ಬಿಡದಿ ಟೌನ್‌ಶಿಪ್ ಯೋಜನೆಯನ್ನು ಶತಾಯಗತಾಯ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಒಂದೊಂದೇ ಪಂಚಾಯತಿಗೆ ಅಧಿಸೂಚನೆ ಹೊರಡಿಸಿ ಯೋಜನೆ ಜಾರಿಗೊಳಿಸಲು ತೀರ್ಮಾನಿಸಿದೆ. ಪ್ರಧಾನಿ ಮೋದಿ ಅವರಿಗೆ ಪತ್ರ ಬರೆಯಲೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿರ್ಧರಿಸಿದ್ದಾರೆ.
ಬೆಂಗಳೂರು : ಬಿಡದಿ ಟೌನ್‌ಶಿಪ್ ಯೋಜನೆಯನ್ನು ಶತಾಯಗತಾಯ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಒಂದೊಂದೇ ಪಂಚಾಯತಿಗೆ ಅಧಿಸೂಚನೆ ಹೊರಡಿಸಿ ಯೋಜನೆ ಜಾರಿಗೊಳಿಸಲು ತೀರ್ಮಾನಿಸಿದೆ.
ಇದಲ್ಲದೆ, ಟೌನ್‌ಶಿಪ್‌ಗಳನ್ನು ನಿರ್ಮಿಸುವಂತೆ ತಮಗೆ ಸಲಹೆ ನೀಡಿರುವ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆಯಲೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿರ್ಧರಿಸಿದ್ದಾರೆ.
‘ನೀವು ನೋಡಿದರೆ ಬಿಡದಿ ಟೌನ್‌ಶಿಪ್ ವಿಚಾರಕ್ಕೆ ಪ್ರಶಂಶಿಸಿ ಬೆನ್ನು ತಟ್ಟಿದ್ದೀರಿ. ಆದರೆ, ನಿಮ್ಮವರು ರಾಜಕೀಯವಾಗಿ ವಿರೋಧ ಮಾಡುತ್ತಿದ್ದಾರೆ’ ಎಂದು ದೂರಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಡಿಎಲ್‌ಎಫ್ ಅವರು 400 ಕೋಟಿ ರು. ಠೇವಣಿ ಸಹ ಇಟ್ಟಿದ್ದರು
ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗಲೇ ಬಿಡದಿ, ಸೋಲೂರು, ಸಾತನೂರು, ನಂದಗುಡಿ ಸೇರಿ ಐದು ಉಪನಗರ ಯೋಜನೆ ಮಾಡಬೇಕು ಎಂದು ಸ್ವಾಧೀನಕ್ಕೆಅಧಿಸೂಚನೆ ಹೊರಡಿಸಿದ್ದರು. ಆಗ ಇದಕ್ಕಾಗಿ ಡಿಎಲ್‌ಎಫ್ ಅವರು 400 ಕೋಟಿ ರು. ಠೇವಣಿ ಸಹ ಇಟ್ಟಿದ್ದರು. ಬಳಿಕ ಈ ಯೋಜನೆ ಜಾರಿ ಮಾಡದ ಎಚ್.ಡಿ. ಕುಮಾರಸ್ವಾಮಿ ಅವರು ಜಮೀನನ್ನು ಅಧಿಸೂಚನೆಯಿಂದ ಕೈಬಿಡಲು ಡಿನೋಟಿಫೈ ಮಾಡಲಿಲ್ಲ. ಬದಲಿಗೆ ರೆಡ್ ಜೋನ್ ಎಂದು ಮಾಡಿ ಅಲ್ಲಿನ ರೈತರು ಜಮೀನು ಮಾರಾಟ, ಖರೀದಿ ವ್ಯವಹಾರ ಮಾಡದಂತೆ ಅತಂತ್ರಗೊಳಿಸಿದ್ದಾರೆ.
ಆಗ ಕುಮಾರಸ್ವಾಮಿ ಅವರು ಪ್ರತಿ ಎಕರೆಗೆ 50-60 ಲಕ್ಷ ರು. ಹಣ ಅಥವಾ ಪ್ರತಿ ಎಕರೆಗೆ 8,000 ಚದರಡಿ ಅಭಿವೃದ್ಧಿಪಡಿಸಿದ ಜಮೀನು ಪರಿಹಾರವಾಗಿ ನೀಡುವುದಾಗಿ ಪ್ರಕಟಿಸಿದ್ದರು. ಆದರೆ ನಮ್ಮ ಸರ್ಕಾರ 2.5 ಕೋಟಿ ರು.ವರೆಗೆ ಪರಿಹಾರ ಅಥವಾ ಶೇ.50 ರಷ್ಟು ಅಭಿವೃದ್ಧಿಪಡಿಸಿದ ಜಮೀನು ನೀಡಲು ಮುಂದಾಗಿದ್ದೇವೆ. ಹೀಗಿದ್ದರೂ ರಾಜಕೀಯ ಕಾರಣಗಳಿಗೆ ವಿರೋಧ ಮಾಡಲಾಗುತ್ತಿದೆ ಎಂದು ಪ್ರಧಾನಿ ಮೋದಿ ಅವರಿಗೆ ತಿಳಿಸಲು ಶಿವಕುಮಾರ್ ಅವರು ಚಿಂತನೆ ನಡೆಸಿದ್ದಾರೆ. ಇದೇ ವೇಳೆ ಬಿಜೆಪಿ ಸರ್ಕಾರದ ಅವಧಿಯಲ್ಲೇ 1,000 ಎಕರೆ ಜಮೀನು ಸ್ವಾಧೀನಪಡಿಸಿಕೊಂಡ ವಿಚಾರವನ್ನೂ ಪ್ರಸ್ತಾಪಿಸಲಿದ್ದಾರೆ.
ಬಗರ್ ಹುಕುಂ ಸಮಸ್ಯೆ:
ಯೋಜನೆಗೆ ಗುರುತಿಸಿರುವ ಜಮೀನಿನಲ್ಲಿ 1,500 ಎಕರೆ ಜಮೀನು ಬಗರ್ ಹುಕುಂ ಸಾಗುವಳಿ ಮಾಡಿಕೊಂಡಿದ್ದು, ಕೆಂಪು ವಲಯದ ಹಿನ್ನೆಲೆಯಲ್ಲಿ ಕೆಲವರಿಗೆ ಸೂಕ್ತ ದಾಖಲೆಗಳು ಸೃಜನೆಯಾಗಿಲ್ಲ. ಇಂಥ ಶೇ.20 ರಷ್ಟು ಜಮೀನುಗಳನ್ನು ಕೆಲ ಬ್ರೋಕರ್‌ಗಳು ಅಗ್ರಿಮೆಂಟ್ ಮಾಡಿಸಿಕೊಂಡಿದ್ದು, ಅವರು ತಮಗೆ ಪರಿಹಾರ ಬರಲ್ಲ ಎಂಬ ಕಾರಣಕ್ಕೆ ಹೋರಾಟ ಮಾಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರ ಆರೋಪಿಸಿದೆ.
ಜತೆಗೆ ಎಚ್.ಡಿ. ಕುಮಾರಸ್ವಾಮಿ ಹಾಗೂ ಕುಟುಂಬ ಸದಸ್ಯರು ಹೊಂದಿರುವ ಆಸ್ತಿಗಳು, ಅವರ ದ್ವಂದ್ವ ನಿಲುವು ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಸರ್ಕಾರ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

