ಹೊಸಪೇಟೆ: ಮಾನವ ಹಕ್ಕುಗಳ ಚಿಂತನೆಯು ಪ್ರತಿಯೊಬ್ಬರ ಜೀವನದಲ್ಲಿ ಬೆಳಕಾಗಬೇಕು. ಸಮಾಜದಲ್ಲಿ ಮಾನವ ಹಕ್ಕುಗಳ ತಿಳಿವಳಿಕೆ ಮೂಡಿಸುವುದು ಮಾನವ ಹಕ್ಕುಗಳ ದಿನಾಚರಣೆಯ ಉದ್ದೇಶವಾಗಿದೆ. ಅರಿಸ್ಟಾಟಲ್, ಪ್ಲೆಟೋ ಮತ್ತು ಬಸವಣ್ಣ ಅವರಿಂದ, ಅಂಬೇಡ್ಕರ್ ಸಂವಿಧಾನದವರೆಗೂ ನಾಗರಿಕರಲ್ಲಿ ಸಮಾನತೆಯ ಮನೋಭಾವನೆಯನ್ನು ಮೂಡಿಸುವುದು ಮಾನವ ಹಕ್ಕುಗಳ ಗುರಿಯಾಗಿದೆ ಎಂದು ವಕೀಲ ಕೆ. ಜಂಬಣ್ಣ ಹೇಳಿದರು.ಕನ್ನಡ ವಿವಿಯ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸಹಯೋಗದಿಂದ ಮಾನವ ಹಕ್ಕುಗಳ ದಿನಾಚರಣೆಯನ್ನು ವಿಶ್ವವಿದ್ಯಾಲಯದ ಪಂಪ ಸಭಾಂಗಣದಲ್ಲಿ ಆಚರಿಸಲಾಯಿತು.
ಹಂಪಿ ಪೊಲೀಸ್ ವೃತ್ತ ನಿರೀಕ್ಷಕ ರಾಜೇಶ್ ಬಟಗುರ್ಕಿ ಮಾತನಾಡಿದರು. ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂವಿಧಾನವು ವಿವಿಧ ಹಕ್ಕುಗಳನ್ನು ನೀಡಿದ್ದು, ಈ ಹಕ್ಕುಗಳು ದುರುಪಯೋಗ ಆಗದೆ ಇರುವ ರೀತಿಯಲ್ಲಿ ಮಾನವ ಹಕ್ಕುಗಳ ಆಯೋಗ ನೋಡಿಕೊಳ್ಳುತ್ತದೆ. ಸಮಾಜವು ಎಷ್ಟೇ ಮುಂದುವರೆದರೂ ಹಿಂದಿನಂತೆ ಮಹಿಳೆಯರ ಮೇಲಿನ ತಿರಸ್ಕಾರ, ದಬ್ಬಾಳಿಕೆ, ಶೋಷಣೆ ನಡೆಯುತ್ತಿದ್ದು ಪ್ರಮುಖವಾಗಿ ಮಹಿಳೆಯರು ಮಾನವ ಹಕ್ಕುಗಳ ಬಗ್ಗೆ ಕಡ್ಡಾಯವಾಗಿ ಮಾಹಿತಿ ತಿಳಿದುಕೊಳ್ಳಬೇಕು ಎಂದರು.
ಕುಲಸಚಿವ ಡಾ.ವಿರೂಪಾಕ್ಷಿ ಪೂಜಾರಹಳ್ಳಿ, ಸಂಚಾಲಕ ಡಾ.ಎ.ಶ್ರೀಧರ್ ಹಾಗೂ ವಿಭಾಗದ ಮುಖ್ಯಸ್ಥರು, ಬೋಧಕ ಬೋಧಕೇತರ ಸಿಬ್ಬಂದಿ, ವಿವಿಧ ವಿಭಾಗದ ಸಂಶೋಧನಾರ್ಥಿಗಳು ಮತ್ತು ವಿದ್ಯಾರ್ಥಿಗಳು ಇದ್ದರು.ಹಂಪಿ ಕನ್ನಡ ವಿವಿಯಲ್ಲಿ ನಡೆದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ವಕೀಲ ಕೆ. ಜಂಬಣ್ಣ ಅವರು ಮಾತನಾಡಿದರು. ಕನ್ನಡ ವಿವಿ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಮತ್ತಿತರರಿದ್ದರು.