ಯುವ ಪೀಳಿಗೆಯು ಉದ್ಯಮಶೀಲತೆ ಮೈಗೂಡಿಸಿಕೊಳ್ಳಲಿ: ಯಶವಂತರಾಜ್ ನಾಗಿರೆಡ್ಡಿ

KannadaprabhaNewsNetwork |  
Published : Oct 19, 2025, 01:00 AM IST
ಬಳ್ಳಾರಿಯ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಸಭಾಂಗಣದಲ್ಲಿ ಜರುಗಿದ ಲೀನ್ ಯೋಜನೆ ಮತ್ತು ಝಡ್.ಇ.ಡಿ ಹಾಗೂ ರಫ್ತು ಕುರಿತು ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಸಂಸ್ಥೆಯ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಮಾತನಾಡಿದರು.  | Kannada Prabha

ಸಾರಾಂಶ

ಸರ್ಕಾರ ಕೈಗಾರಿಕಾ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಯುವಕರು ಉದ್ಯಮವನ್ನು ಸ್ಥಾಪಿಸಲು ಒಂದು ಉತ್ತಮ ಅವಕಾಶ ದೊರೆಯುತ್ತದೆ.

ಬಳ್ಳಾರಿ: ಲೀನ್ ಯೋಜನೆ ಮತ್ತು ಝಡ್.ಇ.ಡಿ ಹಾಗೂ ರಫ್ತು ಯೋಜನೆಗಳಿಂದ ವಿವಿಧ ಸೌಲಭ್ಯಗಳನ್ನು ಪಡೆದು ವ್ಯಾಪಾರ ಮತ್ತು ಸಂಘ ಸಂಸ್ಥೆ ಜೊತೆ ಸೇರಿ ಯುವಕರು ನವ ಉದ್ಯಮವನ್ನು ಆರಂಭಿಸಿ ಉದ್ಯಮಶೀಲತೆ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಹೇಳಿದರು.

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ (ವಿಟಿಪಿಸಿ) ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಸಹಯೋಗದಲ್ಲಿ “ಎಂ.ಎಸ್.ಎಂ.ಇ ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವುದು” ಯೋಜನೆಯಡಿ ನಗರದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಲೀನ್ ಯೋಜನೆ ಮತ್ತು ಝಡ್.ಇ.ಡಿ ಹಾಗೂ ರಫ್ತು ಕುರಿತು ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರ ಕೈಗಾರಿಕಾ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಯುವಕರು ಉದ್ಯಮವನ್ನು ಸ್ಥಾಪಿಸಲು ಒಂದು ಉತ್ತಮ ಅವಕಾಶ ದೊರೆಯುತ್ತದೆ. ರೈತರು, ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಉದ್ಯಮಶೀಲತೆಯನ್ನು ಬೆಳೆಸಿಕೊಳ್ಳಬೇಕು. ಸರ್ಕಾರದಿಂದ ಸಣ್ಣ ಗುಡಿ ಕೈಗಾರಿಕೆ ಸ್ಥಾಪಿಸಲು ಸಬ್ಸಿಡಿ ವ್ಯವಸ್ಥೆ ಇದ್ದು, ಇದರ ಸೌಲಭ್ಯ ಪಡೆದು ನಿರುದ್ಯೋಗಿಗಳಿಗೆ ಕೆಲಸವನ್ನು ನೀಡಬೇಕು ಎಂದು ಹೇಳಿದರು.

ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷ ವಿ.ರಾಮಚಂದ್ರ ಅವರು ಮಾತನಾಡಿ, ನಮ್ಮ ದೇಶದಲ್ಲಿ ಸಣ್ಣ ಕೈಗಾರಿಕೆಗಳು ಅತಿ ಹೆಚ್ಚಾಗಿ ಕಂಡು ಬರುತ್ತವೆ. ಅತಿ ಹೆಚ್ಚು ಸಣ್ಣ ಕೈಗಾರಿಕೆಗಳು ರೈತರಿಂದ ಬೆಳವಣಿಯಾಗಿವೆ ಮತ್ತು ರೈತರಿಂದಲೇ ಉದ್ಯಮಗಳು ಬೆಳೆಯುತ್ತಿವೆ ಎಂದು ಹೇಳಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸೋಮಶೇಖರ್, ಭಾರತ ದೇಶವು ಆರ್ಥಿಕವಾಗಿ 4ನೇ ಸ್ಥಾನದಲ್ಲಿದೆ. ಅಭಿವೃದ್ಧಿಯಲ್ಲಿ ಕೃಷಿ ಮತ್ತು ಕೈಗಾರಿಕೆಗಳು ಪ್ರಧಾನಪಾತ್ರ ವಹಿಸುತ್ತವೆ. ಸಣ್ಣ ಪ್ರಮಾಣದ ಕೈಗಾರಿಕೆಗಳಿಂದ ಗ್ರಾಮೀಣ ಜನರಿಗೆ ಉದ್ಯೋಗ ಸಿಗುತ್ತದೆ. ವಿದ್ಯಾರ್ಥಿಗಳು ಮತ್ತು ಉದ್ಯಮದಾರರು ಪ್ರೋಡಕ್ಟ್ ಉತ್ಪನ್ನ ಮಾಡಲು ಈ ಯೋಜನೆಯು ಉತ್ತಮವಾಗಿದೆ. ಜಪಾನ್ ದೇಶದ ರೀತಿ ಉತ್ತಮ ಪ್ರೋಡಕ್ಟ್ಗಳನ್ನು ಉತ್ಪತ್ತಿ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಹತ್ತಿ ಗಿರಣಿಗಳ ಸಂಘದ ಅಧ್ಯಕ್ಷ ಡಿ.ತಿಪ್ಪಯ್ಯ, ಕಾಸಿಯಾ ಉಪಾಧ್ಯಕ್ಷ ನಿಂಗಣ್ಣ ಎಸ್ ಬಿರಾದರ, ಜಿಲ್ಲಾ ಕೈಗಾರಿಕಾ ಜಂಟಿ ಕಾರ್ಯದರ್ಶಿ ಕೆ.ಸಿ ಸುರೇಶ್‌ಬಾಬು, ಕಾಸಿಯಾ ಜಂಟಿ ಕಾರ್ಯದರ್ಶಿ ಕೇಶವ ಮೂರ್ತಿ ಆರ್, ಜಿಲ್ಲಾ ಅಭಿವೃದ್ಧಿ ಸಮಿತಿಯ ಪ್ಯಾನಾಲ್ ಅಧ್ಯಕ್ಷ ನಾಗರಾಜ ಸಿ ಯಲಿಗಾರ ಸೇರಿದಂತೆ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ