ಉತ್ತರ ಕರ್ನಾಟಕದ ಲೇಖಕರ ಕೃತಿ ಅನ್ಯ ಭಾಷೆಗೆ ಅನುವಾದವಾಗಲಿ

KannadaprabhaNewsNetwork |  
Published : Nov 13, 2025, 01:00 AM IST
12ಡಿಡಬ್ಲೂಡಿ2ಕರ್ನಾಟಕ ವಿದ್ಯಾವರ್ಧಕ ಸಂಘವು ರಾಜ್ಯೋತ್ಸವದ ನಿಮಿತ್ತ ಹಮ್ಮಿಕೊಂಡ ಧರೆಗೆ ದೊಡ್ಡವರು ಸನ್ಮಾನ ಸ್ವೀಕರಿಸಿದರು.  | Kannada Prabha

ಸಾರಾಂಶ

ಉತ್ತರ ಕರ್ನಾಟಕದ ಮಣ್ಣಿನ ಗುಣ, ಇಲ್ಲಿನ ಸಂಸ್ಕೃತಿ ಇತರ ಭಾಷೆಯವರಿಗೆ ಪರಿಚಿತವಾಗಲು ಇಲ್ಲಿಯ ಕೃತಿಗಳು ಬೇರೆ ಭಾಷೆಗಳಿಗೆ ಅನುವಾದಬೇಕು.

ಧಾರವಾಡ:

ದಕ್ಷಿಣ ಕರ್ನಾಟಕ ಹಾಗೂ ದಕ್ಷಿಣ ಕನ್ನಡ ಭಾಗದ ಲೇಖಕರ ಕೃತಿಗಳು ಹೆಚ್ಚು ಅನುವಾದಗೊಳ್ಳುತ್ತಿದ್ದು, ಅದೇ ರೀತಿ ಉತ್ತರ ಕರ್ನಾಟಕದ ಸಾಹಿತಿಗಳ ಕೃತಿಗಳು ಕೂಡ ಅನುವಾದಗೊಳ್ಳಬೇಕು ಎಂದು ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತ, ಮೊದಲ ಭಾರತೀಯ ಅನುವಾದಕಿ ಡಾ. ದೀಪಾ ಭಾಸ್ತಿ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ರಾಜ್ಯೋತ್ಸವದ ನಿಮಿತ್ತ ಹಮ್ಮಿಕೊಂಡ ಧರೆಗೆ ದೊಡ್ಡವರು ಸನ್ಮಾನ ಸ್ವೀಕರಿಸಿದ ಅವರು, ಉತ್ತರ ಕರ್ನಾಟಕದ ಮಣ್ಣಿನ ಗುಣ, ಇಲ್ಲಿನ ಸಂಸ್ಕೃತಿ ಇತರ ಭಾಷೆಯವರಿಗೆ ಪರಿಚಿತವಾಗಲು ಇಲ್ಲಿಯ ಕೃತಿಗಳು ಬೇರೆ ಭಾಷೆಗಳಿಗೆ ಅನುವಾದಬೇಕು. ಇಲ್ಲಿನ ಸಾಹಿತಿಗಳ ಕೆಲ ಕೃತಿಗಳನ್ನು ಓದಿದ್ದೇನೆ. ಅವು ಶ್ರೇಷ್ಠ ಕೃತಿಗಳು. ನನಗೆ ಇಲ್ಲಿನ ಭಾಷೆಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ, ಭಾಷೆಯ ಸೊಗಡು ಹಿಡಿಯಲು ಸಾಧ್ಯವಾಗದಿದ್ದರಿಂದ ನನಗೆ ಅನುವಾದ ಮಾಡಲು ಸಾಧ್ಯವಾಗಿಲ್ಲ. ಉತ್ತರ ಕರ್ನಾಟಕದ ಕನ್ನಡವನ್ನು ಅರ್ಥ ಮಾಡಿಕೊಳ್ಳುವವರು ಅನುವಾದ ಮಾಡಲು ಮುಂದಾಗಬೇಕು ಎಂದರು.

ಉತ್ತರ ಕರ್ನಾಟಕ ಭಾಷೆಯನ್ನು ಚಲನಚಿತ್ರಗಳಲ್ಲಿ ಹಾಸ್ಯಕ್ಕಾಗಿ ಮಾತ್ರ ಬಳಸಿಕೊಳ್ಳುತ್ತಿದ್ದು, ಈ ಭಾಗದ ಶ್ರೇಷ್ಠ ಸಾಹಿತ್ಯವನ್ನು ಇತರ ಭಾಷೆಗಳಿಗೆ ಅನುವಾದ ಮಾಡುವ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದ ಅವರು, ರಾಜ್ಯದಲ್ಲಿ ಬಹು ಕನ್ನಡಗಳಿವೆ. ಎಲ್ಲ ಕನ್ನಡಗಳಿಗೂ ಗೌರವಿಸಬೇಕು. ತಾರತಮ್ಯ ಸಲ್ಲದು, ಏಕೆಂದರೆ ಆಯಾ ಕನ್ನಡಕ್ಕೆ ತನ್ನದೇ ಆದ ಭವ್ಯ ಇತಿಹಾಸವಿದೆ ಎಂಬುದನ್ನು ನಾವು ಮರೆಯಬಾರದು ಎಂದು ಹೇಳಿದರು.

ಅನುವಾದಕರಾಗಬೇಕು ಎನ್ನುವವರು ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು. ನಾವು ಅನುವಾದ ಮಾಡುವ ಕೃತಿಕಾರರ ಇತರ ಕೃತಿಗಳನ್ನು ಓದಬೇಕು. ಸಾಕಷ್ಟು ಯುವಜನರು ಅನುವಾದ ಸಾಹಿತ್ಯದಲ್ಲಿ ನಿರತರಾಗಿದ್ದು, ಅನುವಾದದ ಭವಿಷ್ಯ ಉಜ್ವಲವಾಗಿರುವಂತೆ ಗೋಚರಿಸುತ್ತಿದೆ. ಹೊಸ ತಂತ್ರಜ್ಞಾನ ಬಳಸಿಕೊಂಡರೆ ಮಾತ್ರ ಭಾಷೆ ಸಮೃದ್ಧವಾಗುತ್ತದೆ. ಆದ್ದರಿಂದ ತಂತ್ರಜ್ಞಾನದಿಂದ ದೂರ ಇರುವುದು ಸರಿಯಲ್ಲ ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಾಸ್ತಾವಿಕ ಮಾತನಾಡಿದರು. ಹಿರಿಯ ಪತ್ರಕರ್ತ ಹೃಷಿಕೇಶ ಬಹದ್ದೂರದೇಸಾಯಿ ಪರಿಚಯಿಸಿದರು. ಸತೀಶ ತುರಮರಿ ನಿರೂಪಿಸಿದರು. ವೇದಿಕೆ ಮೇಲೆ ಶ್ರೀನಿವಾಸ ವಾಡಪ್ಪಿ, ಶಂಕರ ಕುಂಬಿ, ವಿಶ್ವೇಶ್ವರಿ ಹಿರೇಮಠ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ