ಧಾರವಾಡ:
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗೌರವಿಸುವ ಕೆಲಸ ಸಮಾಜದಿಂದ ನಿರಂತರವಾಗಿ ನಡೆಯಬೇಕು ಎಂದು ವಿಧಾನ ಪರಿಷತ್ತಿನ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.ಇಲ್ಲಿನ ತಮ್ಮ ಜನಸಂಪರ್ಕ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿಯೊಂದು ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ ಸಾಧಕ ಹಿರಿಯರು ನಮ್ಮ ನಡುವೆ ಇದ್ದಾರೆ. ಅವರ ಚಿಂತನೆ ಹಾಗೂ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉನ್ನತ ಸಾಧನೆ ಮಾಡಲು ಪ್ರೇರಣೆಯಾಗುತ್ತದೆ ಎಂದು ಹೇಳಿದರು.
ರಮಣಶ್ರೀ ಪ್ರಶಸ್ತಿ ಪಡೆದ ಡಾ. ವೀರಣ್ಣ ರಾಜೂರ, ಸುವರ್ಣ ಸಂಭ್ರಮ ರಾಜ್ಯೋತ್ಸವ ಪ್ರಶಸ್ತಿ ಪಡೆದ ಲೂಸಿ ಸಾಲ್ಡಾನ, ಸಹಕಾರ ರತ್ನ ಪ್ರಶಸ್ತಿ ಪಡೆದ ವಕೀಲ ಕೆ.ಎಲ್. ಪಾಟೀಲ, ಕೃಷಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ನಿರ್ದೇಶಕ ಬಸವರಾಜ ಕುಂದಗೋಳಮಠ, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಂಕರ ಹಲಗತ್ತಿ, ರಂಗಕಲಾವಿದೆ ರಜನಿ ಗರುಡ, ಕ್ರೈಸ್ತ ಮಿಷನರಿ ಉತ್ತರಪ್ರಾಂತದ ಕಾರ್ಯದರ್ಶಿ ವಿಲ್ಸನ್ ಮೈಲಿ, ಅಭಿನಯ ಭಾರತಿಯ ಅಧ್ಯಕ್ಷ ಅರವಿಂದ ಕುಲಕರ್ಣಿ, ವೈದ್ಯಕೀಯ ಕ್ಷೇತ್ರದ ಡಾ. ಉಮೇಶ ಹಳ್ಳಿಕೇರಿ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಮೋಹನ ಸಿದ್ಧಾಂತಿ, ಮಲ್ಲಿಕಾರ್ಜುನ ಚಿಕ್ಕಮಠ, ಅರವಿಂದ ಕುಲಕರ್ಣಿ, ಶಂಕರ ಹಲಗತ್ತಿ, ಡಾ.ಬಿ.ಆರ್. ರಾಠೋಡ್, ಸಾವಿತ್ರಿಬಾಯಿ ಪುಲೆ ಸಂಘದ ರಾಜ್ಯಾಧ್ಯಕ್ಷೆ ಲತಾ ಮಳ್ಳೂರ, ವಿ.ಡಿ. ಕಾಮರಡ್ಡಿ, ವಕೀಲ ಸಿದ್ದಲಿಂಗಸ್ವಾಮಿ ಬೆಂತೂರಮಠ, ಎಲ್.ಐ. ಲಕ್ಕಮ್ಮನವರ, ರಮೇಶ ಛಲವಾದಿ ಇದ್ದರು.
ಹಿರೇಮಲ್ಲೂರು ಈಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಶಶಿಧರ ತೊಡಕರ ಮಾತನಾಡಿದರು. ಉಪನ್ಯಾಸಕ ಎಸ್.ಎಲ್. ಶೇಖರಗೋಳ ಕಾರ್ಯಕ್ರಮ ನಿರೂಪಿಸಿದರು. ಗಾಯಕ ಶಿವಾನಂದ ಹೂಗಾರ ಪ್ರಾರ್ಥಿಸಿದರು. ಎನ್.ಟಿ. ಕಾಖಂಡಕಿ ವಂದಿಸಿದರು.