ಉತ್ತಮ ಇಳುವರಿ ಬರುವ ಕಬ್ಬನ್ನು ಪೂರೈಸಿ: ಪರಪ್ಪ ಸವದಿ

KannadaprabhaNewsNetwork | Published : Nov 9, 2024 1:08 AM

ಸಾರಾಂಶ

ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ರೈತರ ಹಿತ ಕಾಪಾಡುವ ಕಾರ್ಖಾನೆಯಾಗಿದ್ದು, ರೈತರಿಗೆ ತೂಕದಲ್ಲಿ ಯಾವುದೇ ಮೋಸವಾಗದಂತೆ ಎಚ್ಚರಿಕೆ ವಹಿಸಿ ಪಾರದರ್ಶಕ ಆಡಳಿತದಿಂದ ಉತ್ತಮ ದರ ನೀಡುತ್ತ ಬಂದಿದ್ದೇವೆ. ಪ್ರಸಕ್ತ ವರ್ಷದಲ್ಲಿ ರೈತರು ಉತ್ತಮ ಇಳುವರಿಯ ಕಬ್ಬನ್ನು ಪೂರೈಸಿ ಕಾರ್ಖಾನೆಯ ಪ್ರಗತಿಗೆ ಸಹಕರಿಸಬೇಕು ಎಂದು ಅಧ್ಯಕ್ಷ ಪರಪ್ಪಣ್ಣ ಸವದಿ ರೈತರಲ್ಲಿ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಅಥಣಿ

ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ರೈತರ ಹಿತ ಕಾಪಾಡುವ ಕಾರ್ಖಾನೆಯಾಗಿದ್ದು, ರೈತರಿಗೆ ತೂಕದಲ್ಲಿ ಯಾವುದೇ ಮೋಸವಾಗದಂತೆ ಎಚ್ಚರಿಕೆ ವಹಿಸಿ ಪಾರದರ್ಶಕ ಆಡಳಿತದಿಂದ ಉತ್ತಮ ದರ ನೀಡುತ್ತ ಬಂದಿದ್ದೇವೆ. ಪ್ರಸಕ್ತ ವರ್ಷದಲ್ಲಿ ರೈತರು ಉತ್ತಮ ಇಳುವರಿಯ ಕಬ್ಬನ್ನು ಪೂರೈಸಿ ಕಾರ್ಖಾನೆಯ ಪ್ರಗತಿಗೆ ಸಹಕರಿಸಬೇಕು ಎಂದು ಅಧ್ಯಕ್ಷ ಪರಪ್ಪಣ್ಣ ಸವದಿ ರೈತರಲ್ಲಿ ಮನವಿ ಮಾಡಿದರು.

ಶುಕ್ರವಾರ ಕಾರ್ಖಾನೆ ಆವರಣದಲ್ಲಿ 2024-25 ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ ನೀಡಿ ಮಾತನಾಡಿ, ಕಾರ್ಖಾನೆ ರೈತರ ಕಾರ್ಖಾನೆಯಾಗಿದ್ದು, ರೈತರ ಮಕ್ಕಳು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರಿದ್ದಾರೆ. ಇತ್ತೀಚೆಗೆ ಸಹಕಾರಿ ನಿಯಮದ ಅಡಿ ಅವರನ್ನು ಕಾಯಂಗೊಳಿಸುವ ಮೂಲಕ ಅವರ ಬಹುದಿನಗಳ ಬೇಡಿಕೆ ಈಡೇರಿಸಲಾಗಿದೆ. ಕಾರ್ಖಾನೆಯ ಪ್ರಗತಿಯಲ್ಲಿ ಕಾರ್ಮಿಕರ ಪಾತ್ರವೂ ಕೂಡ ದೊಡ್ಡದಾಗಿದ್ದು, ಅವರೆಲ್ಲರ ಶ್ರಮದ ಫಲವಾಗಿ ಪ್ರಸಕ್ತ ವರ್ಷ 8 ಲಕ್ಷ ಟನ್ ಕಬ್ಬು ನುರಿಸುವ ಗುರಿ ಹೊಂದಿದ್ದೇವೆ ಎಂದರು.

ತಾಲೂಕಿನಲ್ಲಿ ಐದು ಸಕ್ಕರೆ ಕಾರ್ಖಾನೆಗಳಿದ್ದು, ನಮ್ಮದು ರೈತರ ಕಾರ್ಖಾನೆ. ನಾವು ರೈತರಿಗೆ ತೂಕದಲ್ಲಿ ಯಾವುದೆ ಕಾಲದಲ್ಲೂ ಮೋಸ ಮಾಡಿಲ್ಲ. ರೈತರ ಕಬ್ಬನ್ನು ಬಂಗಾರ ತೂಕ ಮಾಡಿದ ಹಾಗೆ ತೂಕ ಮಾಡುತ್ತೇವೆ. ನೀವು ಖಾಸಗಿಯಲ್ಲಿ ತೂಕ ಮಾಡಿಸಿ ನಮ್ಮ ಕಾರ್ಖಾನೆ ತೂಕ ಮಾಡಿಸಿ ನೋಡಿ ಸ್ವಲ್ಪವೂ ವ್ಯತ್ಯಾಸವಿರಲ್ಲ. ಈ ಬಾರಿಯೂ ಎಫ್ ಆರ್ ಪಿ ದರ ನೀಡಲಾಗುವುದು ಎಂದು ಭರವಸೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ಇಂಚಲದ ಡಾ. ಶಿವಾನಂದ ಭಾರತಿ ಸ್ವಾಮೀಜಿ ಮಾತನಾಡಿ, ಸತ್ಯ ಮತ್ತು ಶ್ರೇಷ್ಠ ಭಾವದಿಂದ ಮಾಡಿದ ಕಾಯಕದಿಂದ ಶಾಂತಿ, ಸಮೃದ್ಧಿ ಮತ್ತು ಐಶ್ವರ್ಯ ಲಭಿಸುತ್ತದೆ. ರೈತರು, ಆಡಳಿತ ಮಂಡಳಿಯವರು, ಕಾರ್ಖಾನೆಯ ಎಲ್ಲಾ ಕಾರ್ಮಿಕರು ತಮ್ಮ ಕಾಯಕವನ್ನು ನಿಷ್ಠೆಯಿಂದ ಮಾಡಿದಾಗ ಕಾರ್ಖಾನೆ ಪ್ರಗತಿ ಹೊಂದಲು ಸಾಧ್ಯ. ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಯೂ ರೈತರು ಕಟ್ಟಿ ಬೆಳೆಸಿದ ಕಾರ್ಖಾನೆಯಾಗಿದ್ದು, ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಪಾರದರ್ಶಕ ಆಡಳಿತ ನೀಡಿ ಕಾರ್ಖಾನೆಯ ಪ್ರಗತಿಗೆ ಶ್ರಮಿಸಬೇಕೆಂದು ಹೇಳಿದರು.

ಈ ವೇಳೆ ಉಪಾಧ್ಯಕ್ಷ ಶಂಕರ ವಾಘಮೋಡೆ, ಆಡಳಿತ ಮಂಡಳಿ ಸದಸ್ಯರಾದ ಶಾಂತಿನಾಥ ನಂದೇಶ್ವರ, ರಮೇಶ ಪಟ್ಟಣ, ಸೌರಭ ಪಾಟೀಲ, ಎಮ್ ಎಮ್ ಗೋಟಕಿಂಡಿ, ಎಸ್ ಎಚ್ ನಾಯಿಕ, ಎಚ್.ವಾಯ್. ಜಗದೇವ, ಪಿ.ಸಿ .ಪಾಟೀಲ, ಜೆ.ಎಮ್. ಜತ್ತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಜಿ.ಎಂ. ಜತ್ತಿ ಸ್ವಾಗತಿಸಿದರು , ಸುರೇಶ ಠಕ್ಕಣ್ಣವರ ನಿರೂಪಿಸಿದರು, ಸಿ.ಡಿ. ಪಾಶ್ಚಾಪೂರೆ ವಂದಿಸಿದರು.

Share this article