-ರಾಜ್ಯ ಅನುದಾನಿತ ಶಾಲಾ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಸನ್ಮಾನ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಶಹಾಪುರ
ಶಿಕ್ಷಕರು ಸಮಾಜದ ಶಿಲ್ಪಿಗಳಾಗಿದ್ದು, ವಿದ್ಯಾರ್ಥಿಗಳನ್ನು ಜ್ಞಾನದ ಬೆಳಕಿನತ್ತಾ ಕರೆದೊಯ್ಯುವ ಮಹತ್ತರ ಜವಾಬ್ಧಾರಿ ಹೊಂದಿದ್ದಾರೆ. ಶಿಕ್ಷಕರ ಸಂಘ ಎಂದ ಮೇಲೆ ಇದು ಸುಶಿಕ್ಷಿತರ ಕೂಟ. ಸಮಾಜದಲ್ಲಿ ಶಿಕ್ಷಕ ವರ್ಗಕ್ಕೆ ಪೌರಾಣಿಕ ಕಾಲದಿಂದ ಅಪಾರ ಗೌರವವಿದೆ ಎಂದು ಸಂತಪಾಲ ಶಾಲೆಯ ಮುಖ್ಯಗುರು ಸ್ಟ್ಯಾನ್ಲಿ ವರದರಾಜ ತಿಳಿಸಿದರು.ನಗರದ ಸಂತಪಲಾ ಶಾಲಾವರಣದಲ್ಲಿ ನಡೆದ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಮತ್ತು ತಾಲೂಕು ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ನೂತನ ಪದಾಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಸಂಘದ ನೂತನ ಜಿಲ್ಲಾಧ್ಯಕ್ಷ ಶಿವಬಸಪ್ಪ ಮಾಲಿಪಾಟೀಲ್ ಮಾತನಾಡಿ, ಅನುದಾನಿತ ಶಾಲಾ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕಾಗಿ ಸದಾ ನಿಮ್ಮೊಂದಿಗೆ ಇದ್ದು, ಕೆಲಸ ಮಾಡುವೆ. ಅನುದಾನಿತ ಶಾಲಾ ಶಿಕ್ಷಕರ ಸಮಸ್ಯೆ ಸಾಕಷ್ಟು ಇವೆ. ಈ ಕುರಿತು ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಲಾಗುವುದು ಎಂದರು.
ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಶಿವಬಸಪ್ಪ ಮಾಲಿಪಾಟೀಲ್, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾದ ಚಂದ್ರಶೇಖರ ಸಾಹು, ಶಹಾಪುರ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಲಕ್ಕಪ್ಪ ಮಲ್ಲಾಬಾದಿ ಹಾಗೂ ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಸೂರ್ಯಕಾಂತ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
----