ಅಂಕೋಲಾ ಬಳಿ ಜನವರಿ ಒಳಗೆ ವಿಮಾನ ನಿಲ್ದಾಣಕ್ಕೆ ಟೆಂಡರ್: ಸಂಸದ ಕಾಗೇರಿ

KannadaprabhaNewsNetwork |  
Published : Nov 09, 2024, 01:08 AM ISTUpdated : Nov 09, 2024, 01:09 AM IST
ಸಾಂದರ್ಭಿಕ ಚಿತ್ರ. | Kannada Prabha

ಸಾರಾಂಶ

ಅಲಗೇರಿ ವಿಮಾನ ನಿಲ್ದಾಣದ ಹೆಚ್ಚುವರಿ ರನ್‌ವೇಗೆ ಕೇಂದ್ರ ಹಾಗೂ ರಾಜ್ಯದ ಪಾಲುದಾರಿಕೆ ಅಂತಿಮವಾಗಿದೆ. ರಾಜ್ಯ ಸರ್ಕಾರದಿಂದ ₹೭೦ ಕೋಟಿ ಪರಿಹಾರ ನೀಡಬೇಕಿದೆ. ಆ ಮೊತ್ತ ಬಂದರೆ ನೌಕಾನೆಲೆಗೆ ನೀಡಬಹುದು. ರಾಜ್ಯ ಮತ್ತು ಕೇಂದ್ರದೊಂದಿಗೆ ಸತತ ಮಾತುಕತೆ ನಡೆಯುತ್ತಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಕಾರವಾರ: ಅಂಕೋಲಾ ತಾಲೂಕಿನ ಅಲಗೇರಿಯಲ್ಲಿ ನಿರ್ಮಿಸಲುದ್ದೇಶಿತ ನಾಗರಿಕ ವಿಮಾನ ನಿಲ್ದಾಣದ ಕೆಲಸದ ಟೆಂಡರ್ ಮುಂದಿನ ಜನವರಿ ಒಳಗೆ ಹಾಗೂ ಕಾಮಗಾರಿ ಮುಂದಿನ ಜೂನ್, ಜುಲೈನಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.ನಗರದಲ್ಲಿ ಶುಕ್ರವರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಲಗೇರಿ ವಿಮಾನ ನಿಲ್ದಾಣದ ಹೆಚ್ಚುವರಿ ರನ್‌ವೇಗೆ ಕೇಂದ್ರ ಹಾಗೂ ರಾಜ್ಯದ ಪಾಲುದಾರಿಕೆ ಅಂತಿಮವಾಗಿದೆ. ರಾಜ್ಯ ಸರ್ಕಾರದಿಂದ ₹೭೦ ಕೋಟಿ ಪರಿಹಾರ ನೀಡಬೇಕಿದೆ. ಆ ಮೊತ್ತ ಬಂದರೆ ನೌಕಾನೆಲೆಗೆ ನೀಡಬಹುದು. ರಾಜ್ಯ ಮತ್ತು ಕೇಂದ್ರದದೊಂದಿಗೆ ಸತತ ಮಾತುಕತೆ ನಡೆಯುತ್ತಿದೆ. ಜನವರಿ ಒಳಗೆ ಕೇಂದ್ರದಿಂದ ಟೆಂಡರ್ ಕರೆಯುವ ನಿರೀಕ್ಷೆಯಿದೆ ಎಂದರು.ನೌಕಾನೆಲೆ ವಿಶೇಷ ಭೂ ಸ್ವಾಧಿನಾಧಿಕಾರಿಗೆ ಕಡತಗಳನ್ನು ತ್ವರಿತ ವಿಲೇವಾರಿಗೆ ಸೂಚಿಸಲಾಗಿದೆ. ಕೆಲವು ನಿರಾಶ್ರಿತರು ಅಗತ್ಯ ದಾಖಲೆ ನೀಡುತ್ತಿಲ್ಲ. ಆದಷ್ಟು ಬೇಗನೆ ನೀಡಬೇಕು. ಮಳೆಗಾಲದಲ್ಲಿ ಬಿಣಗಾ, ಅರಗಾ, ಚೆಂಡಿಯಾ ಭಾಗದಲ್ಲಿ ನೀರು ನಿಂತು ಸಮಸ್ಯೆ ಆಗುತ್ತಿತ್ತು. ಮುಂದೆ ಆಗಬಾರದು ಎನ್ನುವ ಕಾರಣಕ್ಕೆ ಮೂಲ ನಕಾಶೆಯಂತೆ ಕಾಲುವೆ ಎಲ್ಲೆಲ್ಲಿ ಇದೆಯೋ ಅದರಲ್ಲಿಯೇ ನೀರು ಹರಿದು ಹೋಗಲು ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ ಎಂದರು.ನೌಕಾನೆಲೆಯಲ್ಲಿ ಸ್ಥಳೀಯರಿಗೆ ಉದ್ಯೋಗ ಸಿಗುತ್ತಿಲ್ಲ ಎನ್ನುವ ದೂರಿತ್ತು. ಹೀಗಾಗಿ ಸ್ಥಳೀಯ ಕನ್ನಡ, ಇಂಗ್ಲಿಷ್ ಪತ್ರಿಕೆಯಲ್ಲಿ ಜಾಹಿರಾತು ನೀಡುವಂತೆ, ಕಾರವಾರದಲ್ಲಿ ಪರೀಕ್ಷೆ ನಡೆಸುವಂತೆ ಪ್ರಯತ್ನ ನಡೆದಿದೆ.ನೌಕಾನೆಲೆ ಬಹಳ ದೊಡ್ಡ ಯೋಜನೆಯಾಗಿ ಬೆಳೆಯುತ್ತಿದೆ. ನಮ್ಮ ಯುವಕರಿಗೆ ಕೌಶಲ್ಯದಿಂದ ಕೂಡಿದ ಶಿಕ್ಷಣ ನೀಡಬೇಕು. ಯಾವ ರೀತಿ ಶಿಕ್ಷಣ, ತರಬೇತಿ ಬೇಕು ಎನ್ನುವ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿದೆ. ಅಂತಹ ತರಬೇತಿ ಆರಂಭಕ್ಕೂ ಚಿಂತನೆ ಮಾಡಲಾಗಿದೆ. ಹೊಸದಾಗಿ ಬಿಎಸ್‌ಎನ್‌ಎಲ್‌ನಿಂದ ಮಂಜೂರಾತಿಯಾದ ೮೦ ಟವರ್ ನಿರ್ಮಾಣಕ್ಕೆ ಅರಣ್ಯ ಇಲಾಖೆ ಅನುಮತಿ ಬೇಕು. ಉಳಿದ ೮೦ಕ್ಕೆ ಒಎಫ್‌ಸಿ ಕ್ಲಿಯರೆನ್ಸ್ ಬೇಕು. ರಾಜ್ಯ ಸರ್ಕಾರ ಕ್ಲಿಯರೆನ್ಸ್ ನೀಡಿದರೆ ಕೆಲಸ ವೇಗವಾಗುತ್ತದೆ ಎಂದು ಮಾಹಿತಿ ನೀಡಿದರು.ಜಿಲ್ಲಾಡಳಿತವನ್ನು ರಾಜ್ಯ ಸರ್ಕಾರ ಚುರುಕುಗೊಳಿಸಬೇಕು. ಆದರೆ ಕಾಂಗ್ರೆಸ್ ಸರ್ಕಾರಕ್ಕೆ ಇದಕ್ಕೆಲ್ಲ ಸಮಯವೇ ಇಲ್ಲ. ಡಿಸಿ, ಸಿಇಒ ಹಾಗೆ, ಕಾರ್ಯದರ್ಶಿ ಹೀಗೆ ಎಂದು ಬೈಯ್ಯುವುದೇ ಕೆಲಸವಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸವನ್ನೇ ಮಾಡುತ್ತಿಲ್ಲ. ಪ್ರವಾಸೋದ್ಯಮ ನೆಲಕಚ್ಚಿದೆ. ಅಲ್ಲಿಗೆ ಬರಬೇಡಿ. ಇಲ್ಲಿಗೆ ಹೋಗಬೇಡಿ ಎಂದು ಆದೇಶ ಹೊರಡಿಸುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.ಶಿರಸಿ- ಕುಮಟಾ ರಸ್ತೆ ಸಂಚಾರ ಬಂದ್ ಮಾಡುವ ಬಗ್ಗೆ ಕೇಳಿದಾಗ, ಈ ಹೆದ್ದಾರಿಯಲ್ಲಿ ೧೧ ಸೇತುವೆ ಆಗಬೇಕು. ರಸ್ತೆ ಬಂದ್ ಮಾಡದೇ ಇದ್ದರೆ ಕೆಲಸ ಆಗುವುದಿಲ್ಲ. ಕೆಲವು ಕಡೆ ಪರ್ಯಾಯ ಮಾರ್ಗವಿಲ್ಲ, ಅಲ್ಲಿ ಹೇಗೆ ಕೆಲಸ ಮಾಡಲು ಸಾಧ್ಯ? ಅಂತಹ ಸಂದರ್ಭದಲ್ಲಿ ರಸ್ತೆ ಬಂದ್ ಮಾಡಲು ಸೂಚಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಡಿಸಿ ತಾಂತ್ರಿಕ ಸಲಹೆ ಪಡೆದು ನಿರ್ಧಾರ ಮಾಡಬೇಕು ಎಂದು ಅಭಿಪ್ರಾಯಪಟ್ಟರು. ಎಂಎಲ್‌ಸಿ ಗಣಪತಿ ಉಳ್ವೇಕರ, ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೇಕರ, ನಾಗರಾಜ ನಾಯಕ, ಮನೋಜ ಭಟ್ ಇದ್ದರು.

ಸಮಸ್ಯೆಗೆ ಮುಕ್ತಿನೆಲ್ಲೂರು ಕಂಚಿನಬೈಲ ಭಾಗದಲ್ಲಿ ಕೃಷಿ ಭೂಮಿ ಮಾಲೀಕರಿಗೆ ಹೋಗಲು ಬಿಡುತ್ತಿರಲಿಲ್ಲ ಎನ್ನುವ ಸಮಸ್ಯೆಯಿತ್ತು. ಭೂ ಸ್ವಾಧೀನ ಪ್ರಕ್ರಿಯೆ ಅಂತಿಮವಾಗಿದ್ದು, ಹಣ ಜಮಾ ಆಗಿದೆ. ಮಾಲೀಕರು ದಾಖಲೆಗಳನ್ನು ಭೂ ಸ್ವಾಧೀನಾಧಿಕಾರಿಗೆ ನೀಡಿದ ಬಳಿಕ ಬೆಂಗಳೂರಿಗೆ ಹೋಗುತ್ತದೆ. ಅಲ್ಲಿಂದ ಹಣ ಜಮಾಗುತ್ತದೆ. ಅನೇಕ ವರ್ಷದ ಸಮಸ್ಯೆ ಮುಕ್ತಾಯವಾಗುವ ಹಂತಕ್ಕೆ ಬಂದಿದೆ ಎಂದು ಕಾಗೇರಿ ತಿಳಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ