ವಿಶ್ವಕರ್ಮ ಸಮಾಜ ಸಂಘಟಿತರಾಗಲಿ: ಕೆ.ಪಿ. ನಂಜುಂಡಿ

KannadaprabhaNewsNetwork |  
Published : Apr 20, 2026, 02:00 AM IST
ಕುಂದಗೋಳ ಪಟ್ಟಣದ ಜಿಎಸ್ಎಸ್ ವಿದ್ಯಾ ಪೀಠದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವಕರ್ಮ ಜನ ಜಾಗೃತಿ ಸಮಾವೇಶವನ್ನು ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಕುಂದಗೋಳ ಪಟ್ಟಣದ ಜೆ.ಎಸ್.ಎಸ್. ವಿದ್ಯಾಪೀಠದ ಸಭಾಭವನದಲ್ಲಿ ‘ವಿಶ್ವಕರ್ಮ ಜನ ಜಾಗೃತಿ ಸಮಾವೇಶ’, ಪದಾಧಿಕಾರಿಗಳ ಪದಗ್ರಹಣ ಹಾಗೂ ತಾಲೂಕು ಸಂಘದ ಉದ್ಘಾಟನಾ ಸಮಾರಂಭ ನಡೆಯಿತು.

ಕುಂದಗೋಳ: ವಿಶ್ವಕರ್ಮ ಸಮಾಜವು ಸಂಘಟಿತವಾಗದಿದ್ದರೆ ರಾಜಕೀಯವಾಗಿ ತುಳಿತಕ್ಕೆ ಒಳಗಾಗುವುದು ನಿಶ್ಚಿತ. ಇಂದಿನ ಸಮಾವೇಶಕ್ಕೆ ಜನಪ್ರತಿನಿಧಿಗಳು ಗೈರು ಹಾಜರಾಗಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದು ವಿಶ್ವಕರ್ಮ ಮಹಾಸಭಾದ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿ ಹೇಳಿದರು.

ಪಟ್ಟಣದ ಜೆ.ಎಸ್.ಎಸ್. ವಿದ್ಯಾಪೀಠದ ಸಭಾಭವನದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಕುಂದಗೋಳ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ‘ವಿಶ್ವಕರ್ಮ ಜನ ಜಾಗೃತಿ ಸಮಾವೇಶ’, ಪದಾಧಿಕಾರಿಗಳ ಪದಗ್ರಹಣ ಹಾಗೂ ತಾಲೂಕು ಸಂಘದ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ನಾವೆಲ್ಲರೂ ಬ್ರಾಹ್ಮಣರಲ್ಲ, ವಿಶ್ವಕರ್ಮದವರೆಂದು ಹೆಮ್ಮೆಯಿಂದ ಗುರುತಿಸಿಕೊಳ್ಳಬೇಕು ಎಂದು ಕರೆ ನೀಡಿದ ಅವರು, ರಾಜ್ಯದಲ್ಲಿ 40 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ನಮ್ಮ ಸಮಾಜಕ್ಕೆ ಮಕ್ಕಳ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಮೀಸಲಾತಿಯ ಅಗತ್ಯವಿದೆ. ಈ ಹಕ್ಕನ್ನು ಪಡೆದುಕೊಳ್ಳಲು ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಿದರೆ ಮಾತ್ರ ಮುಂದಿನ ಪೀಳಿಗೆಯ ಭವಿಷ್ಯ ಉಜ್ವಲವಾಗಲು ಸಾಧ್ಯ ಎಂದರು.

ಸಾನ್ನಿಧ್ಯ ವಹಿಸಿದ್ದ ಶಿರೋಳ ಗವಿಮಠದ ಶ್ರೀ ಯಚ್ಚರಪ್ಪ ಶ್ರೀಗಳು ಆಶೀರ್ವಚನ ನೀಡಿ, ಸಂಘಟನೆಯ ಕೊರತೆಯಿಂದಾಗಿ ಸಮುದಾಯದ ಜನರು ಮತಾಂತರಕ್ಕೆ ಒಳಗಾಗುತ್ತಿರುವುದು ವಿಷಾದನೀಯ. ಇದನ್ನು ತಡೆಗಟ್ಟಲು ನಮ್ಮ ಕಲೆ, ವಾಸ್ತುಶಿಲ್ಪ ಹಾಗೂ ಸಂಸ್ಕೃತಿಯನ್ನು ಇಂದಿನ ಪೀಳಿಗೆಗೆ ಕಲಿಸಿಕೊಡಬೇಕು ಎಂದರು.

ಶಿವಾನಂದ ಮಠದ ಶ್ರೀ ಶಿವಾನಂದ ಮಹಾಸ್ವಾಮಿಗಳು ಹಾಗೂ ಹುಲಗೂರ ಜೀವನ್ಮುಕ್ತಾಲಯ ಮಠದ ಶ್ರೀ ಮೌನೇಶ್ವರ ಶ್ರೀಗಳು ವಿಶ್ವಕರ್ಮ ಸಮಾಜದ ಐತಿಹಾಸಿಕ ಕೊಡುಗೆಗಳನ್ನು ಶ್ಲಾಘಿಸಿದರು.

ಕೃಷಿ ವಿಶ್ವವಿದ್ಯಾಲಯದ ನಿರ್ದೇಶಕ ಮಾಲತೇಶ ಶ್ಯಾಗೋಟಿ, ಮಾಜಿ ಮೇಯರ್ ರಾಮಣ್ಣ ಬಡಿಗೇರ, ಜಿಲ್ಲಾಧ್ಯಕ್ಷ ಕಾಳಪ್ಪ ಬಡಿಗೇರ ಸೇರಿದಂತೆ ಹಲವು ಮುಖಂಡರಿದ್ದರು. ತಾಲೂಕು ಘಟಕದ ನೂತನ ಪುರುಷ ಮತ್ತು ಮಹಿಳಾ ಪದಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಮಾವೇಶಕ್ಕೂ ಮುನ್ನ ಕೆ.ಪಿ. ನಂಜುಂಡಿ ಅವರು ಪಟ್ಟಣದ ಶ್ರೀ ಮೌನೇಶ್ವರ ದೇವಸ್ಥಾನದ ಜೀರ್ಣೋದ್ದಾರದ ಭೂಮಿಪೂಜೆ ನೆರವೇರಿಸಿ, ಅದ್ಧೂರಿ ಮೆರವಣಿಗೆಗೆ ಚಾಲನೆ ನೀಡಿದರು. ತಾಲೂಕು ಘಟಕದ ಗೌರವಾಧ್ಯಕ್ಷ ಮಾನಪ್ಪ ಪತ್ತಾರ, ಅಧ್ಯಕ್ಷ ಸಕ್ರಪ್ಪ ಕಮ್ಮಾರ, ಮಹಿಳಾ ಘಟಕದ ಅಧ್ಯಕ್ಷೆ ಶಂಕ್ರಮ್ಮ ಸುತಾರ ಹಾಗೂ ಸಮಾಜದ ಬಾಂಧವರು ಪಾಲ್ಗೊಂಡಿದ್ದರು. ದೇವಕ್ಕ ಪತ್ತಾರ ಪ್ರಾಸ್ತಾವಿಕವಾಗಿ ಮಾತನಾಡಿದರು, ಶಶಿಕಲಾ ಬಡಿಗೇರ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳಾ ಮೀಸಲಾತಿಗೆ ಕಾಂಗ್ರೆಸ್‌ ವಿರೋಧ: ಜೆಡಿಎಸ್‌ ಪ್ರತಿಭಟನೆ
ಗುಡುಗು, ಸಿಡಿಲು ಸಹಿತ ಭಾರಿ ಮ‍ಳೆ: ಧರೆಗುರುಳಿದ ಮರಗಳು