕಾ ಕೇಂದ್ರ ನಿರಂತರವಾಗಿ ತನ್ನ ಚಟುವಟಿಕೆ ನಡೆಸಲಿದ್ದು, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲಿದೆ. ಯುವಕರು, ಮಹಿಳೆಯರ ಕೌಶಲ್ಯ ಅಭಿವೃದ್ಧಿ ಪಡಿಸಿ ಸ್ವಉದ್ಯೋಗ ಕೈಗೊಳ್ಳಲು ನೆರವಾಗಲಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗಳ ಮಕ್ಕಳೂ ಸಹ ಸಾಧನೆ ಮೆರೆಯಬೇಕು, ನವ ಹಾನಗಲ್ ನಿರ್ಮಿಸಬೇಕು, ತಾಲೂಕು ಎಲ್ಲ ಕ್ಷೇತ್ರಗಳಲ್ಲಿಯೂ ಸಹ ವಿಕಾಸ ಕಾಣಬೇಕು ಎನ್ನುವ ಆಶಯ ತಮ್ಮದಾಗಿದೆ. ಈ ಆಶಯದ ಸಾಕಾರಕ್ಕೆ ಶ್ರಮ ವಹಿಸಿದ್ದಾಗಿ ತಿಳಿಸಿದರು.

ಈಗ ಸರ್ಕಾರದ ನೇಮಕಾತಿಗಳೆಲ್ಲವೂ ಪಾರದರ್ಶಕವಾಗಿ ನಡೆಯುತ್ತಿವೆ. 6ನೇ ತರಗತಿಗೆ ಪ್ರವೇಶ ಪಡೆಯಲೂ ಸಹ ಪರೀಕ್ಷೆ ಎದುರಿಸಬೇಕಿದೆ. ಹಿಂದೆ ವೀರಪ್ಪ ಮೊಯ್ಲಿ ಮುಖ್ಯಮಂತ್ರಿಗಳಿದ್ದಾಗ ಮೆಡಿಕಲ್, ಎಂಜಿನಿಯರಿಂಗ್ ಸೀಟುಗಳಿಗೆ ಮೆರಿಟ್ ಪದ್ಧತಿ ಜಾರಿ ತಂದರು. ಇದರಿಂದ ಪ್ರತಿಭಾನ್ವಿತರಿಗೆ ಅವಕಾಶ ಸಿಗುತ್ತಿದೆ. ಸಿಇಟಿ ಪದ್ಧತಿ ಬರದಿದ್ದರೆ ಇವೆಲ್ಲ ಸ್ಥಾನಗಳೂ ಸಹ ಉಳ್ಳವರ ಪಾಲಾಗುತ್ತಿದ್ದವು ಎಂದು ಅಭಿಪ್ರಾಯಪಟ್ಟ ಶ್ರೀನಿವಾಸ ಮಾನೆ, ವ್ಯವಸ್ಥೆ ಸಂಪೂರ್ಣವಾಗಿ ಹದಗೆಡುತ್ತಿದೆ. ಜವಾಬ್ದಾರಿಯ ಅರಿವು ಕಡಿಮೆಯಾಗುತ್ತಿದೆ. ಇಂಥ ಸಂದಿಗ್ಧ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಹೊಣೆಗಾರಿಕೆ ಪ್ರದರ್ಶಿಸಬೇಕಿದೆ ಎಂದು ಕರೆ ನೀಡಿದರು.

ಆಡಳಿತಾಧಿಕಾರಿ ಮಾರುತಿ ಶಿಡ್ಲಾಪೂರ ಮಾತನಾಡಿ, ಐಎಎಸ್, ಕೆಎಎಸ್ ಸೇರಿದಂತೆ ಎಲ್ಲ ಸರ್ಕಾರಿ ಮತ್ತು ಬ್ಯಾಂಕಿಂಗ್ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ ಪರಿವರ್ತನ ಕಲಿಕಾ ಕೇಂದ್ರದಲ್ಲಿ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ. ತಾಲೂಕಿನ ವಿದ್ಯಾರ್ಥಿಗಳ ಮೇಲಿನ ಕಳಕಳಿಯಿಂದ ಶಾಸಕ ಶ್ರೀನಿವಾಸ ಮಾನೆ ಕಲಿಕಾ ಕೇಂದ್ರ ತೆರೆದು ಉಚಿತ ತರಬೇತಿ ನೀಡುತ್ತಿದ್ದಾರೆ. ಇದರ ಸದುಪಯೋಗವಾದರೆ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿ ಪರಿವರ್ತನೆಯಾಗಲಿದೆ ಎಂದರು.

ಸಂಪನ್ಮೂಲ ವ್ಯಕ್ತಿ ಅನಂತ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Share this article