ಬಳ್ಳಾರಿ: ನಾವೆಲ್ಲ ಭಾರತೀಯರು ಎಂಬ ಭಾವ ಪ್ರತಿಯೊಬ್ಬರಲ್ಲೂ ಮೂಡಬೇಕು. ಜಾತಿ, ಮತ, ಪಂಥ, ಭೇದ-ಭಾವ ಮರೆತು ಭಾರತದ ಐಕ್ಯತೆಗಾಗಿ ಶ್ರಮಿಸಬೇಕು ಎಂದು ವಿಧಾನಪರಿಷತ್ ಸದಸ್ಯ ವೈ.ಎಂ.ಸತೀಶ್ ಕರೆ ನೀಡಿದರು.
ಭಾರತದ ಮೊದಲ ಉಪಪ್ರಧಾನ ಮಂತ್ರಿ ಹಾಗೂ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಭಾರತದ ‘ಉಕ್ಕಿನ ಮನುಷ್ಯ’ ಎಂದೇ ಪ್ರಖ್ಯಾತರಾಗಿದ್ದರು. ಭಾರತದ 550ಕ್ಕೂ ಹೆಚ್ಚು ರಾಜಪ್ರಭುತ್ವದ ರಾಜ್ಯಗಳನ್ನು ಭಾರತಕ್ಕೆ ಸೇರಿಸುವಲ್ಲಿ ಮುಖ್ಯ ಪಾತ್ರವಹಿಸಿದ್ದರು.
ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ ಮಾತನಾಡಿ, ಹಲವು ತ್ಯಾಗ-ಬಲಿದಾನಗಳಿಂದ ನಮಗೆ ಸ್ವಾತಂತ್ರ್ಯ ಲಭಿಸಿದೆ. ಅದನ್ನು ಉಳಿಸಿಕೊಳ್ಳುವ ಮತ್ತು ಬೆಳೆಸುವ ಕೆಲಸವಾಗಬೇಕು. ಇಂದಿನ ಯುವ ಪೀಳಿಗೆ ಉನ್ನತ ಮಟ್ಟದ ಸ್ಥಾನ ಹೊಂದುವ ಮೂಲಕ ಸ್ವ-ದೇಶದಲ್ಲಿಯೇ ದುಡಿಯಬೇಕು. ದೇಶದ ಜಿಡಿಪಿ ಹೆಚ್ಚಳಕ್ಕೆ ಕಾರಣೀಭೂತರಾಗಬೇಕು ಎಂದರು.ಗಮನಸೆಳೆದ ಏಕತಾ ನಡಿಗೆ:ಕಾರ್ಯಕ್ರಮಕ್ಕೂ ಮುನ್ನ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 150ನೇ ಜನ್ಮ ದಿನಾಚರಣೆ ಅಂಗವಾಗಿ ನಗರದಲ್ಲಿ ಪ್ರಮುಖ ಬೀದಿಗಳಲ್ಲಿ ಜರುಗಿದ ಏಕತಾ ನಡಿಗೆ ಜನರ ಗಮನಸೆಳೆಯಿತು.
ಏಕತಾ ನಡಿಗೆಯಲ್ಲಿ ವಿವಿಧ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಒಳಗೊಂಡಂತೆ ಸಹಸ್ರಾರು ಜನ ಭಾಗವಹಿಸಿದ್ದು ವಿಶೇಷವಾಗಿತ್ತು. ನಡಿಗೆಗೆ ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್, ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಪಿ. ಗಾದೆಪ್ಪ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.ನಡಿಗೆಯು ನಗರದ ಡಾ. ರಾಜ್ ಕುಮಾರ್ ರಸ್ತೆಯ ಸರ್ಕಾರಿ (ಮಾ.ಪು) ಪದವಿಪೂರ್ವ ಕಾಲೇಜು ಮೈದಾನದಿಂದ ಆರಂಭಗೊಂಡು ಗಡಿಗಿ ಚೆನ್ನಪ್ಪ ವೃತ್ತ- ಬೆಂಗಳೂರು ರಸ್ತೆ- ಹಳೆಯ ಬ್ರೂಸ್ ಪೇಟೆ ಪೊಲೀಸ್ ಠಾಣೆಯ ಮುಂಭಾಗ- ಎಚ್.ಆರ್. ಗವಿಯಪ್ಪ ವೃತ್ತ- ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ವೇದಿಕೆ ಕಾರ್ಯಕ್ರಮದ ವರೆಗೆ ನಡೆಯಿತು.
ಈ ವೇಳೆ ಮೇರಾ ಯುವ ಭಾರತ್ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಸಂಜೀವ್ ಬೊಕ್ಕೆ, ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯ ಎನ್‌ಎಸ್‌ಎಸ್ ಘಟಕದ ಯೋಜನಾಧಿಕಾರಿ ಡಾ. ಕುಮಾರ್, ಮಹಾನಗರ ಪಾಲಿಕೆ ಸದಸ್ಯರಾದ ಶ್ರೀನಿವಾಸ್ ಮೋತ್ಕಾರ್, ಸುರೇಖಾ ಮಲ್ಲನಗೌಡ, ಕೆ.ಎ. ರಾಮಲಿಂಗಪ್ಪ, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಚ್. ಹನುಮಂತಪ್ಪ, ಡಾ. ಮಹಿಪಾಲ್, ಜಿಲ್ಲಾ ಸಂಚಾಲಕರಾದ ಅನಿಲ್ ಕುಮಾರ್ ಮೋಕಾ, ಅಡವಿಸ್ವಾಮಿ, ಹುಲುಗಮ್ಮ,ಪುಷ್ಪಲತಾ, ಎಂ.ಎಸ್. ಸುಂಕಪ್ಪ ಉಪಸ್ಥಿತರಿದ್ದರು.