೨೦೨೬ಕ್ಕೆ ಇರಲಿ ೨೬ ನಿರ್ಣಯಗಳು: ಡಾ.ಮುರಲೀ ಮೋಹನ್ ಚೂಂತಾರು

KannadaprabhaNewsNetwork |  
Published : Jan 06, 2026, 04:30 AM IST
ಡಾ.ಮುರಲೀ ಮೋಹನ ಚೂಂತಾರು  | Kannada Prabha

ಸಾರಾಂಶ

ಈ ಹಿಂದೆ ನಾವು ನಿರ್ಣಯ ಮಾಡಿ ಪೂರೈಸಲಾಗದ ನಿರ್ಣಯಗಳನ್ನೇ ೨೦೨೬ ರಲ್ಲಿ ಈಡೇರಿಸುವ ಹೊಸ ಹುರುಷ, ಉತ್ಸಾಹ ಮತ್ತು ಹುಮ್ಮಸ್ಸಿನಿಂದ ಮುಂದಡಿ ಇಡೋಣ ಗೆಳೆಯರೆ ಎಂದು ಹೊಸಂಗಡಿಯ ಸುರಕ್ಷ ದಂತ ಚಿಕಿತ್ಸಾಲಯದ ಬಾಯಿ ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಕ ಡಾ. ಮುರಲೀ ಮೋಹನ್ ಚೂಂತಾರು ಈ ಬರೆಹದಲ್ಲಿ ಆಶಿಸಿದ್ದಾರೆ.

೨೦೨೫ ಮುಗಿದಿದೆ. ಈಗ ಮತ್ತೊಂದು ವರ್ಷದ ಮಗ್ಗುಲಿಗೆ ನಾವು ಹೊಸ ಭರವಸೆ, ಆಕಾಂಕ್ಷೆ ಮತ್ತು ನಿರೀಕ್ಷೆಗಳ ಮೂಟೆ ಹೊತ್ತುಕೊಂಡು ಉತ್ಸಾಹದಿಂದ ಕಾಲಿಡಲು ಕಾಯುತ್ತಿದ್ದೇವೆ. ಹೊಸ ಆಶಾಭಾವದೊಂದಿಗೆ ಹೊಸ ವರುಷ ೨೦೨೬ನ್ನು ನಾವೆಲ್ಲ ಸ್ವಾಗತಿಸೋಣ ಮತ್ತು ಹೊಸ ಹೊಸ ನಿರ್ಣಯಗಳನ್ನು ಅಥವಾ ರೆಸಲ್ಯೂಷನ್‍ಗಳನ್ನು ಮಾಡಿ ಹಳೆ ಹಳಸಿದ ವಿಚಾರಗಳನ್ನೆಲ್ಲಾ ಮುಂದಿಟ್ಟುಕೊಳ್ಳುವ ಬದಲು ಈ ಹಿಂದೆ ನಾವು ನಿರ್ಣಯ ಮಾಡಿ ಪೂರೈಸಲಾಗದ ನಿರ್ಣಯಗಳನ್ನೇ ೨೦೨೬ ರಲ್ಲಿ ಈಡೇರಿಸುವ ಹೊಸ ಹುರುಷ, ಉತ್ಸಾಹ ಮತ್ತು ಹುಮ್ಮಸ್ಸಿನಿಂದ ಮುಂದಡಿ ಇಡೋಣ ಗೆಳೆಯರೆ.೨೦೨೬ಕ್ಕೆ ಇರಲಿ ೨೬ ನಿರ್ಣಯಗಳು!

1. ಆರೋಗ್ಯವೇ ಭಾಗ್ಯ, ಆರೋಗ್ಯಕ್ಕಿಂತ ಮಿಗಿಲಾದ ವಸ್ತು ಇನ್ನೊಂದಿಲ್ಲ. ನಮ್ಮ ಆರೋಗ್ಯಕ್ಕೆ ಮಾರಕವಾಗುವ ಯಾವುದೇ ಚಟ, ಚಿಂತನೆ ಮತ್ತು ಚಟುವಟಿಕೆಗಳಿಗೆ ತಿಲಾಂಜಲಿ ಇಡೋಣ.

2. ದಿನನಿತ್ಯ ಕನಿಷ್ಠ ಅರ್ಧ ಗಂಟೆ ಬಿರುಸು ನಡಿಗೆ ಮಾಡೋಣ. ಇದು ಅತಿ ಸುಲಭ, ಖರ್ಚಿಲ್ಲದ ಮತ್ತು ಲಾಭದಾಯಕ ವ್ಯಾಯಾಮ.3. ದಿನವೊಂದಕ್ಕೆ ಕನಿಷ್ಟ ಪಕ್ಷ 2 ರಿಂದ 3 ಲೀಟರ್ ನೀರು ಕುಡಿಯೋಣ. ನೀರು ನಾವು ಸೇವಿಸಬಹುದಾದ ಅತೀ ಉತ್ತಮ ನೈಸರ್ಗಿಕ ಪೇಯವಾಗಿರುತ್ತದೆ. ಇದು ಜೀವ ಕೋಶಕೋಶಗಳ ಆರೋಗ್ಯಕ್ಕೆ ಅತೀ ಅಗತ್ಯ.4. ಪ್ರತಿದಿನ ದೈಹಿಕ ಚಟುವಟಿಕೆಗಳಿಗೆ ಒತ್ತು ನೀಡುವ ಯಾವುದಾದರೊಂದು ಆಟವನ್ನು ಆಯ್ಕೆ ಮಾಡಿಕೊಂಡು ನಿರಂತರವಾಗಿ ಮಾಡೋಣ ಅದು ಟೆನಿಸ್, ಬ್ಯಾಡ್ಮಿಂಟನ್, ಈಜು, ಮ್ಯಾರಥಾನ್, ವಾಲಿಬಾಲ್, ಶಟಲ್, ಯಾವುದಾದರೂ ತೊಂದರೆಯಿಲ್ಲ. 5. ಕರಿದ ತಿಂಡಿಗಳು ಮತ್ತು ಜಂಕ್ ಫುಡ್‍ಗಳಿಂದ ದೂರವಿರೋಣ.

6. ಮದ್ಯಪಾನ ಮತ್ತು ಧೂಮಪಾನದ ಸಹವಾಸ ಬೇಡವೇ ಬೇಡ. ಅಂತಹ ಚಟಗಳಿದ್ದಲ್ಲಿ ಇಂದೇ ತಿಲಾಂಜಲಿ ಇಟ್ಟು ಬಿಡಿ.7. ಉತ್ತಮ ಪುಸ್ತಕ ಓದುವ ಹವ್ಯಾಸ ಇಟ್ಟುಕೊಳ್ಳೋಣ. ಕನಿಷ್ಠ ದಿನವೊಂದಕ್ಕೆ ಅರ್ಧ ಗಂಟೆ ಓದುವ ಹವ್ಯಾಸ ಮಾಡಿಕೊಳ್ಳೋಣ.8. ಪ್ರತಿ ದಿನ ಕನಿಷ್ಠ ಅರ್ಧ ಗಂಟೆ ಪ್ರಾಣಾಯಾಮ ಯೋಗ ಮಾಡುವ ಹವ್ಯಾಸ ಬೆಳಸಿಕೊಳ್ಳೋಣ. ಇದು ಅತೀ ಅಗತ್ಯದ ಮತ್ತು ಅನಿವಾರ್ಯವಾದ ಪ್ರಕ್ರೆಯೆಯಾಗಿರಲಿ.9. ದಿನವೊಂದಲ್ಲಿ ಅರ್ಧ ಗಂಟೆ ಸಂಗೀತ ಆಲಿಸುವುದು ಅಥವಾ ಧ್ಯಾನ ಮಾಡುವುದನ್ನು ರೂಡಿಸಿಕೊಳ್ಳೋಣ. ಓದುವಿಕೆ, ಆಲಿಸುವಿಕೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿರಲಿ.10. ಮಾತು ಕಡಿಮೆ ಮಾಡೋಣ. ನಾವು ಮಾತನಾಡುವಾಗ ನಮಗೆ ಗೊತ್ತಿರುವ ವಿಚಾರವನ್ನು ಹೇಳುತ್ತಿರುತ್ತೇವೆ. ನಾವು ಹೆಚ್ಚು ಕೇಳುವ ಅಭ್ಯಾಸ ಮಾಡಿದರೆ ನಮಗರಿವಿಲ್ಲದ ನಮಗೆ ಗೊತ್ತಿರದ ಹತ್ತು ಹಲವು ವಿಚಾರ ನಮಗೆ ದೊರಕುತ್ತದೆ.

11. ದಿನದಲ್ಲಿ ಕನಿಷ್ಠ 6 ರಿಂದ 7 ಗಂಟೆ ನಿದ್ರೆ ಮಾಡೋಣ. ನಿದ್ರಾಹೀನತೆಯಿಂದ ನೂರಾರು ಸಮಸ್ಯೆಗಳು ಉದ್ಭವಿಸುತ್ತದೆ. 12. ಆಧುನಿಕ ಜಗತ್ತಿನ ಅನಿವಾರ್ಯ ಸಾಧನಗಳಾದ ಮೊಬೈಲ್ ಮತ್ತು ಕಂಪ್ಯೂಟರ್ ಬಳಕೆಯನ್ನು ನಿಯಂತ್ರಿಸೋಣ. ದಿನವೊಂದಕ್ಕೆ ೧೦ ಘಂಟೆಗಳ ಕಾಲ ಮೊಬೈಲ್ ಉಪವಾಸ ಮಾಡೋಣ.13. ನಮ್ಮ ದೈನಂದಿನ ಆಹಾರದಲ್ಲಿ ಕನಿಷ್ಠ 30 ಶೇಕಡಾ ನಾರಿನಂಶ ಇರುವ ರೀತಿಯಲ್ಲಿ ಆಹಾರ ಸೇವಿಸೋಣ.14. ಸಮತೋಲಿತ ಆಹಾರಕ್ಕೆ ಹೆಚ್ಚಿನ ಆದ್ಯತೆ ನೀಡೋಣ. ಪ್ರೋಟೀನ್, ಲವಣ, ಪೋಷಕಾಂಶ, ಖನಿಜಾಂಶ ಮತ್ತು ವಿಟಮಿನ್‍ಯುಕ್ತ ಆಹಾರಕ್ಕೆ ಹೆಚ್ಚಿನ ಆದ್ಯತೆ ಕೊಡೋಣ.15. ಪ್ರತಿದಿನ ತಾಜಾ ಹಣ್ಣುಗಳನ್ನು ಸೇವಿಸೋಣ. ನಮ್ಮ ಆಹಾರದಲ್ಲಿ ಹಸಿರು ತರಕಾರಿ ಮತ್ತು ಸೊಪ್ಪು ತರಕಾರಿಗಳಿಗೆ ಹೆಚ್ಚಿನ ಆದ್ಯತೆ ಕೊಡೋಣ. 16. ಕೃತಕ ಪೇಯಗಳಾದ ಕೋಕ್, ಪೆಪ್ಸಿ ಅಥವಾ ಇನ್ನಾವುದೇ ರಾಸಾಯನಿಕಯುಕ್ತ ಇಂಗಾಲಯುಕ್ತ ಪೇಯಗಳನ್ನು ತ್ಯಜಿಸೋಣ. 17. ನೈಸರ್ಗಿಕ ಪೇಯಗಳಾದ ಮಜ್ಜಿಗೆ ನೀರು, ಎಳನೀರು, ಕಬ್ಬಿನ ಹಾಲುಗಳನ್ನು ಸೇವಿಸೋಣ.18. ಕಾಫಿ, ಚಹಾ ಮತ್ತು ಇತರ ಶಕ್ತಿ ವರ್ಧಕ ಪೇಯಗಳನ್ನು ಅತೀ ಕಡಿಮೆ ಬಳಕೆ ಮಾಡೋಣ.19. ಬಿಳಿ ವಿಷಗಳಾದ ಸಕ್ಕರೆ ಮತ್ತು ಉಪ್ಪಿನ ಅಂಶವನ್ನು ಅತೀ ಕಡಿಮೆ ಬಳಸುವ ಶಪಥ ಮಾಡೋಣ.20. ದ್ವೇಷದಿಂದ ಜಗತ್ತನ್ನು ಗೆಲ್ಲಲು ಸಾಧ್ಯವೇ ಇಲ್ಲ. ಪ್ರೀತಿಯಿಂದ ಜಗತ್ತನ್ನು ಗೆಲ್ಲಲು ಸಾಧ್ಯವಿದೆ. ಸಾಧ್ಯವಾದಷ್ಟು ಎಲ್ಲರನ್ನೂ ಪ್ರೀತಿಸೋಣ.21. ನಾವು ಮಾಡುವ ಕೆಲಸದಲ್ಲಿ ಒತ್ತಡ ರಹಿತವಾದ ವಾತವರಣ ಇರುವಂತೆ ವ್ಯವಹರಿಸೋಣ. ನಾವು ಮಾಡುವ ಕೆಲಸ ನಮಗೆ ಬರೀ ಒತ್ತಡ ನೀಡಿ ಸಂತಸ ಹಾಳು ಮಾಡಿದ್ದಲ್ಲಿ ಅಂತಹ ಕೆಲಸವನ್ನು ತ್ಯಜಿಸೋಣ.22. ಪ್ರತಿ ಆರು ತಿಂಗಳಿಗೊಮ್ಮೆ ವೈದ್ಯರನ್ನು ಭೇಟಿ ಮಾಡೋಣ. ಅವರೊಂದಿಗೆ ನಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳೋಣ. ಬರೀ ಜ್ವರ, ಮಧುಮೇಹ ಅಥವಾ ರಕ್ತದೊತ್ತಡ ಇದ್ದವರು ಮಾತ್ರ ವೈದ್ಯರ ಬಳಿ ಹೋಗಬೇಕು ಎಂಬ ಮನೋಭಾವ ತ್ಯಜಿಸೋಣ.23. ಅನಗತ್ಯವಾಗಿ ಎಲ್ಲರೊಂದಿಗೆ ಕಾಲು ಕೆರೆದು ಜಗಳವಾಡದಿರೋಣ.ಇತರರ ಮುಂದೆ ನಮ್ಮ ಭಾಷಾ ಪಾಂಡಿತ್ಯ ಪ್ರೌಢಿಮೆ, ಸಂಪತ್ತು ಮತ್ತು ಅಹಂಕಾರವನ್ನು ಅನಗತ್ಯವಾಗಿ ಪ್ರದರ್ಶಿಸದಿರೋಣ.೨೪ ಕುಟುಂಬ, ಬಂದು ಬಳಗಕ್ಕೆ ಹೆಚ್ಚು ಆದ್ಯತೆ ನೀಡೋಣ.೨೫. ದಿನದಲ್ಲಿ ಕನಿಷ್ಠ ೩೦ ನಿಮಿಷ ಮನ ಬಿಚ್ಚಿ ನಗೋಣ.೨೬. ಒತ್ತಡ ರಹಿತ ಜೀವನಕ್ಕೆ ಮನಸ್ಸು ಮಾಡೋಣ. ಕೆಲಸದೊತ್ತಡ ಎಂಬುವುದು ಒಂದು ಕುಂಟು ನೆಪ ಅಷ್ಟೇ. ಉತ್ತಮ ಹವ್ಯಾಸ ಮತ್ತು ಸ್ನೇಹಿತರನ್ನು ಬೆಳಸಿಕೊಂಡರೆ ಒತ್ತಡ ಆಗುವುದೇ ಇಲ್ಲ. ನಾವು ಉತ್ತಮ ಹವ್ಯಾಸ ಬೆಳಸಿಕೊಂಡಲ್ಲಿ ನಮ್ಮ ಮಕ್ಕಳು ಉತ್ತಮ ಹವ್ಯಾಸ ರೂಡಿಸಿಕೊಳ್ಳುತ್ತಾರೆ ಮತ್ತು ಮುಂಬರುವ ೨೦೨೬ ನಮಗೆಲ್ಲ ಹೊಸ ಹರುಷ ತರಲಿ ಮತ್ತು ಆರೋಗ್ಯ ಪೂರ್ಣವಾಗಿರಲಿ ಎಂದು ಹಾರೈಸೋಣ.

-----------------------

-ಡಾ. ಮುರಲೀ ಮೋಹನ್ ಚೂಂತಾರು, ಬಾಯಿ ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಕರು, ಸುರಕ್ಷಾ ದಂತ ಚಿಕಿತ್ಸಾಲಯ ಹೊಸಂಗಡಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ