ಇತ್ತೀಚೆಗೆ ನಿಗಮ ಮಂಡಳಿಗಳು, ತಾಲೂಕು ಕಚೇರಿಗಳಲ್ಲಿ ವಿಶ್ವಕರ್ಮ ಸಮುದಾಯದ ಬಂಧುಗಳು ತಮಗೆ ಸಿಗಬೇಕಿರುವ ಸೌಲಭ್ಯಗಳನ್ನು ಪಡೆಯಲು ಅರ್ಜಿ ಸಲ್ಲಿಸಿ ಸಾಕಷ್ಟು ದಿನ ಕಾದು ಕುಳಿತರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಸರ್ಕಾರದ ಸೌಲಭ್ಯ ಪಡೆಯುವಲ್ಲಿ ವಿಶ್ವಕರ್ಮ ಸಮುದಾಯ ಹಿಂದುಳಿದಿದೆ. ಅರ್ಹ ಸೌಲಭ್ಯಗಳನ್ನು ಪಡೆಯಲು ಅಧಿಕಾರಿಗಳನ್ನು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಭುವನ ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಎನ್.ಬಸವರಾಜು ಕರೆ ನೀಡಿದರು.

ಸುಭಾಷ್‌ ನಗರದ ಭುವನ ವಿಶ್ವಕರ್ಮ ಸಮಾಜ ಜಿಲ್ಲಾ ಕಚೇರಿಯಲ್ಲಿ ತಮ್ಮ 57ನೇ ಹುಟ್ಟುಹಬ್ಬದ ಅಂಗವಾಗಿ ಸ್ನೇಹಬಳಗದಿಂದ ಅಭಿನಂದನೆ ಸ್ವೀಕರಿಸಿ ಬಳಿಕ ಮಾತನಾಡಿ, ಇತ್ತೀಚೆಗೆ ನಿಗಮ ಮಂಡಳಿಗಳು, ತಾಲೂಕು ಕಚೇರಿಗಳಲ್ಲಿ ವಿಶ್ವಕರ್ಮ ಸಮುದಾಯದ ಬಂಧುಗಳು ತಮಗೆ ಸಿಗಬೇಕಿರುವ ಸೌಲಭ್ಯಗಳನ್ನು ಪಡೆಯಲು ಅರ್ಜಿ ಸಲ್ಲಿಸಿ ಸಾಕಷ್ಟು ದಿನ ಕಾದು ಕುಳಿತರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ ಎಂದರು.

ಕೆಲವು ಕಚೇರಿಗಳಲ್ಲಿ ಅರ್ಹ ಫಲಾನುಭವಿಗಳಿಗೆ ಸಲ್ಲಬೇಕಾದ ಸೌಲಭ್ಯಗಳನ್ನು ಅನರ್ಹರ ಪಾಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾವು ಸಂಬಂಧಪಟ್ಟ ಅಧಿಕಾರಿಗಳನ್ನು ಪ್ರಶ್ನಿಸಿ ಅವರ ಉತ್ತರ ಪಡೆದುಕೊಂಡರೆ ಮೇಲಾಧಿಕಾರಿಗಳಿಗೆ, ಲೋಕಾಯುಕ್ತರಿಗೂ ದೂರು ನೀಡಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.

ಸೌಲಭ್ಯ ವಂಚಿತರು ಭುವನ ವಿಶ್ವಕರ್ಮ ಸಮಾಜವನ್ನು ಸಂಪರ್ಕಿಸಿ ಮಾಹಿತಿ ನೀಡಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ನಾವು ಸಿದ್ಧರಿದ್ದೇವೆ. ಯಾರೂ ಕೂಡ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಬಾರದು ಎಂದರು.

ಇದಕ್ಕೂ ಮುನ್ನ ಮಿಮ್ಸ್ ಹೆರಿಗೆ ಆಸ್ಪತ್ರೆಯ ಮಮತೆಯ ಮಡಿಲುನ ದಾಸೋಹ ಕೇಂದ್ರದಲ್ಲಿ ಸಮಾಜದ ಪದಾಧಿಕಾರಿಗಳು ರೋಗಿಗಳ ಕಡೆಯವರಿಗೆ ಅನ್ನಸಂತರ್ಪಣೆ ನಡೆಸುವ ಮೂಲಕ ಎನ್.ಬಸವರಾಜು ಅವರಿಗೆ ಹುಟ್ಟುಹಬ್ಬದ ಶುಭ ಕೋರಿದರು.

ಈ ವೇಳೆ ಸಮಾಜದ ಜಿಲ್ಲಾ ಗೌರವಾಧ್ಯಕ್ಷ ಬಿ.ವಿ.ಸೋಮು, ಕಾರ್ಯದರ್ಶಿ ಕಟ್ಟೆ ಕೃಷ್ಣಸ್ವಾಮಿ, ಖಜಾಂಚಿ ಕೆ.ಸಿ.ಶ್ರೀನಿವಾಸ, ಸಂಘಟನಾ ಕಾರ್ಯದರ್ಶಿ ಎ.ಸಿ.ಗೋವಿಂದ ರಾಜು, ಜಿಲ್ಲಾ ನಿರ್ದೇಶಕರಾದ ಎಂ.ಬಿ.ಮಹೇಶ್, ಕೆ.ಸಿ.ಈರಣ್ಣ, ರವಿಕುಮಾರ್, ಮಹಾ ಪೋಷಕರಾದ ವೀರಪ್ಪಚಾರ್, ಜಿ.ವಿ.ಕೆ.ವಾಸು, ಮಹಿಳಾ ನಿರ್ದೇಶಕರಾದ ಪುಷ್ಪ, ಗೌರಮ್ಮ, ಡಾ.ಹುಸ್ಕೂರು ಕೃಷ್ಣೆಗೌಡ, ಸಿದ್ದರಾಜು ಸೇರಿದಂತೆ ವಿವಿಧ ಸಮಾಜಗಳ ಮುಖಂಡರು ಪಾಲ್ಗೊಂಡಿದ್ದರು.