ರಾಮನಗರ: ರೇವಣಸಿದ್ಧರು ಒಬ್ಬರೇ ಅಲ್ಲ, ಅವರದು ಒಂದು ಗುರು ಪರಂಪರೆ ಎಂದು ಶಿವಗಂಗಾ ಕ್ಷೇತ್ರದ ಮೇಲಣಗವಿ ಸಂಸ್ಥಾನಮಠದ ಮಲಯಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ರೇವಣಸಿದ್ಧರ ಬಗ್ಗೆ ಹೆಚ್ಚಿನ ಅಧ್ಯಯನ, ಸಂಶೋಧನೆಗಳು ನಡೆಯಬೇಕಿದೆ. ಈ ನಿಟ್ಟಿನಲ್ಲಿ ಸಂಶೋಧಕರು, ವಿದ್ವಾಂಸರು ಮುಂದಿನ ದಿನಗಳಲ್ಲಿ ಸತ್ಯಾಂಶವನ್ನು ಜಗಜ್ಜಾಹೀರು ಪಡಿಸಿದರೆ, ರೇವಣಸಿದ್ಧರ ಬಗ್ಗೆ ಎದ್ದಿರುವ ಗೊಂದಲಗಳಿಗೆ ಇತಿಶ್ರೀ ಹಾಡಿದಂತಾಗುತ್ತದೆ ಎಂದು ತಿಳಿಸಿದರು.
ವೀರಶೈವ ಸಿದ್ಧಾಂತ ಉಪದೇಶ:ಸಾಹಿತಿ ಡಾ.ಸಿ.ಶಿವಕುಮಾರಸ್ವಾಮಿ ಮಾತನಾಡಿ, ರೇಣುಕಾದಿ ಪಂಚಾಚಾರ್ಯರು ನಾಲ್ಕು ಯುಗಗಳಲ್ಲಿಯೂ ಬೇರೆ ಬೇರೆ ಹೆಸರುಗಳಿಂದ ಭೂಲೋಕದ ಶಿವಲಿಂಗಗಳಿಂದ ಅವತರಿಸಿ ವೀರಶೈವ ಸಿದ್ದಾಂತವನ್ನು ಸ್ಥಾಪಿಸಿದರು. ಅವರಲ್ಲಿ ಮೊದಲನೆಯವರು ರೇಣುಕಾಚಾರ್ಯರು. ಇವರು ಕೊಲ್ಲಿ ಪಾಕಿಯ ಸೋಮೇಶ್ವರಲಿಂಗದಿಂದ ಅವತರಿಸಿದರು. ಅವರು ಕೃತಾಯುಗದಲ್ಲಿ ಅವರಿಗೆ ಏಕಾಕ್ಷರ, ತೇತ್ರಾಯುಗದಲ್ಲಿ ಏಕವಕ್ತ್ರ ದ್ವಾಪರಯುಗದಲ್ಲಿ ರೇಣುಕಾ ಮತ್ತು ಕಲಿಯುಗದಲ್ಲಿ ರೇವಣಸಿದ್ಧ ಅಥವಾ ರೇವಣಾರಾಧ್ಯ ಎಂಬ ಹೆಸರುಗಳಿಂದ ಪ್ರಸಿದ್ದರಾದರು ಎಂದು ಹೇಳಿದರು.
ಇತಿಹಾಸಕಾರರು ಮತ್ತು ಪ್ರಾಚೀನ ಕವಿಗಳು ರೇಣುಕಾಚಾರ್ಯ ಮತ್ತು ರೇವಣಸಿದ್ಧರನ್ನು ಒಬ್ಬರೇ ಎಂಬುದಾಗಿ ಸಮೀಕರಿಸಿ ತಮ್ಮ ಕಾವ್ಯಗಳನ್ನು ರಚನೆ ಮಾಡಿದ್ದಾರೆ. ಅವರಲ್ಲಿ ಹರಿಹರನು ಪ್ರಮುಖನು. ಹರಿಹರ ತನ್ನ ರೇವಣಸಿದ್ದೇಶ್ವರ ರಗಳೆಯಲ್ಲಿ ರೇವಣಸಿದ್ಧರು 1400 ವರ್ಷಗಳ ಕಾಲ ಅಂದರೆ 700 ವರ್ಷಗಳ ಕಾಲ ಗುಪ್ತವಾಗಿ, 700 ವರ್ಷಗಳ ಕಾಲ ಪ್ರಕಟವಾಗಿದ್ದರು ಎಂದು ನಿರೂಪಸಿದ್ದನ್ನು ನಂತರದ ವಿದ್ವಾಂಸರು ಒಬ್ಬನೇ ರೇವಣಸಿದ್ಧ ಎಂಬುದಾಗಿ ಪ್ರತಿಪಾದನೆ ಮಾಡಿದ್ದಾರೆ. ಆದರೆ ರೇವಣಸಿದ್ಧರು ಒಬ್ಬರೆ ಅಲ್ಲ, ಅದು ಒಂದು ಪರಂಪರೆ ಎಂದು ತಿಳಿಸಿದರು.
8ನೇ ಶತಮಾನದ ಆದಿ ಶಂಕರಾಚಾರ್ಯರಿಗೆ ಚಂದ್ರಮೌಳೀಶ್ವರಲಿಂಗ ಮತ್ತು ರತ್ನಗರ್ಭ ಗಣಪತಿಯನ್ನು ರಂಭಾಪುರಿ ಪೀಠದ ಜಗದ್ಗುರುಗಳಾಗಿದ್ದ ಆ ಕಾಲದ ರೇವಣಸಿದ್ಧರು ಪ್ರದಾನ ಮಾಡಿರುವ ವಿಷಯ ಶೃಂಗೇರಿ ಪೀಠದ ಇತಿಹಾಸವನ್ನು ನಿರೂಪಿಸಿರುವ ಕಾಶಿಲಕ್ಷ್ಮಣಶಾಸ್ತ್ರಿ ವಿರಚಿತ ಗುರುವಂಶ ಕಾವ್ಯದಲ್ಲಿ ಪ್ರತಿಪಾದಿತವಾಗಿರುವುದನ್ನು ಉಲ್ಲೇಖಿಸಿದರು.
‘ಶಿವಕುಲತಿಲಕ ಆಚಾರ್ಯ ಶ್ರೀ ರೇವಣಸಿದ್ಧೇಶ್ವರ’ ಕೃತಿಯ ಕರ್ತೃ ವಿದ್ವಾನ್ ಚಂದ್ರಶೇಖರಯ್ಯ ಮಾತನಾಡಿ, ರಾಮನಗರದಲ್ಲಿರುವ ರೇವಣಸಿದ್ಧೇಶ್ವರ ಬೆಟ್ಟ ಪ್ರಸಿದ್ಧ ಧಾರ್ಮಿಕ ಸ್ಥಳವಾಗಿದೆ. ರೇವಣಸಿದ್ಧರನ್ನು ಕುರಿತು ಸರಳವಾಗಿ ಬರೆದಿದ್ದೇನೆ ಎಂದು ತಿಳಿಸಿದರು.
ಸಮಾರಂಭದಲ್ಲಿ ನಿವೃತ್ತ ಡಿಜಿಪಿ ಎಲ್. ರೇವಣಸಿದ್ಧಯ್ಯ, ಗುಬ್ಬಿ ತೋಟದಪ್ಪ ಧರ್ಮಸಂಸ್ಥೆಯ ಕಾರ್ಯದರ್ಶಿ ಸದಾಶಿವಪ್ಪ, ಶ್ರೀ ರೇವಣಸಿದ್ಧೇಶ್ವರ ಕ್ಷೇತ್ರಾಭಿವೃದ್ಧಿ ಸೇವಾ ಸಮಿತಿ ಟ್ರಸ್ಟಿನ ರೇಣುಕಾನಂದಸ್ವಾಮಿ, ಚನ್ನಬಸಪ್ಪ, ಸಾಧನ ಶಾಲೆಯ ಮುಖ್ಯಶಿಕ್ಷಕ ಎಂ.ಎಸ್. ಚನ್ನವೀರಪ್ಪ , ಗಂಗಾಬಿಕಾ, ಶಿಕ್ಷಕಿ ಕೆ.ಆರ್. ವಿನುತಾ , ಉಪನ್ಯಾಸಕ ವೇಣುಗೋಪಾಲ್ ಉಪಸ್ಥಿತರಿದ್ದರು.
ರಾಮನಗರ ತಾಲೂಕಿನ ಅವ್ವೇರಹಳ್ಳಿ ಶ್ರೀ ರೇವಣಸಿದ್ಧೇಶ್ವರಸ್ವಾಮಿ ದಾಸೋಹ ಭವನದಲ್ಲಿ ‘ಶಿವಕುಲತಿಲಕ ಆಚಾರ್ಯ ಶ್ರೀ ರೇವಣಸಿದ್ಧೇಶ್ವರ’ ಕೃತಿಯನ್ನು ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ರಾಜಶೇಖರ್ ಬಿಡುಗಡೆ ಮಾಡಿದರು. ಶಿವಾಚಾರ್ಯ ಶ್ರೀ, ವಿದ್ವಾನ್ ಚಂದ್ರಶೇಖರಯ್ಯ, ನಿವೃತ್ತ ಡಿಜಿಪಿ ರೇವಣಸಿದ್ಧಯ್ಯ ಇತರರಿದ್ದರು.