ಧಾರವಾಡ:
ಶಾಸ್ತ್ರೀಯ ಸಂಗೀತದಿಂದ ನೆಮ್ಮದಿ ಸಿಗುವುದಲ್ಲದೇ ನಿರಂತರವಾಗಿ ಕೇಳಿದರೆ ಆರೋಗ್ಯಕರ ಜೀವನ ಸಾಧ್ಯ ಎಂದು ವೈ.ಬಿ. ಅಣ್ಣಿಗೇರಿ ಕಾಲೇಜು ಅಧ್ಯಕ್ಷ ನಾಗೇಶ ಅಣ್ಣಿಗೇರಿ ಹೇಳಿದರು.ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಪಂ. ಪುಟ್ಟರಾಜ ಗವಾಯಿಗಳ 14ನೇ ಪುಣ್ಯಸ್ಮರಣೆ ಅಂಗವಾಗಿ ಆಲೂರ ವೆಂಕಟರಾವ್ ಸಭಾಭವನದಲ್ಲಿ ಹಮ್ಮಿಕೊಂಡ ಸಂಗೀತೋತ್ಸವ ಉದ್ಘಾಟಿಸಿದ ಅವರು, ಯುವಪೀಳಿಗೆ ಡಿಜೆ ಸಂಸ್ಕೃತಿಯ ಬೆನ್ನು ಹತ್ತದೇ ಮನಸ್ಸಿಗೆ ಮತ್ತು ಮೆದುಳಿಗೆ ಹಿತವನ್ನುಂಟು ಮಾಡುವ ಶಾಸ್ತ್ರೀಯ ಸಂಗೀತ ಕಡೆಗೆ ಯುವಕರು ಒಲವು ತೋರಬೇಕು ಎಂದರು.
ರಾಜ್ಯ ರೇಷ್ಮೆ ಮಾರಾಟ ಮಂಡಳಿ ಮಾಜಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ಸಂಗೀತ ಕೇಳುವುದರಿಂದ ಮನಸ್ಸು ಸದಾ ಉಲ್ಲಾಸದಿಂದ ಇರಲು ಸಾಧ್ಯ. ಸಾಕಷ್ಟು ರೋಗಗಳಿಗೂ ಸಂಗೀತ ಚಿಕಿತ್ಸೆ ಆಗಿರುವ ಉದಾಹರಣೆಗಳಿವೆ ಎಂದು ಹೇಳಿದರು.ಪ್ರಾಚಾರ್ಯ ಮೋಹನ ಸಿದ್ಧಾಂತಿ, ಸಾಮಾನ್ಯರಿಗಿಂತ ವಿಶೇಷ ಚೇತನರಿಗೆ ಸಾಮರ್ಥ್ಯ ಹೆಚ್ಚಿರುತ್ತದೆ. ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ಪಂ. ಪುಟ್ಟರಾಜರ ಬದುಕು ನಮಗೆಲ್ಲ ಆದರ್ಶ ಎಂದರು.
ಕರ್ನಾಟಕ ಥಿಂಕರ್ಸ್ ಫೋರಂ ರಾಜ್ಯಾಧ್ಯಕ್ಷ ಪಿ.ಎಚ್. ನೀರಲಕೇರಿ, ಸಂಗೀತ ಅದ್ಭುತ ಶಕ್ತಿ. ಅದಕ್ಕೆ ಮರುಳಾಗದವರು ಯಾರಿಲ್ಲ ಎಂದರು. ವಕೀಲ ಪ್ರಕಾಶ ಉಡಿಕೇರಿ, ಪ್ರಾಚಾರ್ಯ ರಾಜೇಶ ಹೊಂಗಲ, ಡಾ. ಉದಯ ರಾಯ್ಕರ, ಕಲಾ ಪ್ರತಿಷ್ಠಾನ ಅಧ್ಯಕ್ಷ ಎಂ.ಎಸ್. ಫರಾಸ, ಡಾ. ಬಿ.ಆರ್. ರಾಠೋಡ ಮತ್ತಿತರರು ಇದ್ದರು. ಗಾಯಕರಾದ ಪಂ. ರಾಧಿಕಾ ಕಾಖಂಡಕಿ, ಅಶೋಕ ನಿಂಗೋಲಿ, ಚೈತ್ರಾ ಆಲೂರ ಸಂಗೀತ ಕಚೇರಿ ನಡೆಸಿಕೊಟ್ಟರು. ಹಾರ್ಮೋನಿಯಂ ಸಾಥನ್ನು ವಿನೋದ ಪಾಟೀಲ ಹಾಗೂ ವಾದಿರಾಜ ದಂಡಾಪೂರ ತಬಲಾ ಸಾಥ್ ನೀಡಿದರು.ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಲಾಯಿತು. ಪ್ರೇಮಾನಂದ ಶಿಂಧೆ ಪ್ರಾರ್ಥಿಸಿದರು. ಮಾರ್ತಾಂಡಪ್ಪ ಕತ್ತಿ ಸ್ವಾಗತಿಸಿದರು. ಸುರೇಶ ಬೆಟಗೇರಿ ವಂದಿಸಿದರು. ಸಂಜನಾ ಎಸ್.ಎಂ. ನಿರೂಪಿಸಿದರು.