ಕನ್ನಡಪ್ರಭವಾರ್ತೆ ಗುಳೇದಗುಡ್ಡ
ಹೆಲ್ಮೆಟ್ ಹಾಕಿಕೊಳ್ಳದೆ, ಚಾಲನೆ ಪರವಾನಗಿ ಇಲ್ಲದೆ ಬೈಕ್ ಗಳನ್ನು ಓಡಿಸುವುದರಿಂದ ಆಕಸ್ಮಿಕ ಅಪಘಾತ ಸಂಭವಿಸಿ ಪ್ರಾಣಕ್ಕೆ ಕುತ್ತು ಬರುತ್ತದೆ ಎಂದು ಬಾದಾಮಿ ಸಿಪಿಐ ಕರಿಯಪ್ಪ ಬನ್ನೆ ಹೇಳಿದರು.ಶನಿವಾರ ಪಟ್ಟಣಕ್ಕೆ ರಸ್ತೆ ಅಪಘಾತಗಳ ವಿಷಯವಾಗಿ ಜಿಲ್ಲಾ ಆರ್.ಟಿ.ಒ. ಜೊತೆಗೆ ರಸ್ತೆ ಪರಿಶೀಲನೆ ಕಾರ್ಯ ನಿಮಿತ್ತ ಬಂದ ಸಂದರ್ಭದಲ್ಲಿ ಬಸ್ ನಿಲ್ದಾಣದಲ್ಲಿ ಸ್ವಲ್ಪ ಸಮಯ ನಿಂತು ಬೈಕ್ ಚಾಲನೆ ಪರವಾನಗಿ ಮತ್ತು ಹೆಲ್ಮೆಟ್ ಧರಿಸದೆ ಸಂಚರಿಸುವವರನ್ನು ತಡೆದು ದಂಡ ಹಾಕಿ ತಿಳಿವಳಿಕೆ ನೀಡಿದರು.
ಬಸ್ ನಿಲ್ದಾಣದ ಒಳಗೆ ಮತ್ತು ಹೊರಗೆ ನೂರಾರು ಯುವಕ-ಯುವತಿಯರು ಹೆಲ್ಮೇಟ್ ಧರಿಸದೆ ಬೈಕ್ ಓಡಿಸಿತ್ತಿರುವುದನ್ನು ಕಂಡು ಕರೆದು ತಿಳಿವಳಿಕೆ ಹೇಳಿದರು. ಕಾಲೇಜು ಮುಗಿಸಿ ಪಕ್ಕದ ಹಳ್ಳಿಗಳಿಗೆ ಬಸ್ ಮೂಲಕ ಹೋಗಲು ಬಸ್ ನಿಲ್ದಾಣಕ್ಕೆ ಬಂದ ವಿದ್ಯಾರ್ಥಿಗಳನ್ನು ಕರೆದು ಸುಗಮ ಸಂಚಾರದ ಅರಿವು ಮೂಡಿಸಿ, ಅತೀ ವೇಗವಾಗಿ ಬೈಕ್ ಚಲಾಯಿಸುವುದು ಅಪಘಾರಕ್ಕೆ ದಾರಿ ಮಾಡಿಕೊಡುತ್ತದೆ. ವೇಗವಾಗಿ ಬೈಕ್ ಓಡಿಸುವಾಗ ತಾವು ಮತ್ತು ಎದುರಿಗಿರುವವರ ಪ್ರಾಣಕ್ಕೂ ಅಪಾಯವಿರುತ್ತದೆ. ನಿಧಾನವಾಗಿ ಬೈಕ್ ಓಡಿಸಬೇಕು. ಲೈಸನ್ಸ್ ಕಡ್ಡಾಯವಾಗಿ ಹೊಂದಿರಬೇಕು. ಹೆಲ್ಮೆಟ್ ಅಗತ್ಯವಾಗಿ ಬಳಸಬೇಕು ಎಂದು ಸಲಹೆ ನೀಡಿದರು. ಇದೇ ವೇಳೆ ಬಸ್ ನಿಲ್ದಾಣದಲ್ಲಿ ವಾಹನ ನಿಲುಗಡೆ ನಿಷೇಧಿಸಿದೆ ಎಂಬ ನಾಮಫಲಕದ ಬಳಿಯೇ ಯುವತಿಯೊಬ್ಬಳು ಹೆಲ್ಮೇಟ್ ಹಾಗೂ ಬೈಕ್ ನೊಂದಿಗೆ ನಿಂತಿರುವುದನ್ನು ಕಂಡು, ನಿಂತವರಿಗೆ ಆ ದೃಶ್ಯ ತೋರಿಸಿ, ಯುವತಿಯನ್ನು ಕರೆದು ತಿಳಿವಳಿಕೆ ಹೇಳಿ ದಂಡ ಹಾಕಿದ ಘಟನೆ ನಡೆಯಿತು. ಪಿಎಸೈ ಲಕ್ಷ್ಮಣ ಆರಿ ಮಾತನಾಡಿ, ವಿದ್ಯಾರ್ಥಿಗಳು ವಾಹನ ಚಾಲನಾ ಪರವಾನಗಿ ಹಾಗೂ ಹೆಲ್ಮೇಟ್ ಇಲ್ಲದೆ ರಸ್ತೆ ಮೇಲೆ ಬೈಕ್ ಓಡಿಸುವುದು ಕಂಡು ಬಂದರೆ ದಂಡ ಹಾಕುತ್ತೇವೆ. ಪಾಲಕರನ್ನು ಸ್ಟೇಷನ್ನಿಗೆ ಕರೆಯಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಜಿಲ್ಲಾ ರಸ್ತೆ ಸಾರಿಗೆ ಅಧಿಕಾರಿ (ಆರ್.ಟಿ.ಓ.) ವಿ.ಡಿ. ಹಿರೇಮಠ ಇದ್ದರು.