ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಗಾಂಧಿ ಭವನದಲ್ಲಿ ಶುಕ್ರವಾರ ಕನ್ನಡ ಸೇನೆ-ಕರ್ನಾಟಕ ಜಿಲ್ಲಾ ಘಟಕದಿಂದ ನಡೆದ ಕನ್ನಡ ಜಾಗೃತಿ ಸಮಾವೇಶ, ಕನ್ನಡ ರಾಜ್ಯೋತ್ಸವದಲ್ಲಿ ಕನ್ನಡ ರತ್ನ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಹೆಣ್ಣು ಮಕ್ಕಳಿಗೆ ಎಲ್ಲಿಯವರೆ ಸಮಸ್ಯೆ, ಸವಾಲು, ಅವಮಾನಗಳನ್ನು ಎದುರಿಸುವ ಶಕ್ತಿ ತಮಗಿದೆ ಎಂದು ಗೊತ್ತಾಗುವುದಿಲ್ಲವೋ ಅಲ್ಲಿಯವರೆಗೆ ದೌರ್ಜನ್ಯ ನಿಲ್ಲುವುದಿಲ್ಲ. ಮಹಿಳೆಯರು ಪ್ರಶ್ನೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಆಗ ಮೋಸ-ವಂಚನೆಗಳಿಗೆ ಗುರಿಯಾಗುವುದಿಲ್ಲ. ಮೈಕ್ರೋ ಫೈನಾನ್ಸ್‌ಗಳನ್ನು ನಿಯಂತ್ರಣದಲ್ಲಿಡಲು ಜಿಲ್ಲಾಧಿಕಾರಿಗಳು ಪ್ರತಿ ತಾಲೂಕಿಗೂ ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದು ಮೈಕ್ರೋ ಫೈನಾನ್ಸ್‌ನವರಿಂದ ಮಹಿಳೆಯರು ಸಮಸ್ಯೆಗಳಿದ್ದರೆ ಅವರ ನೆರವು ಪಡೆಯುವಂತೆ ಸಲಹೆ ನೀಡಿದರು.ಹೆಣ್ಣು ಭ್ರೂಣ ಹತ್ಯೆ ಹೆಣ್ಣು ಕಾರಣೀಭೂತಳಾಗುತ್ತಿರುವುದು ವಿಷಾದದ ಸಂಗತಿ. ಹೆಣ್ಣಿನ ರಕ್ಷಣೆಗೆ ಪುರುಷರೂ ಟೊಂಕಕಟ್ಟಿ ನಿಲ್ಲಬೇಕಿದೆ. ಸೃಷ್ಟಿಯ ವಿರುದ್ಧವಾಗಿ ಹೋದರೆ ವಿನಾಶ ಖಚಿತ ಎನ್ನುವುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದು ಸೂಕ್ಷ್ಮವಾಗಿ ಹೇಳಿದರು.
ಹೆಣ್ಣು ಮಕ್ಕಳಿಗೆ ಹೊಟ್ಟೆಯಲ್ಲಿರುವಾಗಿನಿಂದಲೇ ಹುಟ್ಟಬೇಕೋ-ಸಾಯಬೇಕೋ ಎಂಬ ಹೋರಾಟ ಶುರುವಾಗುತ್ತದೆ. ಹುಟ್ಟಿದ ಪ್ರತಿಯೊಬ್ಬ ಹೆಣ್ಣು ಮಕ್ಕಳು ಶಕ್ತಿಯಾಗಿ ನಿಲ್ಲಬೇಕು. ಸಮಸ್ಯೆಗಳಿಗೆ ಹೆದರದೆ ದಿಟ್ಟತನದಿಂದ ಎದುರಿಸಬೇಕು. ತಾಯಿಯಾದವಳು ಮಗಳಿಗೆ ಪ್ರೀತಿಯನ್ನು ಕೊಡುತ್ತಾಳೆ. ತಂದೆ ಮಗಳಿಗೆ ಶಕ್ತಿಯನ್ನು ತುಂಬುತ್ತಾನೆ. ಹೆಣ್ಣು ತಾಯಿಯ ಪ್ರೀತಿ ತಂದೆಯ ಶಕ್ತಿಯನ್ನು ಪಡೆದುಕೊಂಡು ಉತ್ತಮ ರೀತಿಯಲ್ಲಿ ಬೆಳವಣಿಗೆ ಸಾಧಿಸಬೇಕು. ಹೆಣ್ಣು ಸಬಲಳಾದಾಗ ಮಾತ್ರ ಸಮಾಜ ಮತ್ತು ದೇಶದ ಪ್ರಗತಿ ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಎನ್.ಚಲುವರಾಯಸ್ವಾಮಿ ಅವರು, ಸಮಾಜ, ದೇಶಕ್ಕೆ ಒಳ್ಳೆಯದಾಗುವಂತಹ ಕಾರ್ಯಕ್ರಮಗಳನ್ನು ಸಂಘಟನೆಗಳು ಮಾಡಿದರೆ ಅದಕ್ಕೆ ಎಂದಿಗೂ ನಮ್ಮ ಬೆಂಬಲವಿರುತ್ತದೆ. ನಾಡು-ನುಡಿಯ ಬೆಳವಣಿಗೆಗೆ ಪೂರಕವಾಗಿ ಸಂಘಟನೆಗಳು ಶ್ರಮಿಸಿದಾಗ ಸಮಾಜದಿಂದ ಗೌರವಕ್ಕೆ ಪಾತ್ರರಾಗಲು ಸಾಧ್ಯವಾಗುತ್ತದೆ ಎಂದು ಚುಟುಕಾಗಿ ಮಾತನಾಡಿದರು.
ಕನ್ನಡನಾಡಿನ ಪ್ರತಿಯೊಬ್ಬರಲ್ಲೂ ಕನ್ನಡ ಪ್ರಜ್ಞೆ ಮೂಡಬೇಕು. ಕನ್ನಡದ ಪುಸ್ತಕಗಳನ್ನು ಓದುವವರ ಸಂಖ್ಯೆ ಹೆಚ್ಚಾಗಬೇಕು. ಕನ್ನಡ ಭಾಷೆಯ ಇತಿಹಾಸ, ಮಹತ್ವವನ್ನು ಮಕ್ಕಳಿಗೂ ಪರಿಚಯಿಸಿ ಅವರಲ್ಲಿ ಭಾಷೆಯ ಬಗ್ಗೆ ಪ್ರೀತಿಯನ್ನು ಬೆಳೆಸಿದಾಗ ಕನ್ನಡದ ಉಳಿವು ಸಾಧ್ಯವಾಗುತ್ತದೆ. ಕನ್ನಡದ ಬೆಳವಣಿಗೆಯೂ ಆಗುತ್ತದೆ ಎಂದರು.