ಬಳ್ಳಾರಿ: ಯುವ ಪೀಳಿಗೆಯು ಕೌಶಲ್ಯವಂತರಾಗಿ ಸಾಮಾಜಿಕ ಮತ್ತು ಆರ್ಥಿಕ ಸ್ವಾವಲಂಬನೆಯ ಜೀವನ ರೂಪಿಸಿಕೊಳ್ಳಲು ಕಲಿತ ವಿದ್ಯೆಗೆ ಕೌಶಲ್ಯ ಅತ್ಯಗತ್ಯ ಎಂದು ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಹೇಳಿದರು.
ಪದವೀಧರರು ತರಗತಿಯಲ್ಲಿ ಕಲಿತ ಜ್ಞಾನಕ್ಕೂ ಮತ್ತು ಉದ್ಯಮದಲ್ಲಿಯ ಅಗತ್ಯಗಳಿಗೂ ಸಾಕಷ್ಟು ಅಂತರವಿದೆ. ಈ ಅಂತರವನ್ನು ಕಡಿಮೆ ಮಾಡಲು ಕೌಶಲ್ಯ ತರಬೇತಿಯ ಅಗತ್ಯವಿದೆ. ಈ ನಿಟ್ಟಿನಲ್ಲಿ ವೃತ್ತಿಯಲ್ಲಿನ ದೈನಂದಿನ ಅಗತ್ಯಗಳಿಗೆ ಪೂರಕವಾದ ಕೌಶಲ್ಯ ತರಬೇತಿ. ಜ್ಞಾನ ಮತ್ತು ತಂತ್ರಜ್ಞಾನದ ಬಳಕೆಯ ತರಬೇತಿ ನೀಡಲಾಗುತ್ತಿದ್ದು, ಶಿಬಿರಾರ್ಥಿಗಳು ಟ್ಯಾಲಿ ಬಳಕೆಯ ಕೌಶಲ್ಯವನ್ನು ಪರಿಣಿತರಿಂದ ಪಡೆದು, ಸುಲಭವಾಗಿ ಉದ್ಯೋಗವಕಾಶ ಹೊಂದಬಹುದು ಎಂದು ಹೇಳಿದರು.
ತಂತ್ರಜ್ಞಾನ ಪ್ರತಿ ಕ್ಷೇತ್ರದ ಅವಿಭಾಜ್ಯವಾಗಿದೆ. ತಂತ್ರಜ್ಞಾನದ ಆವಿಷ್ಕಾರಗಳು ದಿನೇ ದಿನೇ ಬದಲಾಗುತ್ತಿವೆ. ತಂತ್ರಜ್ಞಾನದ ಬಳಕೆ ಇಲ್ಲದೇ ಇರಲು ಸಾಧ್ಯವಿಲ್ಲ ಎನ್ನುವ ಸ್ಥಿತಿಯಲ್ಲಿ ವಿಶ್ವವಿದೆ. ಇಂತಹ ಸಂದರ್ಭದಲ್ಲಿ ಯುವಶಕ್ತಿಯು ಸಂಪ್ರದಾಯಬದ್ಧ ಪರಿಣಿತಿಯ ಜೊತೆಯಲ್ಲಿ ಕೌಶಲ್ಯಪೂರ್ಣ ಪರಿಣಿತಿ ಪಡೆದಲ್ಲಿ ಸುಲಭವಾಗಿ ಯಶಸ್ಸನ್ನು ಸಾಧಿಸಲು ಸಾಧ್ಯ ಎಂದು ತಿಳಿಸಿದರು.ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಅವರು ಮಾತನಾಡಿ, ಯುವಪೀಳಿಗೆಯನ್ನು ಸಾಮಾಜಿಕವಾಗಿ-ಆರ್ಥಿಕವಾಗಿ ಮತ್ತು ಕೌಶಲ್ಯಪೂರ್ಣವಾಗಿ ಭವಿಷ್ಯದ ಪೀಳಿಗೆಗೆ ಸಮರ್ಥರನ್ನಾಗಿ ರೂಪಿಸುವಲ್ಲಿ ಬಳ್ಳಾರಿ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ ಆಸಕ್ತರಿಗೆ ಗುಣಮಟ್ಟದ ತರಬೇತಿಯನ್ನು ನೀಡುತ್ತಿದೆ ಎಂದರು.
ಮಾಜಿ ಅಧ್ಯಕ್ಷ ಸಿ.ಶ್ರೀನಿವಾಸ್ ರಾವ್ ಅವರು ಮಾತನಾಡಿ, ವಿದ್ಯಾರ್ಥಿಗಳು ಕೌಶಲ್ಯಪೂರ್ಣ ತರಬೇತಿ ಪಡೆದು ಜ್ಞಾನದ ಜೊತೆಯಲ್ಲಿ ಜೀವನಶೈಲಿ ಉನ್ನತೀಕರಣಗೊಳಿಸಿಕೊಳ್ಳಬೇಕು ಎಂದು ಅವರು ಹೇಳಿದರು.