ವಿಶ್ವವಿದ್ಯಾಲಯಗಳಲ್ಲಿ ಹೆರಿಗೆ ರಜೆ ಸಿಗಲಿ, ಮಹಿಳಾ ಸಿಬ್ಬಂದಿಗೆ ವಿಶ್ರಾಂತಿ ಕೋಣೆ ಇರಲಿ, ಆಂತರಿಕ ದೂರು ಸಮಿತಿ ರಚನೆಯಾಗಿರಲಿ, ಮಹಿಳಾ ಸಿಬ್ಬಂದಿಯ ಸಂಘ ರಚನೆಯಾಗಲಿ.
ಬಳ್ಳಾರಿ: ಲಿಂಗ ತಾರತಮ್ಯವಿಲ್ಲದ, ವರ್ಗ, ವರ್ಣ, ಜಾತಿಭೇದ ಇಲ್ಲದ ವಿಶ್ವವಿದ್ಯಾಲಯಗಳಿರಲಿ ಎಂದು ಅಖಿಲ ಭಾರತೀಯ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ, ಹೋರಾಟಗಾರ್ತಿ ಕೆ.ನೀಲಾ ಹೇಳಿದರು.ಇಲ್ಲಿನ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ವಿಶ್ವವಿದ್ಯಾಲಯಗಳಲ್ಲಿ ಹೆರಿಗೆ ರಜೆ ಸಿಗಲಿ, ಮಹಿಳಾ ಸಿಬ್ಬಂದಿಗೆ ವಿಶ್ರಾಂತಿ ಕೋಣೆ ಇರಲಿ, ಆಂತರಿಕ ದೂರು ಸಮಿತಿ ರಚನೆಯಾಗಿರಲಿ, ಮಹಿಳಾ ಸಿಬ್ಬಂದಿಯ ಸಂಘ ರಚನೆಯಾಗಲಿ ಎಂದು ಸಲಹೆ ನೀಡಿದರು.ವಿಜ್ಞಾನ-ತಂತ್ರಜ್ಞಾನ ಬೆಳೆದರೂ ಹೆಣ್ಣಿನ ಮೇಲೆ ಅವೈಜ್ಞಾನಿಕ ನಂಬಿಕೆ ಸಮಾಜದಲ್ಲಿದೆ. ಹೆಣ್ಣಿನ ಕೆಲಸವನ್ನು ಅಮಾನವೀಯ, ಅವೈಜ್ಞಾನಿಕ ಕೆಲಸದ ವಿಭಜನೆಯಾಗಿದೆ. ಆದರೆ ಮಹಿಳೆಯರು ವೈಜ್ಞಾನಿಕವಾಗಿ ನಡೆಯಬೇಕು ಎಂದು ನಮ್ಮ ನೆಲದ ಚಳವಳಿಗಳು ತಿಳಿಸಿಕೊಟ್ಟಿವೆ ಎಂದು ಹೇಳಿದರು.
ಹೆಣ್ಣು ಕನಿಷ್ಠ, ಗಂಡು ಗರಿಷ್ಠ ಎನ್ನುವುದು ನಿರಂತರವಾಗಿದೆ. ಧಿಗಿಧಿಗಿ ನಡೆಯಬೇಡ, ತಲೆ ಬಗ್ಗಿಸಿ ನಡೆಯಬೇಕು ಎಂದು ಹುಡುಗಿಯರಿಗೆ ಹೇಳುತ್ತಾರೆ. ಹೀಗೆಯೇ ಮಗಳಿಗೆ ಹೊಡೆದರೆ ಹೊಡೆಯಲಿ, ಗಂಡನ ಮನೆಯಲ್ಲಿ ಇರಲಿ ಎನ್ನುವುದೂ ಅವೈಜ್ಞಾನಿಕ. ಮೂಲೆಗಲ್ಲು ಮೂಲೆಗೆ, ಕಟ್ಟೆಕಲ್ಲು ಕಟ್ಟೆಗೆ ಎನ್ನುವ ಮಾತು ಜನಪ್ರಿಯವಾಗಿದೆ. ಇದು ಹೆಣ್ಣನ್ನು ಕೀಳಾಗಿ ನೋಡುವ ಕ್ರಮ. ಅಳುವ ಗಂಡಸನ್ನು ನಂಬಬಾರದು, ನಗುವ ಹೆಣ್ಣನ್ನು ನಂಬಬಾರದು ಎನ್ನುವ ಗಾದೆಯಿಂದ ಗಂಡಸರು ಸರಿಯಾಗಿ ಅಳಲಾಗದು ಎಂದು ವಿಶ್ಲೇಷಿಸಿದರು.ಹೆಣ್ಣನ್ನು ದೇಹವಾಗಿ ನೋಡದೇ ಜೀವವಾಗಿ ನೋಡಿ, ದುಡಿಮೆಗಾರರ ಮಹಿಳೆಯರೊಂದಿಗೆ ವಿಶ್ವವಿದ್ಯಾಲಯದವರು ಸಂಪರ್ಕ ಇಟ್ಟುಕೊಳ್ಳಿ. ವೈಜ್ಞಾನಿಕ ಮನೋಭಾವ ಬಿತ್ತಿ ಎಂದು ಸಲಹೆ ನೀಡಿದರು.ವಿವಿಯ ಕುಲಸಚಿವ ಎಸ್.ಎನ್.ರುದ್ರೇಶ್, ಪ್ರೊ.ರಮೇಶ್ ಓಲೇಕಾರ ಹಾಗೂ ಪ್ರಾಧ್ಯಾಪಕಿ ಉಮಾ ರೆಡ್ಡಿ ವೇದಿಕೆ ಮೇಲಿದ್ದರು.ಅಧ್ಯಕ್ಷತೆ ವಹಿಸಿದ್ದ ವಿವಿಯ ಕುಲಪತಿ ಪ್ರೊ. ಕೆ.ಎಂ. ಮೇತ್ರಿ ಮಾತನಾಡಿ, ಬುಡಕಟ್ಟು ಜನಾಂಗದಲ್ಲಿ ಹೆಣ್ಣುಮಗು ಜನಿಸಿದರೆ ಖುಷಿಪಡುತ್ತಾರೆ, ಅಲೆಮಾರಿಗಳು ಸರಳವಾಗಿ ಮದುವೆಯಾಗುತ್ತಾರೆ. ಆದರೆ ಅವರು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಹೆಚ್ಚು ಓದಿದ, ಪ್ರತಿಷ್ಠಿತರಾದವರೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದರು.ಸಿಂದೋಳ ಅಂದರೆ ದುರುಗ-ಮುರಗಿಯವರು ತಮ್ಮ ಮೈಗೆ ತಾವೇ ಹೊಡೆದುಕೊಂಡು ಪರಿಸರವನ್ನು ಸ್ಯಾನಿಟೈಜ್ ಮಾಡುತ್ತಾರೆ. ಹೇಗೆಂದರೆ ಬೇವಿನತಪ್ಪಲು ಮೂಲಕ ವಾತಾವರಣವನ್ನು ಶುಚಿಯಾಗಿಡುತ್ತಾರೆ. ಆದರೆ ಅವರನ್ನು ಭಿಕ್ಷಾಟನೆ ಕಾಯ್ದೆ ಅನ್ವಯಿಸಿ ರಿಮ್ಯಾಂಡ್ ಹೋಂಗೆ ಹಾಕುತ್ತಾರೆ ಎಂದರು.ಆಲಮಟ್ಟಿ ಆಣೆಕಟ್ಟೆಯಿಂದಾಗಿ ಮನೆ, ಆಸ್ತಿ ಕಳೆದುಕೊಂಡವರಿಗೆ ಪುನರ್ ವಸತಿ ಸಿಕ್ಕಿತು. ಆದರೆ ಅಲೆಮಾರಿ ಜನಾಂಗದವರಿಗೆ ಪುನರ್ ವಸತಿ ಸಿಗಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.ನಂತರ ಕೂಡ್ಲಿಗಿ ಕೊಟ್ರೇಶ್ ಹಾಸ್ಯ ಕಾರ್ಯಕ್ರಮ ನೀಡಿದರು. ಬಳಿಕ ಗಣೇಶ ಅಮೀನಗಡ ಅವರ ''''ಕೌದಿ'''' ನಾಟಕ ಪ್ರದರ್ಶನಗೊಂಡಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.