ಕಾರ್ಮಿಕರು ಯೋಜನೆಗಳ ಸದುಪಯೋಗ ಪಡೆದುಕೊಳ್ಳಲಿ: ನ್ಯಾ. ಮಹಾಂತೇಶ

KannadaprabhaNewsNetwork |  
Published : Dec 07, 2024, 12:31 AM IST
5ಕೆಪಿಎಲ್21 ಕೊಪ್ಪಳ ನಗರದ ನಿರ್ಮಿತಿ ಕೇಂದ್ರದಲ್ಲಿ ಕಾರ್ಯಾಗಾರ | Kannada Prabha

ಸಾರಾಂಶ

ಕಾರ್ಮಿಕರು ಮತ್ತು ಮಾಲೀಕರ ಮಧ್ಯೆ ಅಭಿವೃದ್ಧಿಗೆ ಪೂರಕ ಭಾವನೆಗಳಿರಬೇಕು.

ಕಾರ್ಮಿಕರಿಗೆ ವಿವಿಧ ಯೋಜನೆಗಳ ಅರಿವು ಕಾರ್ಯಾಗಾರಕನ್ನಡಪ್ರಭ ವಾರ್ತೆ ಕೊಪ್ಪಳ

ಕಾರ್ಮಿಕರು ಮತ್ತು ಮಾಲೀಕರ ಮಧ್ಯೆ ಅಭಿವೃದ್ಧಿಗೆ ಪೂರಕ ಭಾವನೆಗಳಿರಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಕೊಪ್ಪಳ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ಎಸ್. ದರಗದ ಹೇಳಿದ್ದಾರೆ.

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಾಯಿತ ಕಾರ್ಮಿಕರಿಗೆ ಮತ್ತು ಕಾರ್ಮಿಕ ಸಂಘಟನೆಗಳಿಗೆ ನೂತನ ತಂತ್ರಾಂಶದ ಮೂಲಕ ಇ-ಕಾರ್ಡ್ ಜನರೇಷನ್, ನೋಂದಣಿ, ನವೀಕರಣ, ವಿವಿಧ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸುವಿಕೆ, ಎಸ್.ಎಸ್.ಪಿ. ಪೋರ್ಟಲ್ ಮೂಲಕ ಶೈಕ್ಷಣಿಕ ಸಹಾಯಧನಕ್ಕೆ ಅರ್ಜಿ ಸಲ್ಲಿಸುವಿಕೆ, ಮಂಡಳಿಯ ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳ ಕುರಿತು ನಗರದ ನಿರ್ಮಿತಿ ಕೇಂದ್ರದಲ್ಲಿ ನಡೆದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಾಲೀಕರು ಮತ್ತು ಕಾರ್ಮಿಕರ ಮಧ್ಯೆ ಪೂರಕವಾದ ಭಾವನೆಗಳಿರಬೇಕು. ಇಬ್ಬರಲ್ಲೂ ಪಾಲನೆಯ ಮನವಿರಬೇಕು, ಆಗ ಮಾತ್ರ ಕೆಲಸಗಳು ಚೆನ್ನಾಗಿ ನಡೆಯುತ್ತವೆ. ಕಾರ್ಮಿಕರಿಗಿರುವ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ತರಬೇತಿ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು. ಅರ್ಹ ಎಲ್ಲಾ ಕಾರ್ಮಿಕರು ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಮಿಕ ಅಧಿಕಾರಿ ಸುಧಾ ಚಿ. ಗರಗ ಮಾತನಾಡಿ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಡಿ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 2,02,513 ಜನ ಫಲಾನುಭವಿಗಳು ನೋಂದಣಿಯಾಗಿರುತ್ತಾರೆ. ಈ ಕಾರ್ಮಿಕರಿಗೆ ಇಲ್ಲಿಯವರೆಗೂ ವಿವಿಧ ರೀತಿಯ ಸೌಲಭ್ಯ ನೀಡಲಾಗುತ್ತಿದ್ದು, 6226 ಫಲಾನುಭವಿಗಳಿಗೆ ಒಟ್ಟು ₹32,72,30,000 ಮೊತ್ತದಲ್ಲಿ ಮದುವೆ ಧನಸಹಾಯ ನೀಡಲಾಗಿದೆ. 13 ಫಲಾನುಭವಿಗಳಿಗೆ ಒಟ್ಟು ₹51,573 ಸಾಮಾನ್ಯ ವೈದ್ಯಕೀಯ, 285 ಜನರಿಗೆ ಒಟ್ಟು ₹70,54,524 ಪ್ರಮುಖ ವೈದ್ಯಕೀಯ ಧನಸಹಾಯ, 1203 ಫಲಾನುಭವಿಗಳಿಗೆ ಒಟ್ಟು ₹3,45,62,000 ಮೊತ್ತದಲ್ಲಿ ಹೆರಿಗೆ ಧನಸಹಾಯ ನೀಡಲಾಗಿದ್ದು, 158 ಫಲಾನುಭವಿಗಳಿಗೆ ಒಟ್ಟು ₹9,48,000 ತಾಯಿ ಮಗು ಸಹಾಯ ಹಸ್ತ ಸೌಲಭ್ಯ ಪಡೆದಿರುತ್ತಾರೆ ಎಂದು ತಿಳಿಸಿದರು.

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಎಕ್ಸಿಕ್ಯೂಟಿವ್ ಹೇಮಂತ್ ನೂತನ ತಂತ್ರಾಂಶದ ಮೂಲಕ ಇ-ಕಾರ್ಡ್ ಜನರೇಷನ್, ನೋಂದಣಿ, ನವೀಕರಣ, ವಿವಿಧ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸುವಿಕೆ, ಎಸ್.ಎಸ್.ಪಿ. ಪೋರ್ಟಲ್ ಮೂಲಕ ಶೈಕ್ಷಣಿಕ ಸಹಾಯಧನಕ್ಕೆ ಅರ್ಜಿ ಸಲ್ಲಿಸುವಿಕೆ, ಮಂಡಳಿಯ ವಿವಿಧ ಯೋಜನೆಗಳ ಬಗೆಗೆ ಸವಿಸ್ತಾರವಾಗಿ ವಿವರಣೆ ನೀಡಿದರು.

ಕಾರ್ಯಾಗಾರದಲ್ಲಿ ಕೊಪ್ಪಳ ವಿಭಾಗದ ಕಾರ್ಮಿಕ ನಿರೀಕ್ಷಕ ಶಿವಶಂಕರ ಬಿ. ತಳವಾರ, ಕುಷ್ಟಗಿ ವಿಭಾಗದ ಕಾರ್ಮಿಕ ನಿರೀಕ್ಷಕಿ ನಿವೇದಿತಾ, ಗಂಗಾವತಿ ವಿಭಾಗದ ಕಾರ್ಮಿಕ ನಿರೀಕ್ಷಕ ಅಶೋಕ ಸೇರಿದಂತೆ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಾಯಿತ ಕಾರ್ಮಿಕರು, ಕಾರ್ಮಿಕ ಇಲಾಖೆ ಸಿಬ್ಬಂದಿ ಹಾಗೂ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ