ಲಕ್ಷ್ಮೇಶ್ವರ: ಸರ್ಕಾರ ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಪ್ರತಿವರ್ಷ ಸಾವಿರಾರು ಕೋಟಿ ರು. ವೆಚ್ಚ ಮಾಡುತ್ತಿದೆ. ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಪಟ್ಟಣದ ಪಿಎಸ್‌ಬಿಡಿ ಬಾಲಕಿಯರ ಪ್ರೌಢಶಾಲೆಯಲ್ಲಿ ಮಂಗಳವಾರ ಶೈಕ್ಷಣಿಕ ಬಲವರ್ಧನೆಯ ಆರಂಭೋತ್ಸವ ಹಾಗೂ ಭೋಜನಾಲಯದ ಕಟ್ಟಡದ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಸರ್ಕಾರ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಪ್ರತಿ ವರ್ಷ ಸಾವಿರಾರು ಕೋಟಿ ರು. ಖರ್ಚು ಮಾಡುತ್ತಿದೆ. ಸರ್ಕಾರ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಧ್ಯಾಹ್ನದ ಬಿಸಿಯೂಟ ಯೋಜನೆ, ಉಚಿತ ಪಠ್ಯಪುಸ್ತಕ, ಶೂ, ಶಾಲಾ ಸಮವಸ್ತ್ರ ಸೇರಿದಂತೆ ಅನೇಕ ಯೋಜನೆಗಳನ್ನು ಕೊಡಮಾಡುತ್ತಿದೆ. ವಿದ್ಯಾರ್ಥಿಗಳು ಇಂತಹ ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಫಲಿತಾಂಶ ಪಡೆಯಬೇಕು ಎಂದು ಹೇಳಿದರು.ವಿಪ ಸದಸ್ಯ ಎಸ್,ವಿ. ಸಂಕನೂರ ಮಾತನಾಡಿ, ಸರ್ಕಾರ ಹೆಣ್ಣು ಮಕ್ಕಳಿಗೆ ಪ್ರಾಥಮಿಕ ಹಂತದಿಂದ ಹಿಡಿದು ಸ್ನಾತಕೋತ್ತರ ಶಿಕ್ಷಣದ ವರೆಗೆ ಉಚಿತ ಶಿಕ್ಷಣ ನೀಡುವ ಮೂಲಕ ಮಹಿಳೆಯರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಎಲ್ಲ ಪರೀಕ್ಷೆಗಳಲ್ಲಿ ವಿದ್ಯಾರ್ಥಿನಿಯರು ಇತ್ತೀಚೆಗೆ ಮೇಲುಗೈ ಸಾಧಿಸುತ್ತಿದ್ದಾರೆ. ಲಕ್ಷ್ಮೇಶ್ವರ ತಾಲೂಕು ಶೈಕ್ಷಣಿಕವಾಗಿ ಇನ್ನಷ್ಟು ಪ್ರಗತಿ ಸಾಧಿಸುವಂತಾಗಲಿ ಎಂದು ಹೇಳಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಂಸ್ಥೆಯ ಉಪಾಧ್ಯಕ್ಷೆ ಜಯಲಕ್ಷ್ಮೀ ಮಹಾಂತಶೆಟ್ಟರ ಸಸಿ ನೆಟ್ಟರು. ಶಾರಕ್ಕ ಮಹಾಂತಶೆಟ್ಟರ ಉಚಿತ ನೋಟ್‌ಬುಕ್ ವಿತರಣೆ ಮಾಡಿದರು. ನೂತನ ಬಿಇಒ ಎಚ್.ಎನ್. ನಾಯಕ ಅವರನ್ನು ಸನ್ಮಾನಿಸಲಾಯಿತು.ಸಂಸ್ಥೆಯ ಅಧ್ಯಕ್ಷೆ ಸುವರ್ಣಾಬಾಯಿ ಬಹಾದ್ದೂರ ದೇಸಾಯಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯ ಜೆ.ಡಿ. ಲಮಾಣಿ, ಎಸ್‌ಎಂಜೆವಿಜಿ ಕಾಲೇಜು ಪ್ರಾಚಾರ್ಯ ಜಾನಾ ನಾಯಕ, ಸಾವೆಂತ್ರಮ್ಮ ಹೂವಿನ, ಎಂ. ಸಿದ್ದಲಿಂಗಯ್ಯ, ಆರ್.ಎನ್. ನವಲೆ, ಪ್ರಕಾಶ ಬಹದ್ದೂರದೇಸಾಯಿ, ಐ.ಬಿ. ಜಕ್ಕನಗೌಡರ, ಸ್ವಾತಿ ಪೈ, ನವಲೆ ಇದ್ದರು. ನಿರ್ಮಲಾ ಗೌರಿ ಸ್ವಾಗತಿಸಿದರು. ಎಸ್.ಎಸ್. ಮಠದ ವಂದಿಸಿದರು. ಪಿ.ಎಲ್. ಪಾಟೀಲ ಕಾರ್ಯಕ್ರಮ ನಿರೂಪಿಸಿದರು.