ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಬಿಡದಿ ಟೌನ್ ಶಿಪ್ ವಿಚಾರದಲ್ಲಿ ವಿಪಕ್ಷಗಳು ರೈತರನ್ನು ಆರ್ಥಿಕ ಸಂಕಷ್ಟಕ್ಕೆ ನೂಕಲು ತಂತ್ರ ರೂಪಿಸಿದ್ದಾರೆ ಎಂದು ಶಾಸಕ ಕೆ.ಎಂ.ಉದಯ್ ಕಿಡಿಕಾರಿದರು.ಸಮೀಪದ ಚಂದೂಪುರ ಗ್ರಾಮದಲ್ಲಿ ಕಾವೇರಿ ನೀರಾವರಿ ನಿಗಮದಿಂದ ಸುಮಾರು 1.77 ಕೋಟಿ ರು. ವೆಚ್ಚದಲ್ಲಿ ಅಗಸರಹಳ್ಳಕ್ಕೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರೆವೇರಿಸಿ ಮಾತನಾಡಿ, ರೈತರು ಟೌನ್ ಶಿಪ್ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಆದರೆ, ವಿಪಕ್ಷಗಳು ಅವರನ್ನು ಎತ್ತಿಕಟ್ಟಿ ಸರ್ಕಾರದ ವಿರುದ್ಧ ಚೂ ಬಿಟ್ಟಿದ್ದಾರೆ ಎಂದು ಆರೋಪಿಸಿದರು.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚರ್ಚೆಗೆ ದಿನಾಂಕ ನಿಗದಿ ಮಾಡಿ ಆಹ್ವಾನ ನೀಡಿದ್ದಾರೆ. ಅದನ್ನು ಬಿಟ್ಟು ಬಿಡದಿ ಬೈರಮಂಗಲಕ್ಕೆ ಜೂನ್ 27ರಂದು ಚರ್ಚೆಗೆ ಬನ್ನಿ ಎಂದು ಎಚ್‌ಡಿಕೆ ತಿಳಿಸಿದ್ದಾರೆ. ಆ ದಿನ ಕೆಂಪೇಗೌಡ ಜಯಂತಿ ಸೇರಿದಂತೆ ಸಿಎಂಗೆ ಹಲವು ಸರ್ಕಾರಿ ಕಾರ್ಯಕ್ರಮಗಳಿವೆ. ಆ ದಿನ ಚರ್ಚೆಗೆ ಆಹ್ವಾನ ತರವಲ್ಲ ಎಂದರು.ಮಾಜಿ ಸಿಎಂ ಸದಾನಂದಗೌಡ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಚುನಾವಣಾ ಮಾಂತ್ರಿಕ ಎಂದಿದ್ದಾರೆ. ಒಕ್ಕಲಿಗ ಸಮುದಾಯದ ಶಾಸಕರಲ್ಲದೇ ವಿಪಕ್ಷದ ಹಲವು ಶಾಸಕರು ಡಿಕೆಶಿ ಅವರ ಕಾರ್ಯ ವೈಖರಿಯನ್ನು ಮೆಚ್ಚಿಗೆ ವ್ಯಕ್ತಪಡಿಸಿರುವುದು ಅವರ ಆಡಳಿತ ವೈಖರಿ ತೋರಿಸುತ್ತದೆ ಎಂದು ಶ್ಲಾಘಿಸಿದರು.
ರೈತರ ಬೆಳಗಳಿಗೆ ಅವಶ್ಯಕತೆ ಇರುವ ರಾಸಾಯನಿಕ ಗೊಬ್ಬರವನ್ನು ರೈತರಿಗೆ ವಂಚಿಸಿ ದುಪ್ಪಟ್ಟು ಮಾರಾಟ ಮಾಡುವುದು ಕಂಡು ಬಂದರೆ ಅಂತವರ ವಿರುದ್ಧ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಮದ್ದೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪಣ ತೊಟ್ಟಿದ್ದೇನೆ. ನೀರಾವರಿ ಕ್ಷೇತ್ರಕ್ಕೆ ಒಂದೂ ಸಾವಿರ ಕೋಟಿಗೂ ಅಧಿಕ ಅನುದಾನ ತಂದು ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಕೊಳ್ಳಲು ಹಗಲಿರುಳು ಶ್ರಮಿಸುತ್ತಿದ್ದೇನೆ ಎಂದರು.
ಈಗಾಗಲೇ ಸೂಳೆಕೆರೆ ನಾಲಾಭಿವೃದ್ಧಿ, ಕೆಮ್ಮಣ್ಣು ಕಾಲುವೆ ಅಭಿವೃದ್ಧಿ, ಬನ್ನಹಳ್ಳಿ ಏತನೀರಾವರಿ, ತಿಟ್ಟಮೇಲನಹಳ್ಳಿ ಏತ ನೀರಾವರಿ ಕಾಮಗರಿಯೂ ಪ್ರಗತಿ ಹಂತದಲ್ಲಿದೆ. ಇದರಿಂದ ಶೀಘ್ರದಲ್ಲೇ ಕಾಮಗಾರಿಯೂ ಪೂರ್ಣಗೊಂಡು ರೈತರ ಸಾವಿರಾರು ಎಕರೆಗಳಿಗೆ ನೀರೊದುಗುತ್ತದೆ. ನೀರಿನ ಬವಣೆಗೆ ಶಾಶ್ವತ ಮುಕ್ತಾಯವಾಗಲಿವೆ ಎಂದರು.ಈ ವೇಳೆ ಮದ್ದೂರು ಗ್ಯಾರಂಟಿ ಯೋಜನೆ ಅಧ್ಯಕ್ಷ ಬಿ.ಬಸವರಾಜು, ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಎ.ಎಸ್.ರಾಜೀವ್, ಮನ್ಮುಲ್ ನಿರ್ದೇಶಕ ಹರೀಶ್ ಬಾಬು, ಗ್ರಾಪಂ ಮಾಜಿ ಅಧ್ಯಕ್ಷ ಕದಲೂರು ತಿಮ್ಮೇಗೌಡ, ಮುಖಂಡರಾದ ಹರೀಶ್ ಪಾಪಣ್ಣ, ಹಾಗಲಹಳ್ಳಿ ಶೇಖರ್, ಎಚ್.ಸಿ.ಕೆಂಪೇಗೌಡ, ಪುಟ್ಟಮಾದು, ಕೃಷ್ಣ, ಶಿವಲಿಂಗೇಗೌಡ, ವಿಶ್ವನಾಥ್, ಪ್ರಕಾಶ್, ರವಿ, ಚನ್ನಪ್ಪ, ಪುಟ್ಟೇಗೌಡ ಸೇರಿದಂತೆ ಮತ್ತಿತರರು ಇದ್ದರು.