ಸಹಕಾರ ಕ್ಷೇತ್ರದ ಬಗ್ಗೆ ಯುವಕರು ಆಸಕ್ತಿ ಹೊಂದಲಿ

KannadaprabhaNewsNetwork | Published : Jul 21, 2024 1:17 AM

ಸಾರಾಂಶ

ಸಹಕಾರ ಕ್ಷೇತ್ರದ ಅಭಿವೃದ್ಧಿ ವಿಚಾರವು ಬಂದಾಗಲೆಲ್ಲ ಯುವಕರ ಪಾತ್ರ ಬಹಳ ಮುಖ್ಯ ಎನ್ನುವುದು ಸ್ವಾತಂತ್ರ ಹೋರಾಟದಲ್ಲೂ ನೋಡಬಹುದು

ಗದಗ: ಸಹಕಾರ ಎಂಬ ಪದ ಎಲ್ಲರ ನರನಾಡಿಯಲ್ಲಿ ಒಳಗೊಂಡಿರುವ ಪದವಾಗಿದ್ದು, ಕಣಗಿನಹಾಳದಲ್ಲಿ ಹುಟ್ಟಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇಡೀ ಏಷ್ಯಾ ಖಂಡದಲ್ಲಿ ಪ್ರಥಮ ಸಹಕಾರ ಸಂಘ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳಾಗಿರುವಿರಿ, ಆದ್ದರಿಂದ ತಾವೆಲ್ಲರೂ ಸಹಕಾರ ಕ್ಷೇತ್ರದ ಬಗ್ಗೆ ಸರಿಯಾದ ತಿಳಿವಳಿಕೆ ಪಡೆದು, ಕ್ಷೇತ್ರದ ಪ್ರಗತಿಗೆ ಯುವಕರು ಆಸಕ್ತಿ ವಹಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಎ. ರಡ್ಡೆರ ಹೇಳಿದರು.ಅವರು ನಗರದ ಬಸವೇಶ್ವರ ಮಹಾವಿದ್ಯಾಲಯದ ಸಭಾ ಭವನದಲ್ಲಿ ರಾಜ್ಯ ಸಹಕಾರ ಮಹಾಮಂಡಳಿ ಬೆಂಗಳೂರು, ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಇಲಾಖೆ ಸಹಯೋಗದಲ್ಲಿ ಜಿಲ್ಲೆಯ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ನಡೆದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ, ಚರ್ಚಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ಸಹಕಾರ ಯೂನಿಯನ್‌ ನಿರ್ದೇಶಕ ಎಸ್.ಎಸ್. ಪಟ್ಟಣಶೆಟ್ಟಿ ಮಾತನಾಡಿ, ಸಹಕಾರ ಕ್ಷೇತ್ರದ ಅಭಿವೃದ್ಧಿ ವಿಚಾರವು ಬಂದಾಗಲೆಲ್ಲ ಯುವಕರ ಪಾತ್ರ ಬಹಳ ಮುಖ್ಯ ಎನ್ನುವುದು ಸ್ವಾತಂತ್ರ ಹೋರಾಟದಲ್ಲೂ ನೋಡಬಹುದು.ಯುವಕರು ಅಭಿವೃದ್ಧಿಯ ಮನೋಭಾವದಿಂದ ಕಾರ್ಯನ್ಮೂಕರಾಗಬೇಕು ಹಾಗೂ ಇತ್ತೀಚಿಗೆ ಸಹಕಾರ ಕ್ಷೇತ್ರದಲ್ಲಿ ಅಷ್ಟೇ ಅಲ್ಲದೇ ಬಹುಪಾಲು ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗಿದ್ದು ದೇಶದ ಅಭಿವೃದ್ಧಿಗೆ ಉತ್ತೇಜನಕಾರಿಯಾಗಿದೆ ಎಂದರು.

ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷ ಸಿ.ಎಂ. ಪಾಟೀಲ ಮಾತನಾಡಿ, ವಿಶೇಷವಾಗಿ ಕೇಂದ್ರ ಸರ್ಕಾರವು ಸಹಕಾರ ಸಚಿವಾಲಯ ಪ್ರಾರಂಭ ಮಾಡುವುದರ ಜತೆಗೆ ವಿಶಿಷ್ಟ ಯೋಜನೆ ಹಾಕಿಕೊಂಡು ಅದಕ್ಕನುಗುಣವಾಗಿ ಹಣ ಬಿಡುಗಡೆ ಮಾಡಿ ಈ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿತು ಹಾಗೂ ರಾಜ್ಯ ಸರ್ಕಾರದ ಹಲವಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಯೋಜನೆ ಪ್ರಕಟಿಸಿದ್ದು ಯುವಕರನ್ನು ದೃಷ್ಟಿಯಲ್ಲಿಟ್ಟುಕೊಂಡೆ ರೂಪಿಸಲಾಗಿದೆ. ಇದರಿಂದ ಸಹಕಾರ ವಲಯವು ಅಭಿವೃದ್ಧಿಯತ್ತ ಸಾಗಲು ಯುವಕರ ಪಾತ್ರ ಬಹಳ ಪ್ರಮುಖವಾಗಿದೆ ಎಂದರು.

ಈ ವೇಳೆ ಪ್ರಬಂಧ ಹಾಗೂ ಚರ್ಚಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.

ಸಹಕಾರ ಸಂಘಗಳ ಉಪನಿಬಂಧಕಿ ಎಸ್.ಎಸ್. ಕಬಾಡೆ, ಪ್ರಾಂಶುಪಾಲ ಎಂ.ಎಂ. ಬುರಡಿ, ಪ್ರಶಾಂತ ಮುಧೋಳ, ವಿಶ್ರಾಂತ ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಂ.ಸಿ. ಉಪ್ಪಿನ, ಎಂ.ಬಿ. ಮಡಿವಾಳರ, ಡಿ.ಆರ್. ವೆಂಕಟರಾಮ ಇದ್ದರು. ಆರ್.ಎಸ್. ಕಲ್ಲನಗೌಡರ ಸ್ವಾಗತಿಸಿದರು, ಚಂದ್ರಶೇಖರ.ಎಸ್. ಕರಿಯಪ್ಪನವರ ನಿರೂಪಿಸಿದರು. ರಶೀದಾಬಾನು.ಸಿ. ಯಲಿಗಾರ ವಂದಿಸಿದರು.

Share this article