ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಹಗಲು ದರೋಡೆಯಲ್ಲಿ ಮುಳುಗಿದೆ : ಬಿಎಸ್‌ವೈ

KannadaprabhaNewsNetwork |  
Published : Nov 09, 2024, 01:08 AM ISTUpdated : Nov 09, 2024, 12:28 PM IST
ಬಿಜೆಪಿ ತಾರಾ ಪ್ರಚಾರಕರಾದ ತಾರಾ ಅನುರಾಧ ಅವರು ಶುಕ್ರವಾರ ಸಂಡೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರ ಪರವಾಗಿ ಪ್ರಚಾರ ನಡೆಸಿ, ಮತಯಾಚಿಸಿದರು. | Kannada Prabha

ಸಾರಾಂಶ

ಸರ್ಕಾರದ ಖಜಾನೆಯ ಲೂಟಿಯಲ್ಲಿ ತೊಡಗಿರುವ ಸಿದ್ದರಾಮಯ್ಯ ಸರ್ಕಾರ ಅಧಿಕಾರದಲ್ಲಿ ಮುಂದುವರಿಯುವ ಯಾವ ನೈತಿಕತೆ ಉಳಿಸಿಕೊಂಡಿಲ್ಲ

ಸಂಡೂರು: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಹಗಲು ದರೋಡೆಯಲ್ಲಿ ಮುಳುಗಿದೆ. ಈ ಭಷ್ಟ ಸರ್ಕಾರವನ್ನು ಕಿತ್ತೊಗೆಯಬೇಕು. ಸರ್ಕಾರದ ಖಜಾನೆಯ ಲೂಟಿಯಲ್ಲಿ ತೊಡಗಿರುವ ಸಿದ್ದರಾಮಯ್ಯ ಸರ್ಕಾರ ಅಧಿಕಾರದಲ್ಲಿ ಮುಂದುವರಿಯುವ ಯಾವ ನೈತಿಕತೆ ಉಳಿಸಿಕೊಂಡಿಲ್ಲ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ರಾಜ್ಯಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ತಾಲೂಕಿನ ಗೊಲ್ಲಲಿಂಗಮ್ಮನಹಳ್ಳಿ, ಬೊಮ್ಮಾಘಟ್ಟ, ಚೋರುನೂರು, ಹಿರೆಕೆರೆಯಾಗಿನಹಳ್ಳಿ, ಬಂಡ್ರಿ, ಯಶವಂತನಗರ ಹಾಗೂ ಭುಜಂಗನಗರ ಗ್ರಾಮಗಳಲ್ಲಿ ಶುಕ್ರವಾರ ಅವರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಪರವಾಗಿ ಭರ್ಜರಿಯಾಗಿ ಪ್ರಚಾರ ನಡೆಸಿ, ಮತಯಾಚಿಸಿ ಮಾತನಾಡಿದರು.

ಈಗಾಗಲೇ ಲೋಕಾಯುಕ್ತ ತನಿಖೆ ನಡೆಯುತ್ತಿದೆ. ಸಿಬಿಐ ತನಿಖೆ ಆಗುವುದರಲ್ಲಿದೆ. ಸಿದ್ದರಾಮಯ್ಯ ಇಂದಲ್ಲ ನಾಳೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಜೈಲಿಗೆ ಹೋಗುವುದು ನಿಶ್ಚಿತ ಎಂದು ನುಡಿದರು.

ಕಾಂಗ್ರೆಸ್‌ನವರು ಹಣ, ಹೆಂಡ, ತೋಳು ಬಲ, ಅಧಿಕಾರ ಬಲವನ್ನು ಉಪಯೋಗಿಸಿ, ಜಾತಿ ವಿಷ ಬೀಜವನ್ನು ಬಿತ್ತಿ ಗೆಲ್ಲುತ್ತೇವೆನ್ನುವ ಕಾಲ ಒಂದಿತ್ತು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನ ನೀಡಿದ ತೆರಿಗೆ ಹಣವನ್ನು ಲೂಟಿ ಮಾಡುತ್ತಾ, ಜನ ಹಿತವನ್ನು ಮರೆಯುತ್ತಿದೆ. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ನೀರಾವರಿ ಯೋಜನೆಗಳು ನಿಂತಿವೆ. ವಿದ್ಯುತ್ ದರ, ಜಾಸ್ತಿಯಾಗಿದೆ. ಕಿಸಾನ್ ಸನ್ಮಾನ್ ಸಹಾಯಧನಕ್ಕೆ ನಮ್ಮ ಸರ್ಕಾರ ನೀಡುತ್ತಿದ್ದ ನಾಲ್ಕು ಸಾವಿರ ಸಹಾಯ ಧನವನ್ನು ಈಗಿನ ರಾಜ್ಯ ಸರ್ಕಾರ ನಿಲ್ಲಿಸಿದೆ. ದುಡಿಯುವ ಕೈಗಳಿಗೆ ಕೆಲಸವಿಲ್ಲದಂತಾಗಿದೆ ಎಂದು ಟೀಕಿಸಿದರು.

ಪ್ರಧಾನ ನರೇಂದ್ರ ಮೋದಿ ಆಶೀರ್ವಾದದಿಂದ ಇಡೀ ಜಗತ್ತು ಇಂದು ಭಾರತದ ಕಡೆ ನೋಡುತ್ತಿದೆ. ನೀವು ಕೊಡುವ ಒಂದೊಂದು ಮತವೂ ಬಂಗಾರು ಹನುಮಂತು ಹಾಗೂ ಪ್ರಧಾನ ನರೇಂದ್ರ ಮೋದಿ ಅವರಿಗೆ ಎಂದು ತಿಳಿದು ಮತ ಚಲಾಯಿಸಿ, ಬಂಗಾರು ಹನುಮಂತು ಅವರನ್ನು ಹೆಚ್ಚಿನ ಬಹುಮತದಿಂದ ಗೆಲ್ಲಿಸುವಂತೆ ಮನವಿ ಮಾಡಿದರು.

ಅಭ್ಯರ್ಥಿ ಬಂಗಾರು ಹನುಮಂತು ಅವರು ಮಾತನಾಡಿ, ಕ್ಷೇತ್ರದಲ್ಲಿ ೨೦ ವರ್ಷಗಳಿಂದ ಕಾಂಗ್ರೆಸ್ ಆಡಳಿತವಿದ್ದರೂ ಕ್ಷೇತ್ರ ಅಭಿವೃದ್ಧಿ ಹೊಂದಿಲ್ಲ. ಸಂಡೂರಿನಲ್ಲಿ ಅದೇ ಹಳೆ ಬಸ್ ನಿಲ್ದಾಣ, ಹಳೆ ಆಸ್ಪತ್ರೆ ಕಾಣುತ್ತಿದ್ದೇವೆ. ಗ್ರಾಮಾಂತರ ಪ್ರದೇಶಗಳಲ್ಲಿಯೂ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲಾಗಿಲ್ಲ. ಆದ್ದರಿಂದ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಸಲು ಬಿಜೆಪಿ ಪಣತೊಟ್ಟಿದೆ. ಕ್ಷೇತ್ರದ ಮತದಾರರು ತಮಗೆ ಮತ ನೀಡಿ, ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವಂತೆ ಮನವಿ ಮಾಡಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕರಾದ ಭೈರತಿ ಬಸವರಾಜ್, ಮಾಜಿ ಸಚಿವರಾದ ಜನಾರ್ದನ ರೆಡ್ಡಿ, ಶ್ರೀರಾಮುಲು, ಎಂ.ಪಿ. ರೇಣುಕಾಚಾರ್ಯ, ಮುಖಂಡರಾದ ಕೆ.ಎಸ್. ದಿವಾಕರ ಹಾಗೂ ತಾರಾ ಅನುರಾಧಾ ಬಂಗಾರು ಹನುಮಂತು ಅವರ ಪರ ಪ್ರಚಾರ ಮಾಡಿ, ಮತಯಾಚಿಸಿದರು. ಮುಖಂಡರಾದ ಡಿ. ಕೃಷ್ಣಪ್ಪ ಮುಂತಾದವರು ಉಪಸ್ಥಿತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ