ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ತವರಲ್ಲಿ ಪಕ್ಷದ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಲ್ಲಿ ಅಭ್ಯರ್ಥಿಗಳಿದ್ದರೂ ನಾಮಪತ್ರ ಸಲ್ಲಿಸಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷದ ಪ್ರಬಲವಾಗಿದ್ದ ಆಡಳಿತ ಪಕ್ಷ ಅಧಿಕಾರವನ್ನು ಎಚ್ಚರಿಕೆಯಿಂದ ನಡೆಸುತ್ತದೆ ಎಂಬ ಮಾತಿದೆ. ಆದರೆ ಗುಂಡ್ಲುಪೇಟೆ ಪುರಸಭೆಯಲ್ಲಿ ಅಧ್ಯಕ್ಷ ಸ್ಥಾನ ಬಿಸಿಎಂ (ಬಿ), ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು.
ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪುರಸಭೆ ಸದಸ್ಯ ನಾಗೇಶ್ ಇದ್ದು, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಕಾರಣ ಬಿಜೆಪಿ ಎಲ್ಲ ಸದಸ್ಯರೂ ಸ್ಪರ್ಧಿಸಲು ಅವಕಾಶವಿತ್ತು. ಆದರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಬ್ಬರು ಅವಿರೋಧ ಆಯ್ಕೆಯಾಗಲು ಬಿಜೆಪಿ ಸಹಕಾರ ನೀಡಿದ್ದೇಕೆ ಎಂಬ ಪ್ರಶ್ನೆ ಬಿಜೆಪಿ ವಲಯದಲ್ಲಿ ಕೇಳಿ ಬಂದಿದೆ. ಸೋಲು ಗೆಲುವು ಸಹಜ. ವಿರೋಧ ಪಕ್ಷವಾಗಿ ಕಾಂಗ್ರೆಸ್ ಪಕ್ಷದ ವಿರುದ್ಧ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಬೇಕಿತ್ತು ಎಂದು ಬಿಜೆಪಿ ಹಿರಿಯ ಮುಖಂಡರೊಬ್ಬರು ಅಸಮಧಾನ ವ್ಯಕ್ತಪಡಿಸಿದ್ದಾರೆ.ಪುರಸಭೆಯಲ್ಲಿ ನಮಗೆ ಬಹುಮತ ಇರಲಿಲ್ಲ. ವ್ಯರ್ಥ ಪ್ರಯತ್ನ ಯಾಕೆ ಅಂತ ನಾಮಪತ್ರ ಸಲ್ಲಿಸಿಲ್ಲ. ಜನರ ಕಷ್ಟ, ಸುಖಗಳಿಗೆ ಸ್ಪಂದಿಸಿಕೊಂಡು ವಾರ್ಡ್‌ಗಳ ಅಭಿವೃದ್ಧಿ ಕೆಲಸ ಮಾಡೋದು ನನ್ನ ಕೆಲಸ.-ಪಿ.ಗಿರೀಶ್, ಮಾಜಿ ಅಧ್ಯಕ್ಷ, ಸದಸ್ಯ, ಗುಂಡ್ಲುಪೇಟೆ-ಹೆಸರೇಳಲಿಚ್ಚಿಸದ ಬಿಜೆಪಿ ಮುಖಂಡ, ಗುಂಡ್ಲುಪೇಟೆ
ಪುರಸಭೆ ಅಧ್ಯಕ್ಷ ಕಿರಣ್ ಗೌಡ, ಉಪಾಧ್ಯಕ್ಷೆ ಹೀನಾ ಕೌಸರ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಧುಸೂದನ್, ಉಪಾಧ್ಯಕ್ಷ ಸ್ಥಾನಕ್ಕೆ ಅಣ್ಣಯ್ಯಸ್ವಾಮಿ ನಾಮಪತ್ರ ಸಲ್ಲಿಸಿದ್ದರು. ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ಅವಧಿ ಮುಗಿವ ತನಕ ಇತರೆ ಯಾರೂ ನಾಮಪತ್ರ ಸಲ್ಲಿಸಲಿಲ್ಲ. ಚುನಾವಣಾಧಿಕಾರಿ ತಹಸೀಲ್ದಾರ್ ಟಿ.ರಮೇಶ್ ಬಾಬು ಅಧ್ಯಕ್ಷರಾಗಿ ಮಧುಸೂದನ್, ಉಪಾಧ್ಯಕ್ಷರಾಗಿ ಅಣ್ಣಯ್ಯಸ್ವಾಮಿ ಅವಿರೋಧರಾಗಿ ಆಯ್ಕೆಯಾದರು ಎಂದು ಘೋಷಿಸಿದರು.
ಸಂಸದ ಸುನೀಲ್ ಬೋಸ್ ಮಾತನಾಡಿ, ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರು ಸದಸ್ಯರು ಹಾಗೂ ನಾಗರಿಕರ ವಿಶ್ವಾಸಕ್ಕೆ ಪಡೆದು ಪಟ್ಟಣದ ಸಮಗ್ರ ಅಭಿವೃದ್ಧಿಗೆ ಮುಂದಾಗಿ ಎಂದು ಶುಭ ಹಾರೈಸಿದರು. ಪುರಸಭೆ ನೂತನ ಅಧ್ಯಕ್ಷ ಮದುಸೂದನ್ ಮಾತನಾಡಿ, ಶಾಸಕರ ಶ್ರಮದಿಂದ ₹೮೫ ಕೋಟಿ ವೆಚ್ಚದಲ್ಲಿ ಯುಜಿಡಿ ಸಮಸ್ಯೆಗೆ ಪರಿಹಾರ ದೊರಕಲಿದೆ ಹಾಗೂ ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ ಕನಸು ಹೊಂದಿದ್ದೇನೆ ಎಂದರು.