ಮಂಗಳೂರಿನಲ್ಲಿ ಕೂಟ ಮಹಾಜಗತ್ತಿನ ‘ನಮ್ಮವರು ನಮ್ಮ ಹೆಮ್ಮೆ’ ಕಾರ್ಯಕ್ರಮ
ಸಾಧನೆ ಮಾಡಿದ ಸಮಾಜದ ಪ್ರತಿನಿಧಿಗಳನ್ನು ಗುರುತಿಸಬೇಕಿದ್ದು, ಆ ಮೂಲಕ ಸಾಧಕರಿಗೆ ಪ್ರೀತಿಸಿ ತೋರಿಸಿ, ಬೆನ್ನು ತಟ್ಟುವ ಕೆಲಸ ಮಾಡಬೇಕಿದೆ ಎಂದು ಶ್ರೀ ಗುರು ನರಸಿಂಹ ದೇವಳದ ಧರ್ಮದರ್ಶಿ ಡಾ.ಕೆ.ಎಸ್. ಕಾರಂತ್ ಹೇಳಿದ್ದಾರೆ.ಕೂಟ ಮಹಾಜಗತ್ತಿನ ಮಂಗಳೂರು ಅಂಗಸಂಸ್ಥೆ ವತಿಯಿಂದ ಪಾಂಡೇಶ್ವರದ ಗುರುನರಸಿಂಹ ಸಭಾಭವನದಲ್ಲಿ ನಡೆದ ‘ನಮ್ಮವರು ನಮ್ಮ ಹೆಮ್ಮೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಂಘಟನೆ ಸಮಾಜಮುಖಿಯಾಗಬೇಕು. ಸ್ಪರ್ಧಾತ್ಮಕ ಪ್ರಪಂಚದಲ್ಲಿ ಎಲ್ಲರೂ ಸ್ವಾರ್ಥದ ಬಲೆಗೆ ಸಿಲುಕಿ ಒದ್ದಾಡುತ್ತಿದ್ದೇವೆ. ಅದರಿಂದ ಹೊರಕ್ಕೆ ಬರಬೇಕಾದರೆ ಸಂಘಟನೆಯಲ್ಲಿ ತೊಡಗಿಸಿಕೊಂಡು ಪರಸ್ಪರ ಬೆನ್ನು ತಟ್ಟಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕಿದೆ ಎಂದರು.ಕೂಟ ಮಹಾಜಗತ್ತು ಸಂಘಟನೆಯು ವಿಸ್ತರಿಸಿಕೊಂಡಿದ್ದು, ಪ್ರಸ್ತುತ ರಾಜ್ಯಾದ್ಯಂತ 37 ಅಂಗಸಂಸ್ಥೆಗಳನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಹೊರ ರಾಜ್ಯಗಳಲ್ಲೂ ಸಂಘಟನೆಯನ್ನು ವಿಸ್ತಾರ ಮಾಡಬೇಕು ಎಂಬ ಗುರಿ ಹಾಕಿಕೊಳ್ಳಲಾಗಿದೆ. ಈಗಾಗಲೇ ಅಮೆರಿಕದಲ್ಲಿ ಅಂಗ ಸಂಸ್ಥೆ ಸ್ಥಾಪಿಸುವ ನಿಟ್ಟಿನಲ್ಲಿ ಅಲ್ಲಿರುವ ಕೂಟ ಸಮಾಜದ ಪ್ರತಿನಿಧಿಗಳೊಂದಿಗೆ ಮಾತುಕತೆ ಪೂರ್ಣಗೊಂಡಿದೆ. ಶೀಘ್ರದಲ್ಲೇ ಅಮೆರಿಕ ಅಂಗ ಸಂಸ್ಥೆ ಕಾರ್ಯಾರಂಭಿಸಲಿದೆ ಎಂದು ಕೂಟ ಮಹಾಜಗತ್ತು ಕೇಂದ್ರೀಯ ಅಧ್ಯಕ್ಷ ಎಚ್. ಸತೀಶ್ ಹಂದೆ ಹೇಳಿದರು.
‘ನಮ್ಮವರು ನಮ್ಮ ಹೆಮ್ಮೆ’ ಕಾರ್ಯಕ್ರಮದಡಿ ಸಾಹಿತ್ಯ ಕ್ಷೇತ್ರದ ನಿತ್ಯಾನಂದ ಕಾರಂತ್ ಪೊಳಲಿ, ಕಾನೂನು ಕ್ಷೇತ್ರದ ಜಗದೀಶ ರಾವ್ ಟಿ., ಲೆಕ್ಕ ಪರಿಶೋಧಕ ಕ್ಷೇತ್ರದ ಕೆ.ಪ್ರಕಾಶ್ ಬಾಸ್ರಿ, ಉದ್ದಿಮೆ ಕ್ಷೇತ್ರದ ಏರುಂಬು ನಾರಾಯಣ ಕಾರಂತ್, ಹೊಟೇಲ್ ಉದ್ದಿಮೆಯ ಪತ್ತುಮುಡಿ ಸೂರ್ಯನಾರಾಯಣ ರಾವ್ ಅವರಿಗೆ ಕೂಟ ಸಮಾಜದ ಕಣ್ಮಣಿ ಬಿರುದು ನೀಡಿ ಗೌರವಿಸಲಾಯಿತು.
ಸಂಸ್ಥೆಯ ಕಾರ್ಯದರ್ಶಿ ಗೋಪಾಲಕೃಷ್ಣ ಮಯ್ಯ ವಂದಿಸಿದರು. ಕೂಟವಾಣಿ ಪತ್ರಿಕೆಯ ಸಂಪಾದಕ ಅಡ್ಡೂರು ಕೃಷ್ಣರಾವ್ ಅವರು ಅಭಿನಂದನಾ ಭಾಷಣ ಮಾಡಿದರು. ಸಿ.ಎ. ಚಂದ್ರಮೋಹನ್ ಕೆ. ನಿರೂಪಿಸಿದರು.