ಡಾ. ಬಿ.ಆರ್. ಅಂಬೇಡ್ಕರ್ ಅವರ 134 ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಶಾಮಿಯ ಚಂದ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ
ಕನ್ನಡಪ್ರಭ ವಾರ್ತೆ ಕಂಪ್ಲಿಅಂಬೇಡ್ಕರ್ ಅವರನ್ನು ಬರೀ ಆಚರಣೆ, ಮೆರವಣಿಗೆಗಳಿಗೆ ಸೀಮಿತಗೊಳಿಸದೇ ಅವರ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳುವ ಕೆಲಸವನ್ನು ಇಂದಿನ ಯುವ ಜನತೆ ಮಾಡಬೇಕು ಎಂದು ಶಾಮಿಯ ಚಂದ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಸಿದ್ದಣ್ಣ ಪರಮೇಶ್ವರ ತಿಳಿಸಿದರು.
ಪಟ್ಟಣದ ಬಿಎಸ್‌ವಿ ಶಾಲೆ ಆವರಣದಲ್ಲಿ ತಾಲೂಕು ಆಡಳಿತ, ತಾಪಂ, ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 134 ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.ಮಹಾನ್ ನಾಯಕರನ್ನು ಬರೀ ಒಂದು ಜಾತಿಗೆ ಸೀಮಿತಗೊಳಿಸಬಾರದು. ಬದಲಿಗೆ ಅವರು ನೀಡಿದ ಕೊಡುಗೆ ಅವರ ಆದರ್ಶಗಳು ಇಡೀ ಜಗತ್ತಿಗೆ ಮಾದರಿಯಾಗಿವೆ. ನನ್ನನ್ನು ಮೂರ್ತಿಯಲ್ಲಿ ಕಾಣದೆ ಪುಸ್ತಕದಲ್ಲಿ ಕಾಣಬೇಕು ಎಂದು ಡಾ. ಬಿ.ಆರ್. ಅಂಬೇಡ್ಕರ್ ಅವರೇ ಹೇಳಿದ್ದಾರೆ. ಇಂದಿನ ಯುವ ಜನತೆ ಪುಸ್ತಕ ಪ್ರೇಮಿಗಳಾಗುವ ಮೂಲಕ ಸುಶಿಕ್ಷಣವಂತರಾಗಬೇಕು ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ರಾಜ್ಯ ಮಟ್ಟದ ದಿಶಾ ಸಮಿತಿಯ ರಾಜ್ಯ ಸದಸ್ಯ ಡಾ. ಎ.ಸಿ. ದಾನಪ್ಪ ಮಾತನಾಡಿದರು.ಇದೇ ವೇಳೆ ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು.
ಈ ಸಂದರ್ಭ ತಹಸೀಲ್ದಾರ್ ಶಿವರಾಜ್ ಶಿವಪುರ, ತಾಪಂ ಇಒ ಆರ್.ಕೆ. ಶ್ರೀ ಕುಮಾರ್, ಎಡಿ ಕೆ.ಎಸ್. ಮಲ್ಲನಗೌಡ, ಪಿಐ ಕೆ.ಬಿ. ವಾಸುಕುಮಾರ್, ಪುರಸಭೆ ಮುಖ್ಯಾಅಧಿಕಾರಿ ಕೆ. ದುರುಗಣ್ಣ, ಪುರಸಭೆ ಅಧ್ಯಕ್ಷ ಎಲ್.ಎನ್.ಟಿ. ಪ್ರಸಾದ್, ಸದಸ್ಯ ಕೆ. ಎಸ್. ಚಾಂದ್ ಭಾಷಾ, ಎಪಿಎಂಸಿ ಅಧ್ಯಕ್ಷ ಅಬೀಬ್ ರೆಹಮಾನ್, ಮುಖಂಡರಾದ ಕೆ.ಎಂ. ಹೇಮಯ್ಯ ಸ್ವಾಮಿ, ಲಕ್ಷ್ಮಣ, ಕೆ.ರಮೇಶ್, ರಾಮಪ್ಪ, ಅಕ್ಕಿ ಜಿಲಾನ್, ನಿಲಯ ಪಾಲಕರಾದ ವಿರೂಪಾಕ್ಷಿ, ಅರುಣ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇತರರಿದ್ದರು.