ಕನ್ನಡಪ್ರಭ ವಾರ್ತೆ ಬೇಲೂರು

ಮರದಿಂದ ಉದುರಿದ ಮಾವಿನ ಹಣ್ಣು ತಿನ್ನಲು ಅಡ್ಡಿಯಾದ ಕಾರನ್ನು ಕಾಡಾನೆಯೊಂದು ಎಳೆದಾಡಿ ಜಖಂಗೊಳಿಸಿರುವ ಘಟನೆ ಅರೆಹಳ್ಳಿ ಹೋಬಳಿಯ ಮಲ್ಲಾಪುರ ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.ಪ್ರಗತಿಪರ ರೈತ ಗಂಗಾಧರ ಅವರ ಮನೆಯ ಅಂಗಳಕ್ಕೆ ಮರಿಯೊಂದಿಗೆ ಬಂದ ಕಾಡಾನೆಯೊಂದು ಮನೆಯ ಮುಂಭಾಗದಲ್ಲಿದ್ದ ಮಾವಿನ ಮರದ ಹಣ್ಣುಗಳನ್ನು ನೆಲಕ್ಕೆ ಕೆಡವಿ ತಿನ್ನಲು ಮುಂದಾಗಿದೆ. ಈ ವೇಳೆ ಕೆಲವು ಹಣ್ಣುಗಳು ಮರದಡಿಯಲ್ಲಿ ನಿಲ್ಲಿಸಿದ್ದ ಕಾರಿನ ಕೆಳಗೆ ಬಿದ್ದಿದ್ದರಿಂದ ಅವುಗಳನ್ನು ತಿನ್ನಲು ಯತ್ನಿಸಿದೆ . ಮಾವಿನ ಮರದ ಕೆಳಗೆ ನಿಂತಿದ್ದ ಕಾರು ಅಡ್ಡಿಯಾಗಿದ್ದರಿಂದ ಆಚೆಯಿಂದ ಈಚೆಗೆ ಎಳೆದಾಡಿದೆ.ಇದರ ಪರಿಣಾಮ ಕಾರಿನ ಗಾಜುಗಳು, ಬಾನೆಟ್ ಸೇರಿದಂತೆ ಹಲವು ಭಾಗಗಳು ಹಾನಿಗೊಳಗಾಗಿವೆ. ಕೆಲ ದಿನಗಳಿಂದ ಮನೆಯ ದುರಸ್ತಿ ಕಾಮಗಾರಿ ನಡೆಯುತ್ತಿದ್ದ ಕಾರಣ ಕಾರನ್ನು ಮನೆಯ ಮುಂಭಾಗದ ಮರದಡಿಯಲ್ಲಿ ನಿಲ್ಲಿಸಲಾಗಿತ್ತು ಎಂದು ತಿಳಿಸಿದ್ದಾರೆ.ತಡರಾತ್ರಿ ಸುಮಾರು 12 ಗಂಟೆ ವೇಳೆಗೆ ಸುಮಾರು 10 ಕಾಡಾನೆಗಳ ಗುಂಪು ಗ್ರಾಮಕ್ಕೆ ಬಂದಿದ್ದು, ಅವುಗಳಲ್ಲಿ ಮರಿಯೊಂದಿಗಿದ್ದ ತಾಯಿ ಕಾಡಾನೆ ಮನೆಯ ಅಂಗಳ ಪ್ರವೇಶಿಸಿತ್ತು. ಘಟನೆ ನಡೆದ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಕಾಡಾನೆಗಳನ್ನು ಕಾಡಿನತ್ತ ಹಿಮ್ಮೆಟ್ಟಿಸಿದ್ದಾರೆ.ಈ ಕುರಿತು ಮಾತನಾಡಿದ ರೈತ ಗಂಗಾಧರ, “ಅರಣ್ಯ ಇಲಾಖೆ ತ್ವರಿತವಾಗಿ ನಷ್ಟಪರಿಹಾರ ನೀಡಬೇಕು. ಅಲ್ಲದೆ ಕಾಡಾನೆಗಳನ್ನು ಕಾಡಿನಲ್ಲೇ ನಿಯಂತ್ರಿಸಿ ಗ್ರಾಮಸ್ಥರು ನೆಮ್ಮದಿಯಿಂದ ಬದುಕಲು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.ಅರೆಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇತ್ತೀಚೆಗೆ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ರೈತರು ಹಾಗೂ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.