ಯುವ ಸಮುದಾಯ ರಂಗಾಸಕ್ತಿ ಮೈಗೂಡಿಸಿಕೊಳ್ಳಲಿ

KannadaprabhaNewsNetwork |  
Published : Oct 17, 2025, 01:02 AM IST
ಬಳ್ಳಾರಿಯ ಹೊಂಗಿರಣ ಸಭಾಂಗಣದಲ್ಲಿ ಜರುಗಿದ ದಿ. ಕಂದಗಲ್ ಹನುಮಂತರಾಯರು ವಿರಚಿತ ರಕ್ತರಾತ್ರಿ ಸಂಕಲಿತ ಭಾಗ ಗದಾಯುದ್ಧ ಪೌರಾಣಿಕ ನಾಟಕ ಪ್ರದರ್ಶನಕ್ಕೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ಧರಾಮ ಕಲ್ಮಠ ಅವರು ಚಾಲನೆ ನೀಡಿದರು.  | Kannada Prabha

ಸಾರಾಂಶ

ಯುವ ಸಮುದಾಯ ರಂಗಾಸಕ್ತಿ ಮೈಗೂಡಿಸಿಕೊಳ್ಳಬೇಕು

ಬಳ್ಳಾರಿ: ನಾಡು-ನುಡಿ ಕಟ್ಟುವ ಕೆಲಸ ರಂಗ ಕಲಾಸಕ್ತರಿಂದಾಗಬೇಕು. ಯುವ ಸಮುದಾಯ ರಂಗಾಸಕ್ತಿ ಮೈಗೂಡಿಸಿಕೊಳ್ಳಬೇಕು ಎಂದು ರಂಗತೋರಣ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ಸಲಹೆ ನೀಡಿದರು.

ನಗರದ ಸಾಂಸ್ಕೃತಿಕ ಸಮುಚ್ಚಯದ ಹೊಂಗಿರಣ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜನೆಯಡಿ ಅನುರಾಗ ಪಲ್ಲವಿ ಸಾಂಸ್ಕೃತಿಕ ಕಲಾ ಟ್ರಸ್ಟ್ ದೇವಲಾಪುರ ಹಮ್ಮಿಕೊಂಡಿದ್ದ ದಿ. ಕಂದಗಲ್ ಹನುಮಂತರಾಯರು ವಿರಚಿತ ರಕ್ತರಾತ್ರಿ ಸಂಕಲಿತ ಭಾಗ ಗದಾಯುದ್ಧ ಪೌರಾಣಿಕ ನಾಟಕ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಜಿಲ್ಲೆಯಲ್ಲಿ ಅನೇಕ ಪ್ರತಿಭಾನ್ವಿತ ಹಿರಿಯ ರಂಗಭೂಮಿ ಕಲಾವಿದರಿದ್ದಾರೆ. ಈಗಿನ ಯುವಪೀಳಿಗೆಗೆ ರಂಗಾಸಕ್ತಿ ಬೆಳೆಸಿ, ರಂಗಭೂಮಿಯ ಪಟ್ಟುಗಳನ್ನು ಕಲಿಸಿಕೊಡಬೇಕು. ಆಗ ಮಾತ್ರ ಮುಂದಿನ ತಲೆಮಾರಿಗೆ ರಂಗಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯ ಎಂದರು.

ಚಾಲನೆ ನೀಡಿದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಸಿದ್ಧರಾಮ ಕಲ್ಮಠ, ಮನುಷ್ಯನ ಅಂತರಾಳ ಗಟ್ಟಿಗೊಳಿಸುವ ಶಕ್ತಿ ರಂಗಭೂಮಿಗಿದೆ. ಬಳ್ಳಾರಿ ರಾಘವರು, ಜೋಳದರಾಶಿ ದೊಡ್ಡನಗೌಡರು, ಸುಭದ್ರಮ್ಮ ಮನ್ಸೂರು,

ಬೆಳಗಲ್ಲು ವೀರಣ್ಣನಂತಹವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಲೆ ಪ್ರದರ್ಶಿಸಿ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಅದನ್ನು ಮುಂದುವರಿಸುವ ಜವಾಬ್ದಾರಿ ಆದವಾನಿ ವೀಣಮ್ಮ ಮತ್ತವರ ಸಂಗಡಿಗರ ಹೆಗಲ ಮೇಲಿದೆ ಎಂದರು.

ಕಲಾ ಪೋಷಕರ ಸಹಕಾರವಿಲ್ಲದೆ ರಂಗಭೂಮಿ ಉಳಿಯಲು ಅಸಾಧ್ಯ. ಸರ್ಕಾರದ ನೆರವು, ಪ್ರೋತ್ಸಾಹದ ಜತೆಗೆ ಕಲಾಪೋಷಕರ ಸಹಕಾರವೂ ಬಹಳ ಮುಖ್ಯ ಎಂದು ಹಿರಿಯರಂಗಭೂಮಿ ಕಲಾವಿದೆ ವರಲಕ್ಷ್ಮಿ ತಿಳಿಸಿದರು.

ಬಯಲಾಟದ ಹಸ್ತಪ್ರತಿ ಪುಸ್ತಕ ಮುದ್ರಿತಗೊಳಿಸಿ, ರಂಗಗೀತೆಗಳ ಧ್ವನಿಮುದ್ರಣ ದಾಖಲೀಕರಣ ಮಾಡಿ ಮುಂದಿನ ಪೀಳಿಗೆಗೆ ತಿಳಿಯುವಂತೆ ಸರಳೀಕರಿಸಬೇಕಾಗಿದೆ ಎಂದು ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಕಾರ್ಯದರ್ಶಿ ತಿಪ್ಪೇಸ್ವಾಮಿ ಮುದ್ದಟನೂರು ತಿಳಿಸಿದರು.

ಹಿರಿಯ ಕಲಾವಿದೆ ಆದವಾನಿ ಬಿ. ವೀಣಾ ಹಾಗೂ ವೀರೇಶ್ ದಳವಾಯಿ ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ಆದವಾನಿ ಬಿ. ವೀಣಾ ಅವರ ತಂಡದಿಂದ ರಕ್ತರಾತ್ರಿ ಸಂಕಲಿತ ಭಾಗ ಗದಾಯುದ್ಧ ಪೌರಾಣಿಕ ನಾಟಕ ಪ್ರದರ್ಶನಗೊಂಡಿತು. ತಿಪ್ಪೇಸ್ವಾಮಿ ಕ್ಯಾಷಿಯೋ, ಯೋಗೀಶ್ ತಬಲಾ ಹಾಗೂ ಮುರುಳಿ ಚಳ್ಳಕೆರೆ ವಸ್ತ್ರಾಲಂಕಾರ ನಿರ್ವಹಿಸಿದರು.

PREV

Recommended Stories

ಆರೆಸ್ಸೆಸ್‌ ವಿಚಾರಕ್ಕೆ ಪ್ರಿಯಾಂಕ್‌ಗೆ ಬೆದರಿಕೆ ಕರೆ ಮಾಡಿದ್ದವನ ಬಂಧನ
2,350 ಕೋಟಿ ವೆಚ್ಚದಲ್ಲಿ ಕ್ರಿಕೆಟ್‌ ಸ್ಟೇಡಿಯಂ ನಿರ್ಮಾಣಕ್ಕೆ ಒಪ್ಪಿಗೆ