)
ಕನ್ನಡಪ್ರಭ ವಾರ್ತೆ ಹಾಸನ
ಮೀಸಲಾತಿ ನಿಗದಿ ಪ್ರಕ್ರಿಯೆಯು ಸಂಪೂರ್ಣವಾಗಿ ಚುನಾವಣಾ ಆಯೋಗದ ವ್ಯಾಪ್ತಿಗೆ ಒಳಪಟ್ಟಿರುವ ಕೆಲಸವಾಗಿದ್ದು, ಈ ಪ್ರಕ್ರಿಯೆಯಲ್ಲಿ ಯಾರೂ ಅನಗತ್ಯವಾಗಿ ಮಧ್ಯಪ್ರವೇಶಿಸುವಂತಿಲ್ಲ ಎಂದು ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಸಂಸದರ ಕಛೇರಿಯಲ್ಲಿ ಮಾಧ್ಯಮ,ದೊಂದಿಗೆ ಮಾತನಾಡಿ, ಗ್ರಾಮ ಪಂಚಾಯಿತಿ ಚುನಾವಣೆ ಮತ್ತು ಮೀಸಲಾತಿಗೆ ಸಂಬಂಧಿಸಿದ ಕಾರ್ಯವನ್ನು ನಿಯಮಾನುಸಾರ ನಡೆಸಲಾಗುತ್ತದೆ. ಇದು ಸಂಪೂರ್ಣವಾಗಿ ಚುನಾವಣಾ ಆಯೋಗ ಮಾಡುವ ಕೆಲಸ. ಇದರಲ್ಲಿ ಯಾರು ಮೂಗು ತೂರಿಸುವಂತಿಲ್ಲ. ಈ ರೀತಿಯ ಸೂಕ್ಷ್ಮ ಹಾಗೂ ಕಾನೂನುಬದ್ಧ ಪ್ರಕ್ರಿಯೆಗಳಲ್ಲಿ ಅಧಿಕಾರಿಗಳು ಅತ್ಯಂತ ಎಚ್ಚರಿಕೆಯಿಂದ ಮತ್ತು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಮೀಸಲಾತಿ ನಿಗದಿಯಲ್ಲಿ ಯಾವುದೇ ಕಾನೂನು ಉಲ್ಲಂಘನೆ ಅಥವಾ ಲೋಪವಾಗಿದೆ ಎಂಬ ಅನುಮಾನವಿದ್ದರೆ ಸಂಬಂಧಪಟ್ಟವರು ಅಧಿಕೃತವಾಗಿ ಅಹವಾಲು ಸಲ್ಲಿಸಬಹುದು. ಕಾನೂನಿನ ಪ್ರಕಾರ ಆಯೋಗಕ್ಕೆ ದೂರು ಸಲ್ಲಿಸಲು ಅವಕಾಶವಿರುವಾಗ ಸಾರ್ವಜನಿಕವಾಗಿ ಆರೋಪಗಳನ್ನು ಮಾಡುವ ಬದಲು ಸೂಕ್ತ ವೇದಿಕೆಯಲ್ಲಿ ಪ್ರಶ್ನಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು. ಮೀಸಲಾತಿ ಪಟ್ಟಿಯ ಸಂಪೂರ್ಣ ವಿವರ ನನಗೆ ವೈಯಕ್ತಿಕವಾಗಿ ತಿಳಿದಿಲ್ಲ. ಆದರೆ ಜಿಲ್ಲಾಧಿಕಾರಿ ಹಾಗೂ ಚುನಾವಣಾ ಆಯೋಗ ಪ್ರಾಮಾಣಿಕವಾಗಿ ಮತ್ತು ಕಾನೂನುಬದ್ಧವಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ವಿಶ್ವಾಸವಿದೆ . ಮೀಸಲಾತಿ ವಿಚಾರದಲ್ಲಿ ಸಾರ್ವಜನಿಕರಲ್ಲಿ ಗೊಂದಲ ಉಂಟುಮಾಡುವ ರೀತಿಯ ಹೇಳಿಕೆಗಳನ್ನು ನೀಡಬಾರದು. ಜನರಿಗೆ ತಪ್ಪು ಮಾಹಿತಿ ನೀಡುವುದನ್ನು ಕಡಿಮೆ ಮಾಡಬೇಕು. ಯಾವುದೇ ವಿಷಯದ ಬಗ್ಗೆ ಸ್ಪಷ್ಟ ಮಾಹಿತಿ ಮತ್ತು ದಾಖಲೆಗಳಿದ್ದರೆ ಅದನ್ನು ಸಂಬಂಧಪಟ್ಟ ಕಾನೂನುಬದ್ಧ ಪ್ರಕ್ರಿಯೆಯ ಮೂಲಕ ಮುಂದಿಡಬೇಕು ಎಂದು ಎಚ್. ಡಿ. ರೇವಣ್ಣ ಅವರಿಗೆ ಸಲಹೆ ನೀಡಿದರು.ರೇವಣ್ಣ ಅವರು ಹಿರಿಯ ಹಾಗೂ ಅನುಭವಿ ರಾಜಕಾರಣಿ. ಅವರು ಬಹಳ ಹಿರಿಯರು, ಸಾಕಷ್ಟು ಅನುಭವ ಹೊಂದಿರುವ ರಾಜಕಾರಣಿ. ಅಂತಹವರು ಇನ್ನಷ್ಟು ಜವಾಬ್ದಾರಿಯಿಂದ ಮಾತನಾಡಬೇಕು. ಜಿಲ್ಲಾಧಿಕಾರಿ ಎಂಬುದು ಅತ್ಯಂತ ಗೌರವಾನ್ವಿತ ಹುದ್ದೆ. ಆ ಹುದ್ದೆಯ ಗೌರವವನ್ನು ಪ್ರತಿಯೊಬ್ಬರೂ ಕಾಪಾಡಬೇಕು ಎಂದು ಹೇಳಿದರು.