ಕನ್ನಡಪ್ರಭ ವಾರ್ತೆ ಕೋಲಾರಶಾಶ್ವತ ನೀರಾವರಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಪ್ರಗತಿ ಪರ ಸಂಘಟನೆಗಳು ಹಾಗೂ ಯುವಶಕ್ತಿಯಿಂದ ನೀರಾವರಿಯ ಹಕ್ಕೋತ್ತಾಯಗಳಿಗೆ ಆಗ್ರಹಿಸಿ ಜನಪ್ರತಿನಿಧಿಗಳ ಭಾವಚಿತ್ರ ಹಿಡಿದು ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ವೃತ್ತದಲ್ಲಿ ಪ್ರತಿಭಟಸಿ ರಸ್ತೆ ತಡೆ ನಡೆಸಲಾಯಿತು.ಶಾಶ್ವತ ನೀರಾವರಿ ಹೋರಾಟ ಸಮಿತಿಯ ಸಂಚಾಲಕ ಚಿಕ್ಕಬಳ್ಳಾಪುರ ಜಿಲ್ಲೆಯ ಆಂಜನೇಯರೆಡ್ಡಿ ಮಾತನಾಡಿ, ಕಳೆದ ೪೦ ವರ್ಷದಿಂದ ಶಾಶ್ವತ ನೀರಾವರಿಗಾಗಿ ಹೋರಾಟಗಳು ನಡೆಯುತ್ತಿದ್ದರು ಪರಿಹಾರ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೆರೆಗಳಿದ್ದರೂ ನೀರಿನ ಬವಣೆಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಸೇರಿದಂತೆ ಮೂರು ಜಿಲ್ಲೆಗಳಲ್ಲಿ ಸುಮಾರು ೫೪೦೦ ಕೆರೆಗಳಿದ್ದು, ರೈತರಿಗೆ ನೀರಿನ ಭವಣೆ ತಪ್ಪಲಿಲ್ಲ, ಅಂತರ್ಜಲ ಪಾತಾಳಕ್ಕೆ ಸೇರಿದ್ದು ೧೮೦೦ ಅಡಿಗಳವರೆಗೆ ಕೊಳವೆ ಬಾವಿಗಳು ಕೊರೆಯಿಸಿ ಲಕ್ಷಾಂತರ ರೂಪಾಯಿ ರೈತರ ಬೆವರಿನ ಹಣ ನೀರು ಪಾಲಾಗುತ್ತಿದೆ, ಅಳದ ಕೊಳವೆ ಬಾವಿಗಳಿಂದ ಸಿಗುತ್ತಿರುವ ನೀರಿನಲ್ಲಿ ರಾಸಾಯನಿಕ ಮಿಶ್ರಣದ ಪ್ಲೋರೈಡ್ ನೆಟ್ರೈಟ್‌ಗಳಿಂದ ಕೊಡಿದ್ದು ಈ ನೀರನ್ನು ಕುಡಿದ ಸಾರ್ವನಿಕರು ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದರು. ಜನಪ್ರತಿನಿಧಿಗಳ ವೈಫಲ್ಯನಮ್ಮನ್ನು ಆಳುವ ಸರ್ಕಾರಗಳು ಮತ್ತು ನಾವು ಆಯ್ಕೆ ಮಾಡಿ ಕಳುಹಿಸಿದ ೩ ಜಿಲ್ಲೆಯ ೧೫ ಶಾಸಕರು, ೫ ವಿಧಾನ ಪರಿಷತ್ ಸದಸ್ಯರು ಹಾಗೂ ೩ ಮಂದಿ ಲೋಕಸಭಾ ಸದಸ್ಯರಾದ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಒಗ್ಗಟಾಗಿ ಸರ್ಕಾರದ ಒತ್ತಡ ತಂದು ಜಿಲ್ಲೆಗೆ ಶಾಶ್ವತ ನೀರಾವರಿ ತರಲು ವಿಫಲರಾಗಿದ್ದಾರೆ ಎಂದು ದೂರಿದರು.
ಎತ್ತಿನಹೊಳೆ, ಕೆ.ಸಿ.ವ್ಯಾಲಿ, ಹೆಚ್.ಎನ್.ವ್ಯಾಲಿ, ಯೋಜನೆಗಳಿಗೆ ಜೋತು ಬಿದ್ದು ಸಮಗ್ರವಾದ ಶಾಶ್ವತ ನೀರಾವರಿ ಯೋಜನೆಗಳನ್ನು ಜನಪ್ರತಿನಿಧಿಗಳು ಸಂಪೂರ್ಣವಾಗಿ ಮರೆತೇ ಹೋಗಿದ್ದಾರೆ, ಸಾರ್ವಜನಿಕರ ಪಾಲಿಗೆ ಎತ್ತಿನ ಹೊಳೆ ಎಂಬುವುದು ಮರೀಚಿಕೆ ಆಗಿದೆ. ಎತ್ತಿನ ಹೊಳೆ ಯೋಜನೆಯು ಜನಪ್ರತಿನಿಧಿಗಳ ಪಾಲಿಗೆ ಎಟಿಎಂ ಕಾರ್ಡ್ ಆಗಿದೆ ಎಂದು ಟೀಕಿಸಿದರು. ಎತ್ತಿನಹೊಳೆ ನೀರು ಬರೋಲ್ಲಎತ್ತಿನಹೊಳೆ ಯೋಜನೆಯ ನೀರು ನಮ್ಮ ಭಾಗಕ್ಕೆ ಹರಿಯುವುದಿಲ್ಲ ಎಂದು ಗೊತ್ತಿದ್ದರೂ ಸಾವಿರಾರು ಕೋಟಿ ಸಾರ್ವಜನಿಕರ ತೆರಿಗೆ ಹಣವನ್ನು ದುಂದು ವೆಚ್ಚ ಮಾಡಲಾಗುತ್ತಿದೆ, ಕೆಸಿ ವ್ಯಾಲಿ, ಹೆಚ್.ಎನ್.ವ್ಯಾಲಿ ನೀರನ್ನು ೩ನೇ ಹಂತದ ಶುದ್ದೀಕರಣಕ್ಕೆ ಒಳಪಡಿಸದಿದ್ದರೆ, ನಮ್ಮ ಕೆರೆಗಳು ನಾಶವಾಗುವುದರ ಜೊತೆಗೆ ಅಂತರ್ಜಲವು ವಿಷ ಪೂರಿತವಾಗುವುದು, ೩ನೇ ಹಂತದ ಶುದ್ದೀಕರಣ ಕಡ್ಡಾಯವಾಗಿ ಮಾಡುವ ಮೂಲಕ ನಂತರದಲ್ಲಿ ಜಿಲ್ಲೆಗೆ ಹರಿಸುವಂತಾಗಬೇಕೆಂದು ಆಗ್ರಹಿಸಿದರು.ಕೃಷ್ಣ ನದಿ ನೀರು ಪೂರೈಸಲಿ ಅವಿಭಜಿತ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಗಡಿಯವರೆಗೆ ಆಂಧ್ರ ಪ್ರದೇಶದಿಂದ ಕೃಷ್ಣಾ ನದಿ ನೀರು ಹರಿದು ನೆರೆಯ ಆಂಧ್ರದ ಗಡಿಭಾಗದ ಕುಪ್ಪಂವರೆಗೆ ಬಂದಿರುವುದು. ಈ ಸಂದರ್ಭದಲ್ಲಿ ನಮ್ಮ ಜಿಲ್ಲೆಯ ಪಾಲಿನ ನೀರನ್ನು ಹರಿಸುವಂತೆ ಮಾಡುವಲ್ಲಿ ರಾಜ್ಯ ಸರ್ಕಾರವು ವಿಫಲವಾಗಿದೆ, ಅಧಿವೇಶನದಲ್ಲಿ ಪಕ್ಷಾತೀತವಾಗಿ ಮೂರು ಜಿಲ್ಲೆಯ ಶಾಸಕರು ಅಧಿವೇಶನದ ಒಳಗೆ ಮತ್ತು ಹೊರಗೆ ಒಗ್ಗಟ್ಟಾಗಿ ಹೋರಾಟ ಮಾಡುವ ಮೂಲಕ ಸರ್ಕಾರದ ಗಮನ ಸೆಳೆದು ಮಂಜೂರಾತಿ ಪಡೆಯಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಶಾಸಕರುಗಳ ವಿರುದ್ಧ ಮೂರು ಜಿಲ್ಲೆಗಳಲ್ಲಿ ಉಗ್ರವಾದ ಹೋರಾಟ ಹಮ್ಮಿ ಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಈ ವೇಳೆ ಸಮಿತಿಯ ಸಂಚಾಲಕ ಹೊಳಲಿ ಪ್ರಕಾಶ್, ರಾಮುಶಿವಣ್ಣ, ವಿವಿಧ ಸಂಘಟನೆಯ ಮುಖಂಡರಾದ ಚಂಬೆರಾಜೇಶ್, ಕನ್ನಡದ ವೆಂಕಟಪ್ಪ, ನಾರಾಯಣಸ್ವಾಮಿ, ವಿ.ಕೆ.ರಾಜೇಶ್, ಕನ್ನಡ ಪರಿಚಾರಿಕ ಸುರೇಶ್ ಇದ್ದರು.