ಗದಗ: ಭಯಮುಕ್ತ ವಾತಾವರಣದಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಂತೆ ನೋಡಿಕೊಳ್ಳಬೇಕೆಂದು ಬೆಳಗಾವಿಯ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರವಾಚಕ ಹಾಗೂ ಗದಗ ಜಿಲ್ಲಾ ಎಸ್‌ಎಸ್‌ಎಲ್‌ಸಿ ನೋಡಲ್ ಅಧಿಕಾರಿಯೂ ಆದ ಬಿ.ಎಸ್. ಮಾಯಾಚಾರಿ ಹೇಳಿದರು.
ಗುರುವಾರ ಗದಗ ಶಹರ ವಲಯ ಹಾಗೂ ಗ್ರಾಮೀಣ ವಲಯದ ಎಲ್ಲ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು ಹಾಗೂ ಪರೀಕ್ಷಾ ಕೇಂದ್ರಗಳ ಮಾರ್ಗಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪರೀಕ್ಷಾ ಕೇಂದ್ರಗಳಲ್ಲಿ ಮೂಲಭೂತ ಅವಶ್ಯಕತೆಗಳಾದ ಆಸನದ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸಿ.ಸಿ. ಕ್ಯಾಮೆರಾ ಹಾಗೂ ಇನ್ನಿತರ ಅಗತ್ಯ ತಯಾರಿ ಮಾಡಿಕೊಳ್ಳಬೇಕು. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಸೂಚಿಸಿದ ನಿಯಮಗಳಂತೆ ಮುಖ್ಯ ಅಧೀಕ್ಷಕರು ಮತ್ತು ಅಭಿರಕ್ಷಕರು ತಮ್ಮ ಪಾಲಿನ ಕರ್ತವ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವನ್ನು ನೀಡಬಾರದು ಮತ್ತು ಶಿಸ್ತಿನಿಂದ ಯಶಸ್ವಿಯಾಗಿ ಪರೀಕ್ಷೆ ನಡೆಸಬೇಕು ಎಂದರು.ಕೊಠಡಿ ಮೇಲ್ವಿಚಾರಕರು ತಮಗೆ ವಹಿಸಿದ ಬ್ಲಾಕ್‌ನಲ್ಲಿ ಯಾವುದೇ ಎಲೆಕ್ಟ್ರಾನಿಕ್ಸ್ ಉಪಕರಣಗಳಿಗೆ ಅವಕಾಶ ನೀಡದೇ ವಿದ್ಯಾರ್ಥಿಗಳನ್ನು ತಪಾಸಣೆ ಮಾಡಿ ಪರೀಕ್ಷೆ ಬರೆಯಲು ಬಿಡಬೇಕು. ಪರೀಕ್ಷಾ ಬ್ಲಾಕ್‌ನಲ್ಲಿ ಕುಳಿತುಕೊಳ್ಳದೇ ಪರೀಕ್ಷಾರ್ಥಿಗಳ ಕಡೆಗೆ ಗಮನ ಹರಿಸುತ್ತ ಎಲ್ಲ ದಾಖಲೆಗಳನ್ನು ನಿರ್ವಹಿಸುತ್ತ ಉತ್ತಮ ರೀತಿಯಲ್ಲಿ ಪರೀಕ್ಷಾ ಕಾರ್ಯವನ್ನು ಮಾಡಬೇಕೆಂದು ಮಾರ್ಗದರ್ಶನ ಮಾಡಿದರು.
ಶಹರ ವಲಯದ ಕೆಲವು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರೀಕ್ಷಾ ತಯಾರಿ ಕುರಿತು ಪರಿಶೀಲನೆ ನಡೆಸಿದರು. ಗದಗ ಶಹರ ಹಾಗೂ ಗ್ರಾಮೀಣ ವಲಯಗಳ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಹಾಗೂ ವಿ.ವಿ. ನಡುವಿನಮನಿ ಉಪಸ್ಥಿತರಿದ್ದರು. ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಎಂ.ಎಚ್. ಕಂಬಳಿ, ತಾಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಾಣಿಕೇಶ್ವರ, ತಹಸೀಲ್ದಾರ್ ಕಾರ್ಯಾಲಯದ ಗ್ರೇಡ್-2 ತಹಸೀಲ್ದಾರ್ ಬಾಲೇಹೊಸೂರ, ಪೊಲೀಸ್ ಇಲಾಖೆ ಎಎಸ್‌ಐ ವಿ.ವಿ. ಪತ್ತಾರ, ಎರಡೂ ವಲಯಗಳ ಕ್ಷೇತ್ರ ಸಮನ್ವಯಾಧಿಕಾರಿಗಳು ಹಾಗೂ ಎಸ್‌ಎಸ್‌ಎಲ್‌ಸಿ ತಾಲೂಕು ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.