ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ದಾವಣಗೆರೆಯಲ್ಲಿ ನಡೆಯಬೇಕು ಎಂಬ ಸಾರ್ವಜನಿಕರ ಹಾಗೂ ಸಾಹಿತ್ಯ ಪ್ರೇಮಿಗಳ ಆಶಯ ಬೇಗನೇ ಪೂರ್ಣಗೊಳ್ಳಲಿ. ಅದಕ್ಕಾಗಿ ನಾವೆಲ್ಲರೂ ಸೇರಿ ಪ್ರಾರ್ಥಿಸೋಣ ಮತ್ತು ಸರ್ಕಾರ ಇದಕ್ಕೆ ಪೂರ್ಣ ಸಹಯೋಗ ನೀಡಲಿ ಎಂದು ಸಮ್ಮೇಳನ ಸರ್ವಾಧ್ಯಕ್ಷರಾದ ರಾಜಯೋಗಿನಿ ಬ್ರಹ್ಮಕುಮಾರಿ ಲೀಲಾಜಿ ಹೇಳಿದ್ದಾರೆ.
- ಸಮ್ಮೇಳನ ಸರ್ವಾಧ್ಯಕ್ಷೆ, ರಾಜಯೋಗಿನಿ ಬ್ರಹ್ಮಕುಮಾರಿ ಲೀಲಾಜಿ ಆಶಯ । - ಪ್ರಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ
- - -
ಕನ್ನಡಪ್ರಭ ವಾರ್ತೆ ದಾವಣಗೆರೆ
ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ದಾವಣಗೆರೆಯಲ್ಲಿ ನಡೆಯಬೇಕು ಎಂಬ ಸಾರ್ವಜನಿಕರ ಹಾಗೂ ಸಾಹಿತ್ಯ ಪ್ರೇಮಿಗಳ ಆಶಯ ಬೇಗನೇ ಪೂರ್ಣಗೊಳ್ಳಲಿ. ಅದಕ್ಕಾಗಿ ನಾವೆಲ್ಲರೂ ಸೇರಿ ಪ್ರಾರ್ಥಿಸೋಣ ಮತ್ತು ಸರ್ಕಾರ ಇದಕ್ಕೆ ಪೂರ್ಣ ಸಹಯೋಗ ನೀಡಲಿ ಎಂದು ಸಮ್ಮೇಳನ ಸರ್ವಾಧ್ಯಕ್ಷರಾದ ರಾಜಯೋಗಿನಿ ಬ್ರಹ್ಮಕುಮಾರಿ ಲೀಲಾಜಿ ಹೇಳಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ದಾವಣಗೆರೆ ಜಿಲ್ಲಾ ಪ್ರಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವಲೋಕನ ನುಡಿಯಲ್ಲಿ ಸರ್ಕಾರಕ್ಕೆ ಆಗ್ರಹಿಸಿದರು.
ಮುಂದಿನ ದಿನಗಳಲ್ಲಿ ಬೃಹತ್ ಪ್ರಮಾಣದಲ್ಲಿ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದೊಡ್ಡ ಮೈದಾನದಲ್ಲಿ ದಾವಣಗೆರೆಯಲ್ಲಿ ಆಯೋಜಿಸಿ, ಕರ್ನಾಟಕದ ಎಲ್ಲ ಜಿಲ್ಲೆಗಳಿಂದ ಲಕ್ಷಾಂತರ ಜನರು ಆಗಮಿಸುವಂತೆ ಅದ್ಭುತ ಕಾರ್ಯಕ್ರಮ ರೂಪಿಸುವ ಕುರಿತು ಅವರು ಮಹದಾಸೆ ವ್ಯಕ್ತಪಡಿಸಿದರು. ನಾವು ಸೇವಿಸುವ ಆಹಾರವೇ ನಮಗೆ ಔಷಧಿಯಾಗಬೇಕು. ಸದಾ ಹೊರಗಿನ ಆಹಾರ ಅಥವಾ ರೊಟ್ಟಿ ಅಂಗಡಿಗಳ ಪಾರ್ಸಲ್ ಮೇಲೆ ಅವಲಂಬಿತರಾಗದೇ, ಮನೆಯಲ್ಲಿಯೇ ಪೌಷ್ಟಿಕ ಆಹಾರ ತಯಾರಿಸಿ ಸೇವಿಸುವುದರಿಂದ ಆರೋಗ್ಯವನ್ನು ಸರಿಪಡಿಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.
ಮಹಿಳೆಯರು ಬಿಡುವಿನ ವೇಳೆಯಲ್ಲಿ ಮೊಬೈಲ್ ಬಳಕೆಗೆ ಸೀಮಿತವಾಗದೇ, ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಸಾಹಿತ್ಯದ ಅಭಿರುಚಿ ಬೆಳೆಸಿಕೊಂಡು, ಪುಸ್ತಕಗಳಲ್ಲಿರುವ ಉತ್ತಮ ಪಾಠಗಳನ್ನು ಮಕ್ಕಳಿಗೆ ಕಲಿಸಿದಾಗ ಮಾತ್ರ ಆದರ್ಶ ಗೃಹಿಣಿ ಹಾಗೂ ಆದರ್ಶ ಗೃಹಸ್ಥ ಜೀವನ ರೂಪುಗೊಳ್ಳಲು ಸಾಧ್ಯ ಎಂದರು.
ಹಿರಿಯ ಕವಯಿತ್ರಿಯರು ತಮ್ಮ ಕನಸು, ಆಶಯ ಹಾಗೂ ಇಚ್ಛೆಗಳನ್ನು ಬಿಂಬಿಸುವ ಸುಂದರ ಕವನಗಳನ್ನು ವಾಚನ ಮಾಡಿದರೆ, ಕಲಾವಿದರು ಕಂಸಾಳೆ, ಯಕ್ಷಗಾನ ಹಾಗೂ ನಾನಾ ಜಾನಪದ ನೃತ್ಯಗಳ ಮೂಲಕ ಕರ್ನಾಟಕದ ಸಂಸ್ಕೃತಿಯನ್ನು ವೇದಿಕೆಯ ಮೇಲೆ ಅತ್ಯಂತ ವಿಜೃಂಭಣೆಯಿಂದ ಪ್ರದರ್ಶಿಸಿದ್ದು ಸಮ್ಮೇಳನಕ್ಕೆ ಕಳೆ ನೀಡಿದವು ಎಂದರು.
ದಾವಣಗೆರೆಯ ಸಾಹಿತಿಗಳ ಪರಿಚಯ ಹಾಗೂ ಅಕ್ಕ ಮಹಾದೇವಿಯವರ ಜೀವನ ಚರಿತ್ರೆ ಮತ್ತು ವಚನಗಳ ಕುರಿತು ಪ್ರವಚನ ನಡೆಯಿತು. ಅಕ್ಕಮಹಾದೇವಿಯವರ ತತ್ತ್ವಗಳನ್ನು ಕೇವಲ ಹೊಗಳುವುದಷ್ಟೇ ಅಲ್ಲದೇ, ಪ್ರತಿಯೊಬ್ಬರೂ ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಮಾರೋಪ ಭಾಷಣ ಮಾಡಿದ ಚಿಕ್ಕಮಗಳೂರಿನ ಹಾಸ್ಯ ಭಾಷಣಗಾರ್ತಿ ನಾಗಶ್ರೀ ತ್ಯಾಗರಾಜ್ ಮಾತನಾಡಿ, ಇಂದಿನ ಮಹಿಳಾ ಪೀಳಿಗೆಯು ಸೋಶಿಯಲ್ ಮೀಡಿಯಾ ಮತ್ತು ಆಧುನಿಕತೆಯ ಯುಗದಲ್ಲಿ ಎರಡು ರೀತಿಯ ಹೊಣೆಗಾರಿಕೆಗಳ ನಡುವೆ ತ್ರಿಶಂಕು ಪರಿಸ್ಥಿತಿಯನ್ನು ಎದುರಿಸುತ್ತಿದೆ. ಸ್ವಲ್ಪ ಹೊರಗಡೆ ಓಡಾಡಿದರೆ ಅಥವಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾದರೆ ''''ಆಧುನಿಕತೆಯತ್ತ ವಾಲುತ್ತಿದ್ದಾರೆ'''' ಎಂದು ಹಿರಿಯರು ಭಾವಿಸಿದರೆ, ಎಐ, ಚಾಟ್‌ಜಿಪಿಟಿ ಮುಂತಾದ ತಂತ್ರಜ್ಞಾನ ಸಂಪೂರ್ಣವಾಗಿ ಗೊತ್ತಿಲ್ಲದ ಕಾರಣ ಕಿರಿಯರು ಅಥವಾ ಮಕ್ಕಳು ನಮ್ಮನ್ನು ''''ಹಳೆಯ ಪೀಳಿಗೆ'''' ಎಂದು ನೋಡುತ್ತಾರೆ. ಹಿರಿಯ ಮಹಿಳಾ ಸಾಧಕರು ತಮ್ಮ ಜೀವನದ ಕಷ್ಟ- ಸಂಕಷ್ಟಗಳನ್ನು ಮೀರಿ ಹೇಗೆ ಸಾಧನೆ ಮಾಡಿದರು ಎಂಬ ಅನುಭವದ ನುಡಿಗಳನ್ನು ದಾಖಲಿಸುವುದು ಇಂದಿನ ಪೀಳಿಗೆಗೆ ಅತ್ಯಂತ ಅಗತ್ಯವಾಗಿದೆ ಎಂದರು.
ಮುಂದಿನ ಮಹಿಳಾ ಸಾಹಿತ್ಯ ಸಮ್ಮೇಳನದ ವೇಳೆಗೆ ಪ್ರತಿಯೊಬ್ಬ ಸಾಧಕಿಯರ 2-3 ಪುಟಗಳ ಜೀವನಗಾಥೆ ಒಳಗೊಂಡ 60 ರಿಂದ 70 ಪುಟಗಳ ಪುಸ್ತಕವನ್ನು ಪ್ರಕಟಿಸಿ, ಉಡುಗೊರೆಯಾಗಿ ನೀಡುವಂತಹ ಕಾರ್ಯ ಯೋಜನೆಯಾಗಬೇಕು ಎಂದು ಕಸಾಪ ಜಿಲ್ಲಾಧ್ಯಕ್ಷ ವಾಮದೇವಪ್ಪ ಅವರಲ್ಲಿ ಮನವಿ ಮಾಡಿದರು. ಇಂತಹ ಪುಸ್ತಕ ಹಾಗೂ ಮಾರ್ಗದರ್ಶನವು ಮುಂಬರುವ ದಿನಗಳಲ್ಲಿ ಸಂಕಷ್ಟಗಳನ್ನು ಎದುರಿಸುವ ಮಹಿಳೆಯರಿಗೆ ಮತ್ತು ಯುವ ಪೀಳಿಗೆಗೆ ಧೈರ್ಯ ತುಂಬುವ ದಾರಿದೀಪವಾಗಲಿದೆ ಎಂದು ಹೇಳಿದರು.
ಕಾರಿಗನೂರು ಶ್ರೀ ಸಿದ್ಧಾರೂಢ ನಿಜಗುಣ ಆಶ್ರಮದ ಮಾತಾಜಿ ಶಿವದೇವಿ ಸಾನಿಧ್ಯವಹಿಸಿದ್ದರು. ಜಿಲ್ಲಾ ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ ಅಧ್ಯಕ್ಷತೆ ಸಮಾರೋಪ ಸಮಾರಂಭದಲ್ಲಿ ತಾಲೂಕು ಕಸಾಪ ಅಧ್ಯಕ್ಷೆ ಸುಮತಿ ಜಯಪ್ಪ, ಸಮ್ಮೇಳನದ ಪ್ರಧಾನ ಸಂಚಾಲಕರಾದ ವೀಣಾ ಕೃಷ್ಣಮೂರ್ತಿ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಕಸಾಪ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಅನಂತರ ವಿವಿಧ ಕ್ಷೇತ್ರಗಳ ಸಾಧಕ ಮಹಿಳೆಯರಿಗೆ ದಾವಣಗೆರೆ ಜಿಲ್ಲಾ ಮಹಿಳಾ ಸಾಹಿತ್ಯ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಿರ್ಮಲ ಶಿವಕುಮಾರ್ ಸ್ವಾಗತಿಸಿದರೆ, ಚೈತ್ರಾ ತಿಪ್ಪೇಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ವೀಣಾ ಮಹಾಂತೇಶ ವಂದಿಸಿದರು. ಜ್ಯೋತಿ, ಗಾಯತ್ರಿ ಕಾರ್ಯಕ್ರಮದ ನಿರ್ವಹಣೆ ಜವಾಬ್ದಾರಿ ವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.