ಕನ್ನಡಪ್ರಭ ವಾರ್ತೆ ದಾವಣಗೆರೆ
ಪರಿಶಿಷ್ಟ ಜಾತಿಯಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ಒಳ ಮೀಸಲಾತಿ ಜಾರಿಗೊಳಿಸುವುದಾದರೆ ಮೊದಲು ಜಾತಿಗಣತಿ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ, ಹಿರಿಯ ವಕೀಲ ಎನ್.ಜಯದೇವ ನಾಯ್ಕ ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದ್ದಾರೆ.ನಗರದ ಚಿಗಟೇರಿ ಲೇಔಟ್‌ನ ಜಿಲ್ಲಾ ಬಂಜಾರ ಭವನದಲ್ಲಿ ಭಾನುವಾರ ಜಿಲ್ಲಾ ಬಂಜಾರ (ಲಂಬಾಣಿ) ಸೇವಾ ಸಂಘ ಹಮ್ಮಿಕೊಂಡಿದ್ದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಗಣ್ಯರಿಗೆ ಸನ್ಮಾನ ಸಮಾರಂಭದಲ್ಲಿ ಸನ್ಮಾನಿತರಾಗಿ ಮಾತನಾಡಿ, ನ್ಯಾಯಾಲಯದ ಆದೇಶದಂತೆ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ತರುವುದಿದ್ದರೆ, ಮೊದಲು ಜಾತಿಗಣತಿ ಕೈಗೊಳ್ಳಲು ಸರ್ಕಾರ ಮುಂದಾಗಬೇಕು ಎಂದರು.
ಏಳು ಜನ ನ್ಯಾಯಾಧೀಶರನ್ನು ಒಳಗೊಂಡ ನ್ಯಾಯಪೀಠ ಒಳಮೀಸಲಾತಿ ಜಾರಿಗೊಳಿಸುವ ಅಧಿಕಾರವನ್ನು ಆಯಾ ರಾಜ್ಯ ಸರ್ಕಾರಕ್ಕೆ ನೀಡಿದೆ. ಈಗಾಗಲೇ ಪರಿಶಿಷ್ಟ ಜಾತಿ ಮೀಸಲಾತಿಯಡಿ ಉದ್ಯೋಗ ಸೇರಿ ಇತರೆ ಸೌಲಭ್ಯ ಪಡೆದು, ಆರ್ಥಿಕವಾಗಿ ಅಭಿವೃದ್ಧಿಯಾಗಿರುವ ಕೆನೆಪದರ ವ್ಯಕ್ತಿಗಳನ್ನು ಪಟ್ಟಿ ಮಾಡಲು ಸೂಚಿಸಲಾಗಿದೆ. ಕೆಲ ಸಂಸದರು, ಕೇಂದ್ರ ಸಚಿವರು ಪ್ರಧಾನಿಗೆ ಭೇಟಿ ಮಾಡಿ, ಒಳ ಮೀಸಲಾತಿ ಜಾರಿ ಇರಲಿ. ಆದರೆ, ಸಂವಿಧಾನ ಬಾಹಿರವಾದ ಕೆನೆಪದರ ರದ್ದಪಡಿಸುವಂತೆ ಒತ್ತಾಯಿಸಲಿ ಎಂದು ಆಗ್ರಹಿಸಿದರು.ಒಳ ಮೀಸಲಾತಿ ಜಾರಿ ಬಗ್ಗೆ ಸಂವಿಧಾನದ ಯಾವ ಅನುಚ್ಛೇದದಲ್ಲಿ ಉಲ್ಲೇಖವಿದೆ ಎಂಬುದನ್ನು ತೋರಿಸಬೇಕು. ಒಳಮೀಸಲಾತಿಯಿಂದ ಕರ್ನಾಟಕದ ಮಟ್ಟಿಗೆ ಎಸ್‌ಟಿ ಪಟ್ಟಿ 101 ಜಾತಿಗಳ ಪೈಕಿ ಎಡಗೈ ಮತ್ತು ಬಲಗೈ ಸಮುದಾಯಕ್ಕೆ ಅನುಕೂಲವಾದರೆ, ಉಳಿದ 99 ಜಾತಿಗಳಿಗೆ ಇದು ಆಘಾತ ನೀಡಲಿದೆ. ಹಿಂದಿನ ಬಿಜೆಪಿ ಸರ್ಕಾರವು ಎಡಗೈಗೆ 6, ಬಲಗೈಗೆ 5 ಹಾಗು ಉಳಿದ 99 ಜಾತಿಗಳಿಗೆ ಶೇ.3.5 ಮೀಸಲಾತಿ ವರ್ಗೀಕರಣಮಾಡಿ, ಕೇಂದ್ರಕ್ಕೆ ಶಿಫಾರಸ್ಸು ಮಾಡಿರುವುದೇ ಅವೈಜ್ಞಾನಿಕವಾಗಿದೆ. ಒಂದು ವೇಳೆ ಜಾರಿಗೊಳಿಸುವುದಿದ್ದರೆ ಶೇ.15 ಮೀಸಲಿನಲ್ಲಿ ಎರಡೂ ಸಮುದಾಯಗಳಿಗೆ ತಲಾ ಶೇ.5ರಷ್ಟು ಹಾಗೂ ಉಳಿದ ಜಾತಿಗಳಿಗೆ ಶೇ.5 ಮೀಸಲಾತಿ ನೀಡಲಿ ಎಂದು ಒತ್ತಾಯಿಸಿದರು.
ಒಂದು ವೇಳೆ ಒಳ ಮೀಸಲಾತಿ ಅನುಷ್ಠಾನಗೊಂಡರೆ ಬಂಜಾರ ಸಮುದಾಯಕ್ಕೆ ಕಷ್ಟದ ದಿನಗಳು ಬರಬಹುದು. ಬದುಕುವುದು ಅನಿವಾರ್ಯವಾಗಿದ್ದು, ಸಮಾಜದ ಮಕ್ಕಳು ಉತ್ತಮವಾಗಿ ಓದಿ, ಹೆಚ್ಚು ಅಂಕಪಡೆಯುವ ಮೂಲಕ ಉದ್ಯೋಗ ಗಳಿಸಿಕೊಂಡು, ಬದುಕನ್ನು ಕಟ್ಟಿಕೊಳ್ಳುವ ದೃಢ ಸಂಕಲ್ಪ ಮಾಡಬೇಕು. ರಾಜ್ಯಾದ್ಯಂತ ನಾವು ಪ್ರವಾಸ ಮಾಡಿ, ಜನ ಜಾಗೃತಿಗೊಳಿಸಿ, ಸರ್ಕಾರದ ಮುಂದೆ ನಮ್ಮ ಬೇಡಿಕೆ ಇಡುತ್ತೇವೆ.ಸಮಾಜದ ಸಂಘದವರು 5 ಎಕರೆ ಜಾಗ ನೀಡಿದರೆ, ಲಂಬಾಣಿ ಕಾಲೋನಿ ನಿರ್ಮಿಸಲು ನಿಗಮದಿಂದ ಅನುದಾನ ಒದಗಿಸುವುದಾಗಿ ಜಯದೇವ ನಾಯ್ಕ ಭರವಸೆ ನೀಡಿದರು. ಸನ್ಮಾನಿತರಾದ ದೂಡಾ ನೂತನ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ಮಾತನಾಡಿ, ಬಂಜಾರ ವಿದ್ಯಾರ್ಥಿಗಳು, ಯುವಜನರು ಉತ್ತಮ ಶಿಕ್ಷಣ ಪಡೆದು, ಉನ್ನತ ಅಧಿಕಾರಿಗಳಾಗಿ ಸೇವೆ ಸಲ್ಲಿಸುವಂತಾಗಬೇಕು. ಇನ್ನೊಂದು ತಿಂಗಳಲ್ಲೇ ಸಿಎ ನಿವೇಶನಗಳಿಗಾಗಿ ಅರ್ಜಿ ಆಹ್ವಾನಿಸಲಾಗುವುದು. ಆಗ ಬಂಜಾರ ಸಮುದಾಯದಿಂದ ಅರ್ಜಿ ಸಲ್ಲಿಸಿದರೆ ರಿಯಾಯಿತಿ ದರದಲ್ಲಿ ನಿವೇಶನ ನೀಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಮಾಜಿ ಶಾಸಕ ಎಂ.ಬಸವರಾಜ ನಾಯ್ಕ ಮಾತನಾಡಿ, ಲಂಬಾಣಿ ಸಮುದಾಯದ ಮಕ್ಕಳು ಕೇವಲ ಉತ್ತಮ ಅಂಕ ಪಡೆದರಷ್ಟೇ ಜೀವನದಲ್ಲಿ ಯಶಸ್ಸು ಕಾಣುವುದು ಕಷ್ಟಸಾಧ್ಯ. ತಮ್ಮ ಬುದ್ಧಿಶಕ್ತಿಯಿಂದ ಬದುಕನ್ನು ಕಟ್ಟಿಕೊಳ್ಳುವ ಕೌಶಲ್ಯ ರೂಢಿಸಿಕೊಳ್ಳಬೇಕು. ಐಎಎಸ್, ಐಪಿಎಸ್, ಕೆಎಎಸ್‌ನಂತಹ ಉನ್ನತ ಪರೀಕ್ಷೆಗಳನ್ನು ಬರೆದು, ಉನ್ನತ ಹುದ್ದೆ ಅಲಂಕರಿಸಬೇಕು. ನಿಗಮದ ನೂತನ ಅಧ್ಯಕ್ಷರು ಸೇರಿದಂತೆ ಕಾಂಗ್ರೆಸ್ ಪಕ್ಷದಲ್ಲಿರುವ ಸಮಾಜದ ಮುಖಂಡರು ಸಮುದಾಯಕ್ಕೆ ಆಗಿರುವ ಅನ್ಯಾಯ ಸರಿಪಡಿಸುವಂತೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಬೇಕು ಎಂದು ಕಿವಿಮಾತು ಹೇಳಿದರು.ಸಂಘದ ಅಧ್ಯಕ್ಷ ಎಸ್.ನಂಜಾನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಹೀರಾನಾಯ್ಕ, ಭೋಜ್ಯಾನಾಯ್ಕ, ಬಾಂಬೆ ಕುಮಾರನಾಯ್ಕ, ಡಾ.ವಿಷ್ಣುವರ್ಧನ ದೇವ್ಲಾನಾಯ್ಕ, ಜಿ.ಆರ್.ದೇವೇಂದ್ರ ನಾಯ್ಕ, ತಾರ್ಯಾ ನಾಯ್ಕ, ಗಾಯಕ ಕುಬೇರನಾಯ್ಕ, ಲಕ್ಷ್ಮಣ್ ರಾಮಾವತ್, ಕವಿತಾ ಚಂದ್ರಶೇಖರ, ಮಲ್ಲೇಶ ನಾಯ್ಕ, ಲಿಂಗರಾಜ ನಾಯ್ಕ, ಮಂಜುನಾಯ್ಕ, ಬಸವರಾಜ ನಾಯ್ಕ ಇತರರು ಇದ್ದರು. ಇದೇ ವೇಳೆ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ 43 ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 32 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ, ಗೌರವಿಸಲಾಯಿತು.