ಆಚರಣೆ, ಸಂಸ್ಕೃತಿಗೆ ಯುವ ಪೀಳಿಗೆ ಹತ್ತಿರವಾಗಲಿ: ಪರಮೇಶ್ವರ

KannadaprabhaNewsNetwork |  
Published : Aug 18, 2026, 02:45 AM IST
ಚಿತ್ರ : 17ಎಂಡಿಕೆ1 : ಕಕ್ಕಡ ಸಂಭ್ರಮದಲ್ಲಿ ಪಾಲ್ಗೊಂಡಿದ್ದವರು.  | Kannada Prabha

ಸಾರಾಂಶ

ಇಂದಿನ ಯುವ ಪೀಳಿಗೆ ಮೊಬೈಲ್ ಮೋಹಕ್ಕೆ ತುತ್ತಾಗಿ ನಮ್ಮ ಆಚರಣೆ ಮತ್ತು ಸಂಸ್ಕೃತಿಯಿಂದ ದೂರ ಸರಿಯುತ್ತಿರುವುದು ವಿಷಾಧನೀಯ ಎಂದು ಕೊಡಗು ಜಿಲ್ಲಾ ಮರಾಠ ಮರಾಟಿ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಎಂ.ಎ. ಪರಮೇಶ್ವರ್ ಹೇಳಿದರು.

ಮಡಿಕೇರಿ: ಇಂದಿನ ಯುವ ಪೀಳಿಗೆ ಮೊಬೈಲ್ ಮೋಹಕ್ಕೆ ತುತ್ತಾಗಿ ನಮ್ಮ ಆಚರಣೆ ಮತ್ತು ಸಂಸ್ಕೃತಿಯಿಂದ ದೂರ ಸರಿಯುತ್ತಿರುವುದು ವಿಷಾಧನೀಯ ಎಂದು ಕೊಡಗು ಜಿಲ್ಲಾ ಮರಾಠ ಮರಾಟಿ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಎಂ.ಎ. ಪರಮೇಶ್ವರ್ ಹೇಳಿದರು.

ಕೊಡಗು ಜಿಲ್ಲಾ ಮರಾಠ ಮರಾಟಿ ಸಮಾಜ ಸೇವಾ ಸಂಘ ಮತ್ತು ಮಹಿಳಾ ವೇದಿಕೆ ಹಾಗೂ ಯುವ ವೇದಿಕೆ ಆಶ್ರಯದಲ್ಲಿ ತಾಳತ್ತಮನೆಯ ಸಂಘದ ಸಭಾ ಭವನದಲ್ಲಿ ಶನಿವಾರ ನಡೆದ ಕಕ್ಕಡ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೊಡಗು ಜಿಲ್ಲಾ ಮರಾಠ/ಮರಾಟಿ ಸಮಾಜ ಸೇವಾ ಸಂಘದ ಸಭಾಭವನ ನಿರ್ಮಾಣ ಪ್ರಗತಿಯಲ್ಲಿದ್ದು, ಕಾಮಗಾರಿ ಪೂರ್ಣಗೊಳಿಸಲು ಸಮಾಜ ಬಾಂಧವರ ಸಹಕಾರ ಅಗತ್ಯವಾಗಿದೆ. ಸುಮಾರು 4 ಕೋಟಿ ವೆಚ್ಚದಲ್ಲಿ ಸಂಘದ ಸಭಾಭವನ ನಿರ್ಮಾಣವಾಗಲಿದೆ. ಈಗಾಗಲೇ ಸರ್ಕಾರದಿಂದ 2 ಕೋಟಿ ರು. ಅನುದಾನ ಘೋಷಣೆಯಾಗಿದ್ದು, 65 ಲಕ್ಷ ರು. ಸಿಕ್ಕಿದೆ. 1.35 ಕೋಟಿ ರು. ಬರಲು ಬಾಕಿ ಇದೆ. ಸರ್ಕಾರದ ಹಣದೊಂದಿಗೆ ಸಮಾಜ ಬಾಂಧವರ ಸಹಕಾರದೊಂದಿಗೆ 1.60 ಕೋಟಿ ರು. ವೆಚ್ಚದಲ್ಲಿ ಸಭಾಭವನ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನುಳಿದ ಕಾಮಗಾರಿ ನಡೆಸಲು ಸಮಾಜ ಬಾಂಧವರ ಸಹಕಾರ ಅಗತ್ಯವಾಗಿದ್ದು, ಪ್ರತಿ ಕುಟುಂಬದಿಂದ 5,000 ರು. ನೀಡುವಂತೆ ಮನವಿ ಮಾಡಿದರು.

ಸಂಘದ ಉಪಾಧ್ಯಕ್ಷೆ ದೇವಕ್ಕಿ ಜಿ.ಆರ್. ನಾಯ್ಕ್ ಮಾತನಾಡಿ, ಪ್ರಸ್ತುತ ನಮ್ಮ ದೇಹ ಚಳಿಯಿಂದ ಕೂಡಿದ್ದು, ಶಕ್ತಿ ಕುಂದಿರುತ್ತದೆ. ಇಂತಹ ಸಂದರ್ಭದಲ್ಲಿ ಆಟಿ ಪದಾರ್ಥಗಳು ದೇಹದ ಉಷ್ಣತೆಯನ್ನು ಹೆಚ್ಚಿಸಲು ಸಹಕಾರಿಯಾಗಿರುತ್ತದೆ ಎಂದರು.

ಸಂಘದ ಉಪಾಧ್ಯಕ್ಷ ಪಿ.ಕೆ. ಗಂಗಾಧರ್ ಮಾತನಾಡಿ, ಎಲ್ಲ ಜನಾಂಗ ಬಾಂಧವರು ಕೂಡ ಆಟಿ ಸಂಭ್ರಮದಂತಹ ಆಚರಣೆಯನ್ನು ಹಮ್ಮಿಕೊಳ್ಳುತ್ತಿದ್ದಾರೆ ಎಂದರು.

ಶ್ವೇತ ದಿವ್ಯ ಕುಮಾರ್ ಆಟಿ ಕಾರ್ಯಕ್ರಮದ ವಿಶೇಷತೆ ವಿವರಿಸಿದರು. ಮಹಿಳಾ ವೇದಿಕೆ ಅಧ್ಯಕ್ಷೆ ಜಲಜಾಕ್ಷಿ ನವೀನ್, ಯುವ ವೇದಿಕೆ ಅಧ್ಯಕ್ಷ ಸಂತೋಷ್ ಮಾತನಾಡಿದರು. ವೇದಿಕೆಯಲ್ಲಿ ಸಂಘದ ಕಾರ್ಯದರ್ಶಿ ಎಂ.ಸಿ. ಹೂವಮ್ಮ, ಕಟ್ಟಡ ಸಮಿತಿ ಕಾರ್ಯದರ್ಶಿ ಎಂ.ಎಸ್. ಯೋಗೇಂದ್ರ, ಸಮಾಜದ ಹಿರಿಯರಾದ ಎಂ.ಟಿ. ಆನಂದ ರಾವ್ ಇತರರಿದ್ದರು. ಗಮನ ಸೆಳೆದ ಆಟಿ ಖಾದ್ಯ: ಕಕ್ಕಡ ಸಂಭ್ರಮ ಕಾರ್ಯಕ್ರಮದಲ್ಲಿ ಕಕ್ಕಡ ತಿಂಗಳ ಖಾದ್ಯಗಳು ಗಮನ ಸೆಳೆದವು. ಸಮಾಜ ಬಾಂಧವರು ಒಂದೊಂದು ಆಟಿ ಖಾದ್ಯ ಮಾಡಿ ತಂದಿದ್ದರು. ವಿಶೇಷವಾಗಿ ಕಣಿಲೆ ಸಾರು ಮತ್ತು ಪಲ್ಯ, ಪತ್ರೊಡೆ, ಅಕ್ಕಿ ಪಾಯಸ, ಹಲಸಿನ ಹಣ್ಣಿನ ಹಿಟ್ಟು, ಕುಕ್ಕು ಸುಂಟಿ ಚಟ್ನಿ, ಹಲಸಿನ ಕಾಯಿ ಸಾರು, ಚಗಟೆ ಸೊಪ್ಪಿನ ಪಲ್ಯ, ಚರ್ಮೆ ಸೊಪ್ಪಿನ ಪಲ್ಯ, ಕೆಂಜಿಗದ ಕುಡಿ ಚಟ್ನಿ, ಕೆಸ ಪಲ್ಯ, ಬಾಳೆ ಪೂಂಬೆ ಪಲ್ಯ, ಕೆಸ ಸಾರು, ಹಲಸಿನ ಬೀಜದ ಚಟ್ನಿ, ಕೈಪುಳಿ ಚಟ್ನಿ, ಹಿರಳೆಕಾಯಿ, ಕೋಳಿ, ಹಂದಿ ಸಾಂಬಾರ್ ಗಮನ ಸೆಳೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಲ್‌ಎಲ್‌ಸಿ–ಎಚ್‌ಎಲ್‌ಸಿ ಕಾಲುವೆಗಳಿಗೆ ಜಂಟಿ ನೀರು ಹರಿಸಲು ಆಗ್ರಹ
ಪೊಲೀಸ್‌ ಸರ್ಪಗಾವಲಿನಲ್ಲಿ ಬಸವರಾಜ ರೆಡ್ಡಿ ಅಂತ್ಯಸಂಸ್ಕಾರ