ಕನ್ನಡಪ್ರಭ ವಾರ್ತೆ ಮಂಡ್ಯ
ಭಾರತೀಯ ಸಂಸ್ಕೃತಿಯ ದಾಂಪತ್ಯ ಜೀವನ ಮತ್ತು ಸಂಸಾರ ವ್ಯವಸ್ಥೆ ವಿಶ್ವಕ್ಕೆ ಮಾದರಿಯಾಗಿದೆ ಎಂದು ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ಎಂ.ವಿನಯ್‌ಕುಮಾರ್ ಅಭಿಪ್ರಾಯಪಟ್ಟರು.ನಗರದ ಗಾಂಧಿ ಭವನದಲ್ಲಿ ಸಂಗೀತ ನೃತ್ಯ ಕಲಾ ನಿಕೇತನ ಟ್ರಸ್ಟ್, ಪರಿಸರ ಅಲಯನ್ಸ್ ಸಂಸ್ಥೆ ಆಯೋಜಿಸಿದ್ದ ಗೀತಗಾಯನ ಹಾಗೂ ಆದರ್ಶ ದಂಪತಿಗಳಿಗೆ ರಾಜ್ಯ ಮಟ್ಟದ ಸಾಧನೆ ಸಿರಿ ಪ್ರಶಸ್ತಿ ಸನ್ಮಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಪೂರ್ವಿಕರು ಹಾಕಿಕೊಟ್ಟ ಸಾಂಸಾರಿಕ ಜೀವನ ವ್ಯವಸ್ಥೆ ಬೇರೆ ದೇಶಗಳಿಗೆ ಮಾದರಿಯಾಗಿದೆ. ಜೀವನಚಕ್ರದ ವಯಸ್ಸಿನ ಆಧಾರದಲ್ಲಿ ಬಾಲ್ಯ, ಸಂಸ್ಕಾರ, ಯೌವ್ವನ, ಮದುವೆ, ಸಂಸಾರ, ಮಕ್ಕಳು, ವೃದ್ದಾಪ್ಯ ವ್ಯವಸ್ಥೆಯೊಳಗೆ ಸಾಧನೆ ಮಾಡುವ ಹಂಬಲ ತುಂಬಾ ಚೆನ್ನಾಗಿದೆ ಎಂದು ನುಡಿದರು.ಇತ್ತೀಚಿನ ದಿನಗಳಲ್ಲಿ ಒಂದು ಕುಟುಂಬ ಆದರ್ಶಜೀವನ ನಡೆಸುವುದು ತುಂಬ ಕಷ್ಟಕರವಾಗಿದೆ, ದಾಂಪತ್ಯ ಜೀವನ ಅನ್ಯೋನ್ಯತೆಯಿಂದ ಕೂಡಿದರೆ ಮಾತ್ರ ಸಂಸಾರ ಸ್ವರ್ಗ ಎನ್ನಬಹುದು, ಮದುವೆಯಾದ ಮೇಲೆ ಮಕ್ಕಳಾಗುವುದನ್ನು ಅತಿಯಾಗಿ ಮುಂದೂಡಬಾರದು, ವೃದ್ದತೆಯಲ್ಲಿ ಬಾಲ್ಯವಯಸ್ಸಿನ ಮಕ್ಕಳು ಇದ್ದರೆ ಪೋಷಣೆ ಕಷ್ಟಕರವಾಗುತ್ತದೆ ಎಂದು ಸಲಹೆ ನೀಡಿದರು.
ಜೈ ಕರ್ನಾಟಕ ಪರಿಷತ್ ರಾಜ್ಯಾಧ್ಯಕ್ಷ ಎಸ್.ನಾರಾಯಣ್, ಸಮಾನತೆಯಿಂದ ಸಂಸಾರ ಸಾಗಿಸಿದವರೇ ಆದರ್ಶ ದಂಪತಿಗಳಾಗುತ್ತಾರೆ, ಮನೆಯಲ್ಲಿ ಗಂಡ-ಹೆಂಡತಿ ಜಗಳ ಆಗಬೇಕು, ನಂತರ ಒಬ್ಬರು ಸೋತಾಗ ಪ್ರೀತಿ, ಹೊಣೆಗಾರಿಕೆ ಹೆಚ್ಚಾಗುತ್ತದೆ, ಆಗ ಎಚ್ಚರಿಕೆಯಿಂದ ಜೀವನ ಸಾಗುತ್ತದೆ, ಹೊಂದಾಣಿಕೆ ಮತ್ತಷ್ಟು ವೃದ್ದಿಸುತ್ತದೆ ಎಂದರು.
ದಾಸರ ಕೀರ್ತನೆಗಳಲ್ಲಿ ನಿಂದಿಸುವವರು ಇರಬೇಕಯ್ಯ, ಸಂಸಾರ ಸಾಗರ, ಇಚ್ಚೆಯುಳ್ಳ ಮಡದಿ ಇದ್ದರೆ ಸ್ವರ್ಗಕ್ಕೆ ಕಿಚ್ಚು ಹಚ್ಚಿದಂತೆ ಎನ್ನುವ ಅನುಭವ ಮಾತುಗಳು ಸತ್ಯವಾಗಿವೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಗಣ್ಯರ ಸಮ್ಮುಖದಲ್ಲಿ ಆದರ್ಶ ದಂಪತಿಗಳಿಗೆ ರಾಜ್ಯಮಟ್ಟದ ಸಾಧನೆ ಸಿರಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಗಾಯಕರು ಗೀತಾಗಾಯನ ನಡೆಸಿಕೊಟ್ಟರು.ಕಾರ್ಯಕ್ರಮದಲ್ಲಿ ಅಲಯನ್ಸ್ ಸಂಸ್ಥೆಯ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು, ಕೊಪ್ಪಳ ಜಿಲ್ಲೆಯ ಶಿವಯೋಗಿ ಶರಣ ಶ್ರೀ ಮಹೇಶ್ವರ ತಾತ, ಉದ್ಯಮಿ ಶಿವಕುಮಾರ್, ಸಮಾಜಸೇವಕ ಡಾ.ನೂರ್‌ಅಹಮ್ಮದ್, ಅಲಯನ್ಸ್ ಸಂಸ್ಥೆ ಜಿಲ್ಲಾ ರಾಜ್ಯಪಾಲ ಕೆ.ಆರ್.ಶಶಿಧರ್ ಈಚಗೆರೆ, ಜಿಲ್ಲಾ ರಾಯಭಾರಿ ಡಾ.ವೈ.ಎಚ್.ರತ್ನಮ್ಮ, ಸಂಗೀತನೃತ್ಯ ಕಲಾನಿಕೇತನ ಟ್ರಸ್ಟ್ನ್ ರಾಜ್ಯಾಧ್ಯಕ್ಷೆ ಶೋಭಾ ಪಿ.ಗೌಡ, ಎಚ್.ಎನ್.ರಂಗನಾಥ್, ರಂಗಭೂಮಿ ಕಲಾವಿದ ಬಸವರಾಜು ಮತ್ತಿತರರಿದ್ದರು.