ಯುವಜನತೆ ವಿವೇಕರ ಆದರ್ಶ ಮಂತ್ರವಾಗಿಸಲಿ: ಥಾವರ್‌ಚಂದ್‌ ಗೆಹಲೋತ್‌

KannadaprabhaNewsNetwork |  
Published : Oct 25, 2025, 01:00 AM IST
24ಡಿಡಬ್ಲೂಡಿ1ಅಖಿಲ ಭಾರತ ವೀರಶೈವ ಲಿಂಗಾಯುತ ಮಹಾಸಭಾದಲ್ಲಿ ಧಾರವಾಡ ರಾಮಕೃಷ್ಣ ವಿವೇಕಾನಂದ ಆಶ್ರಮದಿಂದ ಶುಕ್ರವಾರ ಆಯೋಜಿಸಿದ್ದ ಕರ್ನಾಟಕ ರಾಮಕೃಷ್ಣ-ವಿವೇಕಾನಂದ ಭಾವಪ್ರಚಾರ ಪರಿಷತ್ತಿನ 11ನೇ ವಾರ್ಷಿಕ ಸಮ್ಮೇಳನ ಉದ್ಘಾಟನೆ. | Kannada Prabha

ಸಾರಾಂಶ

ವಿವೇಕಾನಂದರಂತೆ ಯುವಕರು ಆತ್ಮವಿಶ್ವಾಸ, ತ್ಯಾಗ ಮತ್ತು ಸೇವಾಮನೋಭಾವ ಹೊಂದಿದ್ದರೆ ಮತ್ತು ಸಕಾರಾತ್ಮಕ ಕಾರ್ಯ, ನಾವೀನ್ಯತೆ, ರಾಷ್ಟ್ರೀಯ ಸೇವೆಗೆ ತಮ್ಮ ಶಕ್ತಿ ವಿನಿಯೋಗಿಸಿದರೆ ಭಾರತ ಮತ್ತೊಮ್ಮೆ ವಿಶ್ವಗುರು ಆಗಬಹುದು ಎಂದು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ ಹೇಳಿದರು.

ಧಾರವಾಡ:

ಭಾರತ ಆಧ್ಯಾತ್ಮಿಕವಾಗಿ ಜಾಗೃತಗೊಳ್ಳವುದು, ಸಾಂಸ್ಕೃತಿಕವಾಗಿ ಬಲಿಷ್ಠ ಮತ್ತು ಆಧುನಿಕ ಪ್ರಗತಿಯಿಂದ ಸಮೃದ್ಧವಾಗಬೇಕೆಂದು ಸ್ವಾಮಿ ವಿವೇಕಾನಂದರು ಬಯಸಿದ್ದರು. ಯುವಜನತೆ ಅವರ ಆದರ್ಶವನ್ನು ಜೀವನ ಮಂತ್ರವನ್ನಾಗಿಸಿ ದೇಶದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕು ಎಂದು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಹೇಳಿದರು.

ಇಲ್ಲಿಯ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಲ್ಲಿ ಧಾರವಾಡ ರಾಮಕೃಷ್ಣ ವಿವೇಕಾನಂದ ಆಶ್ರಮದಿಂದ ಶುಕ್ರವಾರ ಆಯೋಜಿಸಿದ್ದ ಕರ್ನಾಟಕ ರಾಮಕೃಷ್ಣ-ವಿವೇಕಾನಂದ ಭಾವಪ್ರಚಾರ ಪರಿಷತ್ತಿನ 11ನೇ ವಾರ್ಷಿಕ ಸಮ್ಮೇಳನ ಉದ್ಘಾಟಿಸಿದ ಅವರು, ವಿವೇಕಾನಂದರಂತೆ ಯುವಕರು ಆತ್ಮವಿಶ್ವಾಸ, ತ್ಯಾಗ ಮತ್ತು ಸೇವಾಮನೋಭಾವ ಹೊಂದಿದ್ದರೆ ಮತ್ತು ಸಕಾರಾತ್ಮಕ ಕಾರ್ಯ, ನಾವೀನ್ಯತೆ, ರಾಷ್ಟ್ರೀಯ ಸೇವೆಗೆ ತಮ್ಮ ಶಕ್ತಿ ವಿನಿಯೋಗಿಸಿದರೆ ಭಾರತ ಮತ್ತೊಮ್ಮೆ ವಿಶ್ವಗುರು ಆಗಬಹುದು ಎಂದರು.

ದೇವರ ಮೇಲಿನ ಆಳವಾದ ಭಕ್ತಿ ಮತ್ತು ಆಧ್ಯಾತ್ಮಿಕ ಅಭ್ಯಾಸವು ರಾಮಕೃಷ್ಣ ಪರಮಹಂಸರಿಗೆ "ಪರಮಹಂಸ " ಎಂಬ ಬಿರುದು ತಂದುಕೊಟ್ಟಿತು. ಅವರು ತಾಯಿ ಕಾಳಿಯ ಆರಾಧನೆ ಮೂಲಕ ಅಂತಿಮ ಸತ್ಯ ಅರಿತುಕೊಂಡರು. ರಾಮಕೃಷ್ಣರು ಆತ್ಮಸಾಕ್ಷಾತ್ಕಾರದ ಪ್ರಕಾಶಮಾನವಾದ ಸೂರ್ಯನಾಗಿದ್ದರು. ತಮ್ಮ ಜೀವನದ ಮೂಲಕ ಶುದ್ಧತೆ, ತಾಳ್ಮೆ ಮತ್ತು ನಿಸ್ವಾರ್ಥ ಪ್ರೀತಿ, ನಿಜವಾದ ಧರ್ಮ ರೂಪಿಸುತ್ತದೆ ಎಂದು ಕಲಿಸಿದರು. ನೀವು ಶಾಂತಿ ಬಯಸಿದರೆ, ಇತರರಲ್ಲಿ ತಪ್ಪು ಕಂಡುಹಿಡಿಯಬೇಡಿ ಎಂಬ ಅವರ ಮಾತುಗಳು ಇಂದಿಗೂ ಪ್ರಸ್ತುತ ಎಂದು ಹೇಳಿದರು.

ವಿವೇಕಾನಂದರು ತಮ್ಮ ಗುರುಗಳ ಸಂದೇಶವನ್ನು ದಕ್ಷಿಣೇಶ್ವರದ ಸಣ್ಣ ದೇವಾಲಯದಿಂದ ಚಿಕಾಗೋದ ವಿಶ್ವ ಧರ್ಮ ಸಂಸತ್ತಿನ ವೇದಿಕೆಗೆ ಕೊಂಡೊಯ್ದರು ಎಂದ ಅವರು, ಸಮಾಜದಲ್ಲಿ ಭೌತಿಕ ಪ್ರಗತಿ ಜತೆಗೆ ಮಾನಸಿಕ ಅಶಾಂತಿ ಹೆಚ್ಚುತ್ತಿರುವಾಗ, ಈ ಮಹಾನ್ ವ್ಯಕ್ತಿಗಳ ಸಂದೇಶಗಳು ನಮಗೆ ಮಾರ್ಗದರ್ಶನ ನೀಡುತ್ತವೆ ಎಂದು ರಾಜ್ಯಪಾಲರು ಹೇಳಿದರು.

ನಾನು ಎಂಬ ಸಂಸ್ಕೃತಿ ತೊಲಗಲಿ:

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ''''''''ಧರ್ಮ ಅಂದರೆ, ಪೂಜಾ ಪದ್ಧತಿ ಅಲ್ಲ'''''''' ಎಂದ ವಿವೇಕಾನಂದರು ಭಾರತಮಾತೆ ಪೂಜಿಸಲು ಹೇಳಿದ ಶ್ರೇಷ್ಠ ಸಂತ. ಆದರೆ, ಇಂದು ಭಾರತಮಾತೆ ವಿರೋಧಿಸುವ ಮನಸ್ಥಿತಿ ಬೆಳೆದಿವೆ ಎಂದು ಬೇಸರ ವ್ಯಕ್ತಪಡಿಸಿದರು.

ದೇಶದಲ್ಲಿ ಭಾರತಮಾತೆ ವಿರೋಧಿಸುವ ಹಾಗೂ ನಾನು ಎಂಬ ಮನೋಭಾವವೂ ಹೆಚ್ಚುತ್ತಿದೆ. ಇದರಿಂದ ದೇಶದಲ್ಲಿ ಭಯೋತ್ಪಾದನೆಯೂ ಹೆಚ್ಚುತ್ತಿದೆ. ಹೀಗಾಗಿ ನಾನು ಎಂಬ ಸಂಸ್ಕೃತಿ ತೊಲಗಿಸಿ ನಾವು ಎಂಬ ಸಂಸ್ಕೃತಿ ಬಿತ್ತಬೇಕಿದೆ ಎಂದು ಹೇಳಿದರು.

ಮೈಸೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಮುಕ್ತಿದಾನಂದಜಿ ಮಹಾರಾಜ್‌ ಸ್ಮರಣ ಸಂಚಿಕೆ ಹಾಗೂ ಹುಬ್ಬಳ್ಳಿ ಮೂರು ಸಾವಿರ ಮಠದ ಡಾ. ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ಪುಸಕ್ತ ಬಿಡುಗಡೆ ಮಾಡಿದರು. ಗದುಗಿನ ಸ್ವಾಮಿ ನಿರ್ಭಯಾನಂದ ಸರಸ್ವತಿ ಆಶಯ ನುಡಿದರು. ವೇದಿಕೆಯಲ್ಲಿ ಸ್ವಾಮಿ ಅನುಪಮಾನಂದ, ಸ್ವಾಮಿ ತ್ಯಾಗೀಶ್ವರಾನಂದ, ಸ್ವಾಮಿ ಬೋಧಸ್ವರೂಪಾನಂದ, ಶಾಸಕ ಅರವಿಂದ ಬೆಲ್ಲದ, ಮಾಜಿ ಶಾಸಕ ಡಿ.ಆರ್. ಪಾಟೀಲ, ಮೇಯರ್ ಜ್ಯೋತಿ ಪಾಟೀಲ, ಜಿಲ್ಲಾಧಿಕಾರಿ ದಿವ್ಯಪ್ರಭು ಇದ್ದರು. ಸ್ವಾಮಿ ವಿಜಯಾನಂದ ಸರಸ್ವತಿ ಸ್ವಾಗತಿಸಿದರು. ಸ್ವಾಮಿ ಪ್ರಕಾಶನಂದ ಮಹಾರಾಜ್ ನಿರೂಪಿಸಿದರು. ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ. ಡಬ್ಲ್ಯೂ.ಪಿ. ಕೃಷ್ಣ ವಂದಿಸಿದರು.ಸಮ್ಮೇಳನವು ಆಧುನಿಕ ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಜೀವನಕ್ಕೆ ಹೊಸ ದಿಕ್ಕನ್ನು ನೀಡಿದ ರಾಮಕೃಷ್ಣ ಪರಮಹಂಸ, ತಾಯಿ ಶಾರದಾ ದೇವಿ ಮತ್ತು ವಿವೇಕಾನಂದರ ಆದರ್ಶಗಳಿಗೆ ಸಮರ್ಪಿತವಾಗಿದೆ. ಕಳೆದ ಒಂದು ದಶಕದಿಂದ, ರಾಮಕೃಷ್ಣ-ವಿವೇಕಾನಂದ ಭಾವಪ್ರಚಾರ ಪರಿಷತ್ತು ಕರ್ನಾಟಕದ ಮೂಲೆ ಮೂಲೆಗಳಲ್ಲಿ ಇಂತಹ ಸಮ್ಮೇಳನ ಮಾಡುತ್ತಿದೆ. ರಾಮಕೃಷ್ಣ-ವಿವೇಕಾನಂದ ಭಾವಪ್ರಚಾರ ಪರಿಷತ್ತು ಕೇವಲ ಒಂದು ಸಂಸ್ಥೆ ಮಾತ್ರವಲ್ಲದೆ ಪ್ರಜ್ಞೆ ಮತ್ತು ಜಾಗೃತಿಯ ಚಳವಳಿಯಾಗಿದೆ.

ಥಾವರ್‌ಚಂದ್ ಗೆಹಲೋತ್‌ ರಾಜ್ಯಪಾಲರು

PREV

Recommended Stories

ಸ್ವಸ್ಥ ಶರದ್ ಋತು ಪ್ರಕೃತಿಯ ಲಯದಲ್ಲಿ ಸ್ವಸ್ಥತೆ ! ಶರದ್ ಋತುವಿನ ಆಹಾರ ಮತ್ತು ದಿನಚರ್ಯೆ
ನಟ ದರ್ಶನ್‌ಗೆ ಜೈಲಿನಲ್ಲಿ ಹರಿದ ಚಾದರ : ವಕೀಲರ ವಾದ