ಕಾರಟಗಿ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಆ.2ರಂದು ನಡೆದ ಗುಡ್ಡ ಕುಸಿತ ದುರಂತದಲ್ಲಿ ಅಕಾಲಿಕ ಮೃತಪಟ್ಟ ತಾಲೂಕಿನ ಕಕ್ಕರಗೋಳ ಗ್ರಾಮದ ಕಾರ್ಮಿಕ ಕುಟುಂಬದ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಸಮೀಪದ ಬೂದಗುಂಪಾ ಗ್ರಾಮದ ಶ್ರೀಹುಚ್ಚೇಶ್ವರ ಹಿರಿಯ ಪ್ರಾಥಮಿಕ ಶಾಲೆ ಮುಂದಾಗಿದೆ.
ಮೃತ ಕಾರ್ಮಿಕ ಮಲ್ಲಿಕಾರ್ಜುನ ಕಟಗಿಯವರ ಮನೆಗೆ ಹುಚ್ಚೇಶ್ವರ ಹಿರಿಯ ಪ್ರಾಥಮಿಕ ಶಾಲೆ ಬೂದಗುಂಪಾದ ಕಾರ್ಯದರ್ಶಿ ಸಂತೋಷ್ ಕುಮಾರ್ ಜಿ. ಎರಕಲ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಈ ವೇಳೆ ಮಾತನಾಡಿದ ಅವರು, ಬಡ ಕುಟುಂಬವೊಂದು ದುಡಿಮೆ ಅರಸಿ ಹೊರಟು ದುರಂತ ಅಂತ್ಯ ಕಂಡಿರುವುದು ದುರ್ದೈವ. ಹೀಗಾಗಿ ಅಕಾಲಿಕ ಮೃತ್ಯುವಿಗೆ ಬಲಿಯಾದ ಕಾರ್ಮಿಕನ ಮಕ್ಕಳಾದ ಮಹಾಲಕ್ಷ್ಮೀ ಹಾಗೂ ದಿವ್ಯಗೆ ತಮ್ಮ ಶಾಲೆಯಲ್ಲಿ 8ನೇ ತರಗತಿಯವರೆಗೂ ಉಚಿತ ಶಿಕ್ಷಣ ನೀಡಲು ನಿರ್ಧರಿಸಲಾಗಿದೆ ಎಂದು ಪ್ರಕಟಿಸಿದರು.ಶಾಲೆಯ ಶಿಕ್ಷಕರು, ಕಕ್ಕರಗೋಳ ಗ್ರಾಮದ ನಿವಾಸಿಗಳಾದ ನರಸಿಂಹ, ಈರಪ್ಪ ರೌಡಕುಂದಿ, ಜಡಿಯಪ್ಪ ಕಾರಟಗಿ, ಬಸವರಾಜ ಛಲವಾದಿ, ಪಂಪಾಪತಿ ಜಲ್ಲಿ, ಭೀಮಣ್ಣ ಕಟಿಗೇರು ಇದ್ದರು.