ಹುಬ್ಬಳ್ಳಿ: ದೇಶದ ಆರ್ಥಿಕತೆ ಸದೃಢಗೊಳಿಸಲು ತೆರಿಗೆ ವ್ಯವಸ್ಥೆ ಸಮರ್ಪಕ ಮತ್ತು ಕಾನೂನು ಬದ್ಧವಾಗಿ ನಡೆಯಬೇಕು ಎಂದು ಕರ್ನಾಟಕ ರಾಜ್ಯ ಕಾನೂನು ವಿವಿ ಕುಲಪತಿ ಡಾ. ಸಿ. ಬಸವರಾಜು ಹೇಳಿದರು.
ಇಲ್ಲಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಇನ್ಸಿಟಿಟ್ಯೂಟ್ ಆಫ್ ಚಾರ್ಟ್‌ಡ್ ಟ್ಯಾಕ್ಸ್ ಪ್ರ್ಯಾಕ್ಟಿಷನರ್ಸ್ ಇಂಡಿಯಾ(ಐಸಿಟಿಪಿಐ) ಹಾಗೂ ಇನ್ಸಿಟಿಟ್ಯೂಟ್ ಆಫ್ ಟ್ರ್ಯಾಕ್ಸ್ ಪ್ಯಾಕ್ಟಿಷನರ್ಸ್ ಆಫ್ ಇಂಡಿಯಾ(ಐಟಿಪಿಐ) ಸಹಯೋಗದಲ್ಲಿ ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘದಿಂದ ಹಮ್ಮಿಕೊಂಡಿದ್ದ ಹುಬ್ಬಳ್ಳಿ ರಾಷ್ಟ್ರೀಯ ತೆರಿಗೆ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ದೇಶ ಮೂಲ ಸೌಕರ್ಯಗಳ ಅಭಿವೃದ್ಧಿಗೆ ತೆರಿಗೆಯೇ ಆಧಾರವಾಗಿದ್ದು, ಜನಕಲ್ಯಾಣ ಯೋಜನೆ, ವಿವಿಧ ಬಗೆಯ ಸವಲತ್ತುಗಳ ಸುಧಾರಣೆಗೆ ದೇಶದ ಅರ್ಥಿಕತೆ ಬಲಿಷ್ಠವಾಗಿರಬೇಕು. ತೆರಿಗೆ ವ್ಯಾಪ್ತಿಗೆ ಒಳಪಡುವ ಪ್ರತಿಯೊಬ್ಬರೂ ಸರಿಯಾಗಿ ತಮ್ಮ ಕರ್ತವ್ಯ ನಿರ್ವಹಿಸಬೇಕು. ಈ ನಿಟ್ಟಿನಲ್ಲಿ ತೆರಿಗೆದಾರರಲ್ಲಿ ಜಾಗೃತಿ ಮೂಡಿಸುವಲ್ಲಿ ಸಲಹೆಗಾರರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದರು.
ಪ್ರಸ್ತುತ ಸಾಮಾನ್ಯ ನಾಗರಿಕರು ಪ್ರಾಮಾಣಿಕವಾಗಿ ಪಾವತಿ ಮಾಡುತ್ತಾರೆ. ಆದರೆ, ಕೆಲ ಸಂದರ್ಭಗಳಲ್ಲಿ ಉಳ್ಳವರಲ್ಲಿ ಕೆಲವರು ತೆರಿಗೆ ಪಾವತಿಯಿಂದ ದೂರ ಉಳಿಯುತ್ತಾರೆ. ಇದು ಆಗಬಾರದು.
ತೆರಿಗೆ ವಂಚನೆ ತಡೆಯಲು ಕಾಯ್ದೆಗಳು ಸಮರ್ಪಕವಾಗಿ ಜಾರಿ ಆಗಬೇಕಿದ್ದು, ಈ ಕಾರ್ಯದಲ್ಲಿ ತೆರಿಗೆ ಸಲಹೆಗಾರರು ಕೈಜೋಡಿಸಬೇಕು ಎಂದರು.
ಇನ್ಸಿಟಿಟ್ಯೂಟ್ ಆಫ್ ಲಾ ಆ್ಯಂಡ್ ಪಾರ್ಲಿಮೆಂಟರಿಯ ನಿರ್ದೇಶಕ ಡಾ. ಸಿ.ಎಸ್. ಪಾಟೀಲ ಮಾತನಾಡಿ, ತೆರಿಗೆ ಸಲಹೆಗಾರರು ಯಾವುದೇ ಸಂದರ್ಭದಲ್ಲಿ ವೃತ್ತಿಪರತೆ ಮರೆಯಬಾರದು.
ಇದರಿಂದ ದೇಶದ ಆರ್ಥಿಕತೆಗೆ ತೊಂದರೆ ಉಂಟಾಗಲಿದೆ. ಹೀಗಾಗಿ, ತೆರಿಗೆ ಸಲಹೆಗಾರರು ಕಾನೂನು ಬದ್ಧವಾಗಿ ಮತ್ತು ಬದ್ಧತೆಯಿಂದ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದರು.
ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ನಂಜುಂಡ ಪ್ರಸಾದ, ಕೆಸಿಸಿಐ ಅಧ್ಯಕ್ಷ ಎಸ್.ಪಿ. ಸಂಶಿಮಠ, ಕೆಸಿಸಿಐ ಮಾಜಿ ಅಧ್ಯಕ್ಷ ವಸಂತ ಲದವಾ ಮಾತನಾಡಿದರು. ನಂತರ ಅಖಿಲ ಭಾರತ ತೆರಿಗೆ ಸಲಹೆಗಾರರ ಸಂಘದ ಚೇರಮನ್ ಶ್ರೀಧರ ಪಾರ್ಥಸಾರಥಿ ಅವರು ಸಮ್ಮೇಳನದ ಧ್ಯೇಯೋದ್ದೇಶಗಳನ್ನು ವಿವರಿಸಿದರು.
ಇದೇ ಸಂದರ್ಭದಲ್ಲಿ ಐಸಿಟಿಪಿಐ 8ನೇ ಸಂಸ್ಥಾಪನ ದಿನದ ಅಂಗವಾಗಿ ತೆರಿಗೆ ಸಲಹೆಗಾರರಿಗೆ ತರಬೇತಿ ಹಾಗೂ ವಿಶಿಷ್ಟ ದಾಖಲೆಯ ಗುರುತಿನ ಸಂಖ್ಯೆಯನ್ನು ನೀಡಲಾಯಿತು.
ತೆರಿಗೆ ಸಲಹೆಗಾರರ ಸಂಘದ ಕಾರ್ಯದರ್ಶಿ ಮುಕುಂದ ಪೋತ್ನಿಸ್, ರಾಷ್ಟ್ರೀಯ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ವೈ.ಎನ್. ಶರ್ಮಾ, ಐಸಿಟಿಪಿಐ ವಿಶೇಷ ಕರ್ತವ್ಯಾಧಿಕಾರಿ ವಿಷ್ಣುತಿರ್ಥ ಜಮಖಂಡಿ ಸೇರಿದಂತೆ ಹಲವರಿದ್ದರು.